ನವದೆಹಲಿ: ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ಇಂದು ನಡೆಯುತ್ತಿದೆ. ದೇಶದ 543 ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಇಂದು ಮೊದಲ ಹಂತದ ಚುನಾವಣೆಯಲ್ಲಿ 18 ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಒಟ್ಟು 91 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಕೊನೆಯ ಹಂತದ ಚುನಾವಣೆ ಮೇ 19ರಂದು ನಡೆಯಲಿದೆ.
ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಮೇಘಾಲಯ, ಉತ್ತರಾಖಂಡ್, ಮೀಝೋರಾಮ್, ನಾಗಾಲ್ಯಾಂಡ್, ಸಿಕ್ಕಿಂ, ಲಕ್ಷದ್ವೀಪ, ಅಂಡಮಾನ್ ನಿಕೋಬಾರ್, ತೆಲಂಗಾಣದಲ್ಲಿ ಇಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಅಸ್ಸಾಂ, ಬಿಹಾರ, ಛತ್ತೀಸ್ಗಡ, ಜಮ್ಮುಕಾಶ್ಮೀರ, ಮಹಾರಾಷ್ಟ್ರ, ಮಣಿಪುರ, ಒಡಿಶಾ, ತ್ರಿಪುರಾ, ಉತ್ತರಪ್ರದೇಶ, ಪಶ್ಚಿಮ ಬಂಗಾಳದಲ್ಲಿಯೂ ಜನ ಇಂದು ಮತ ಚಲಾಯಿಸಲಿದ್ದಾರೆ. ಆಂಧ್ರಪ್ರದೇಶ, ಸಿಕ್ಕಿಂ, ಅರುಣಾಚಲ ಪ್ರದೇಶ, ಹಾಗೂ ಒಡಿಶಾ ರಾಜ್ಯಗಳ ವಿಧಾನಸಭೆಗೂ ಇಂದೇ ಚುನಾವಣೆ ನಡೆಯಲಿದೆ. ಬೆಳಗ್ಗೆ 7ಗಂಟೆಯಿಂದ ಮತದಾನ ಆರಂಭವಾಗಿದೆ.
ಲೋಕಸಭೆಗೆ ಹೆಚ್ಚಿನ ಸದಸ್ಯರನ್ನು ನೀಡುವ ಉತ್ತರ ಪ್ರದೇಶದಲ್ಲಿ 80 ರಲ್ಲಿ 8 ಸ್ಥಾನಗಳಿಗೆ ಇಂದು ಚುನಾವಣೆ ನಡೆಯಲಿದೆ. ಸಹರನ್ಪುರ, ಕೈರಾನ, ಗಝಿಯಾಬಾದ್, ಭಾಗಪತ್, ಗೌತಮ ಬುದ್ಧ ನಗರ ಲೋಕಸಭಾ ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆಯಲಿದೆ. ಬೆಳಗ್ಗೆ 7ರಿಂದ ಸಂಜೆ 6ರವರೆಗೆ ದೇಶಾದ್ಯಂತ ಮತದಾನ ನಡೆಯಲಿದ್ದು, ನಕ್ಸಲ್ ಪೀಡಿತ, ಸೂಕ್ಷ್ಮ ಪ್ರದೇಶಗಳಲ್ಲಿ ಸಂಜೆ 4ರಿಂದ 5ಕ್ಕೆ ಮುಕ್ತಾಯವಾಗಲಿದೆ.
ಕೇಂದ್ರ ಸಚಿವರಾದ ನಿತಿನ್ ಗಡ್ಕರಿ – ನಾಗ್ಪುರ, ಕಿರಣ್ ರಿಜಿಜು – ಪಶ್ಚಿಮ ಅರುಣಾಚಲ, ಜನರಲ್ ವಿಕೆ ಸಿಂಗ್ – ಗಾಝಿಯಾಬಾದ್, ಸತ್ಯಪಾಲ್ ಸಿಂಗ್ – ಭಾಗ್ಪತ್, ಮಹೇಶ್ ಶರ್ಮಾ – ಗೌತಮ ಬುದ್ಧ ನಗರದಿಂದ ಸ್ಪರ್ಧಿಸುತ್ತಿದ್ದು, ಇಂದು ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆ ಎದುರಿಸಲಿದ್ದಾರೆ.