ಮಂಡ್ಯ : ಸುಮಲತಾ ಅವರನ್ನು ಮಾಯಾಂಗನೆ ಅಂತ ಕರೆದ ಸಂಸದ ಶಿವರಾಮೇಗೌಡ ಅವರಿಗೆ ರಾಕಿಂಗ್ ಸ್ಟಾರ್ ಯಶ್ ತಿರುಗೇಟು ನೀಡಿದ್ದಾರೆ.
ನಾಲಗೆ ಇದೆ ಅಂತ ಈ ರೀತಿ ಹರಿ ಬಿಡಬಾರದು. ದುರಹಂಕಾರಕ್ಕೆ ಜನ ತಕ್ಕ ಪಾಠ ಕಲಿಸುತ್ತಾರೆ ಅಂದ ಯಶ್, ಅಂಬರೀಶ್ ಇದ್ದಿದ್ರೆ ಬೆರಳು ತೋರಿಸೋ ತಾಕತ್ ಇರುತ್ತಿತ್ತಾ? ಎಂದು ಪ್ರಶ್ನಿಸಿದ್ದಾರೆ.
ಹೆಣ್ಣು ಮಕ್ಕಳಿಗೆ ಗೌರವ ಕೊಡೋದು ನಮ್ಮ ಸಂಸ್ಕೃತಿ. ಅಂಬರೀಶ್ ಅಣ್ಣ ಇಲ್ಲ ಅಂತ ಬಾಯಿಗೆ ಬಂದಂಗೆ ಮಾತಾಡಬಹುದು, ಅವರಿಗೆ ಹೇಳೋರಿಲ್ಲ, ಕೇಳೋರಿಲ್ಲ ಅಂತ ಅನ್ಕೊಂಡಿದ್ರೆ ದಯವಿಟ್ಟು ಬಿಟ್ ಬಿಡ್ಲಿ. ಅವರಿಗೆ ನಾವೆಲ್ಲಾ ಇದ್ದೀವಿ. ಎಲ್ರ ಮನೇಲೂ ಹೆಣ್ಮಕ್ಕಳು ಇರ್ತಾರೆ. ನಮ್ ಮನೆ ಹೆಣ್ಮಕ್ಕಳು ಬಗ್ಗೆ ಮಾತಾಡ್ಬೇಕಾದ್ರೆ ಅವರ ಮನೆ ಹೆಣ್ಮಕ್ಕಳನ್ನು ಒಮ್ಮೆ ನೆನೆಸಿಕೊಳ್ಳಲಿ ಎಂದರು.
ಅಂಬರೀಶ್ ಅಣ್ಣ ಅಭಿಮಾನಿಗಳು ಕರ್ನಾಟಕದೆಲ್ಲೆಡೆ ಇದ್ದಾರೆ. ಮಂಡ್ಯದಲ್ಲಿ ಮನೆಮನೆಯಲ್ಲಿದ್ದಾರೆ. ಅಣ್ಣ ಇಲ್ಲ ಅಂತ ಅವರ ಮನೆ ಹೆಂಗಸರಿಗೆ ಮಾತಾಡಿದ್ರೆ ನೋಡ್ಕೊಂಡು ಸುಮ್ನೆ ಇರಲ್ಲ. ಎಲ್ಲರೂ ಚೆನ್ನಾಗಿ ಇದ್ದವರೇ.. ಎಲೆಕ್ಷನ್ ಬಂದ ತಕ್ಷಣ ಆ ರೀತಿ ಮಾತನಾಡಬಾರದು. ಎಲ್ಲರೂ ಕಾವೇರಿ ನೀರು ಕುಡಿದುಕೊಂಡೇ ಬೆಳೆದಿರೋದು. ಮಾತನಾಡುವಾಗ ಎಚ್ಚರವಿರಲಿ. ಡಿಗ್ನಿಫೈ ಆಗಿ ಮಾತನಾಡಲಿ ಎಂದು ಕಿಡಿಕಾರಿದರು.
ಮಾಯಾಂಗನೆ ಅಂದ್ರೆ ಏನ್ ಅರ್ಥ? ಎಲೆಕ್ಷನ್ಗೆ ಹೆಣ್ಣುಮಗಳು ಬಂದ್ ನಿಲ್ಲೋದೇ ತಪ್ಪಾ? ಮಂಡ್ಯ ಜನ ನೋಡ್ಕೊಂಡು ಸುಮ್ನೆ ಇರ್ತಾರೆ ಅನ್ನೊಂಡಿದ್ದಾರಾ? ಎಂದ ಖಾರವಾಗಿ ಪ್ರತಿಕ್ರಿಯೆ ನೀಡಿದ್ರು.