Tuesday, June 18, 2024

ದೇಶದಲ್ಲಿ ಮೊದಲ ಹಂತದ ಮತ ಹಬ್ಬದ ಸಂಭ್ರಮ..!

ನವದೆಹಲಿ: ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ಇಂದು ನಡೆಯುತ್ತಿದೆ. ದೇಶದ 543 ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಇಂದು ಮೊದಲ ಹಂತದ ಚುನಾವಣೆಯಲ್ಲಿ 18 ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಒಟ್ಟು 91 ಲೋಕಸಭಾ ಕ್ಷೇತ್ರಗಳಿಗೆ​ ಮತದಾನ ನಡೆಯಲಿದೆ. ಕೊನೆಯ ಹಂತದ ಚುನಾವಣೆ ಮೇ 19ರಂದು ನಡೆಯಲಿದೆ.

ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಮೇಘಾಲಯ, ಉತ್ತರಾಖಂಡ್, ಮೀಝೋರಾಮ್, ನಾಗಾಲ್ಯಾಂಡ್, ಸಿಕ್ಕಿಂ, ಲಕ್ಷದ್ವೀಪ, ಅಂಡಮಾನ್​ ನಿಕೋಬಾರ್​, ತೆಲಂಗಾಣದಲ್ಲಿ ಇಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.  ಅಸ್ಸಾಂ, ಬಿಹಾರ, ಛತ್ತೀಸ್​ಗಡ, ಜಮ್ಮುಕಾಶ್ಮೀರ, ಮಹಾರಾಷ್ಟ್ರ, ಮಣಿಪುರ, ಒಡಿಶಾ, ತ್ರಿಪುರಾ, ಉತ್ತರಪ್ರದೇಶ, ಪಶ್ಚಿಮ ಬಂಗಾಳದಲ್ಲಿಯೂ ಜನ ಇಂದು ಮತ ಚಲಾಯಿಸಲಿದ್ದಾರೆ. ಆಂಧ್ರಪ್ರದೇಶ, ಸಿಕ್ಕಿಂ, ಅರುಣಾಚಲ ಪ್ರದೇಶ, ಹಾಗೂ ಒಡಿಶಾ ರಾಜ್ಯಗಳ ವಿಧಾನಸಭೆಗೂ ಇಂದೇ ಚುನಾವಣೆ ನಡೆಯಲಿದೆ. ಬೆಳಗ್ಗೆ 7ಗಂಟೆಯಿಂದ ಮತದಾನ ಆರಂಭವಾಗಿದೆ.

ಲೋಕಸಭೆಗೆ ಹೆಚ್ಚಿನ ಸದಸ್ಯರನ್ನು ನೀಡುವ ಉತ್ತರ ಪ್ರದೇಶದಲ್ಲಿ 80 ರಲ್ಲಿ 8 ಸ್ಥಾನಗಳಿಗೆ ಇಂದು ಚುನಾವಣೆ ನಡೆಯಲಿದೆ. ಸಹರನ್​ಪುರ, ಕೈರಾನ, ಗಝಿಯಾಬಾದ್​, ಭಾಗಪತ್​, ಗೌತಮ ಬುದ್ಧ ನಗರ ಲೋಕಸಭಾ ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆಯಲಿದೆ. ಬೆಳಗ್ಗೆ 7ರಿಂದ ಸಂಜೆ 6ರವರೆಗೆ ದೇಶಾದ್ಯಂತ ಮತದಾನ ನಡೆಯಲಿದ್ದು, ನಕ್ಸಲ್‌ ಪೀಡಿತ, ಸೂಕ್ಷ್ಮ ಪ್ರದೇಶಗಳಲ್ಲಿ ಸಂಜೆ 4ರಿಂದ 5ಕ್ಕೆ ಮುಕ್ತಾಯವಾಗಲಿದೆ.

ಕೇಂದ್ರ ಸಚಿವರಾದ ನಿತಿನ್​ ಗಡ್ಕರಿ – ನಾಗ್​ಪುರ, ಕಿರಣ್​ ರಿಜಿಜು – ಪಶ್ಚಿಮ ಅರುಣಾಚಲ, ಜನರಲ್​ ವಿಕೆ ಸಿಂಗ್​ – ಗಾಝಿಯಾಬಾದ್​, ಸತ್ಯಪಾಲ್​ ಸಿಂಗ್​ – ಭಾಗ್​ಪತ್​, ಮಹೇಶ್ ಶರ್ಮಾ – ಗೌತಮ ಬುದ್ಧ ನಗರದಿಂದ ಸ್ಪರ್ಧಿಸುತ್ತಿದ್ದು, ಇಂದು ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆ ಎದುರಿಸಲಿದ್ದಾರೆ.

RELATED ARTICLES

Related Articles

TRENDING ARTICLES