ಬೆಂಗಳೂರು: ರಾಜಕಾರಣದಲ್ಲಿ ಧರ್ಮ ಬೇಕು, ಧರ್ಮ ರಾಜಕಾರಣ ಬೇಡ ಅಂತ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ. ಎಂ.ಬಿ.ಪಾಟೀಲ್ ಹೇಳಿಕೆ ಬಗ್ಗೆ ಪವರ್ ಟಿವಿಗೆ ಪ್ರತಿಕ್ರಿಯಿಸಿದ ಸಚಿವ ಡಿ.ಕೆ.ಶಿವಕುಮಾರ್ ಅವರು, “ಸ್ಪಷ್ಟವಾಗಿ ನನ್ನ ವೈಯಕ್ತಿಕ ಅಭಿಪ್ರಾಯ ಹೇಳಿದ್ದೇನೆ. ನಾನು ಯಾವುದೇ ವಿಚಾರಕ್ಕೂ ಮೂಗು ತೂರಿಸಿಲ್ಲ. ಎಂ. ಬಿ. ಪಾಟೀಲ್ ಅವರು ಏನೇ ಹೇಳಲಿ, ಅವರು ನನ್ನ ಗುರು ಇದ್ದ ಹಾಗೆ. ಪಕ್ಷಕ್ಕೆ ಡ್ಯಾಮೇಜ್ ಆಗುವ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತೆ. ಹೈಕಮಾಂಡ್ ಶಿಕ್ಷೆ ಕೊಟ್ರೆ ಪ್ರಸಾದ ಅಂತ ಸ್ವೀಕರಿಸುತ್ತೇನೆ” ಎಂದಿದ್ದಾರೆ.
ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವಾಗಿ ಡಿ.ಕೆ. ಶಿವಕುಮಾರ್ ಕ್ಷಮೆ ಕೇಳಿರೋದಕ್ಕೆ ಎಂ.ಬಿ ಪಾಟೀಲ್ ಪ್ರತಿಕ್ರಿಯಿಸಿ, ‘ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ಪಕ್ಷದ ಪರ ಕ್ಷಮೆ ಕೇಳೋಕೆ ಡಿಕೆಶಿ ಯಾರು? ಅವರೇನು ಕೆಪಿಸಿಸಿ ಅಧ್ಯಕ್ಷರೇ, ಎಐಸಿಸಿ ಅಧ್ಯಕ್ಷರೇ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಾಟೀಲ್, “ನಮ್ಮ ಧರ್ಮದ ಬಗ್ಗೆ ಚರ್ಚಿಸೋಕೆ, ನಿರ್ಧಾರ ತೆಗೆದುಕೊಳ್ಳೋಕೆ ನಮ್ಮ ಸ್ವಾಮಿಗಳು, ಹಿರಿಯರು, ನಾಯಕರು ಇದ್ದಾರೆ. ಡಿಕೆಶಿ ಮೊದಲು ಅವರ ಮನೆ ಶುದ್ಧಗೊಳಿಸಿಕೊಳ್ಳಲಿ ಎಂದು ಹೇಳಿದ್ದರು.