Monday, December 23, 2024

ಮೋದಿ ಬಯೋಪಿಕ್ ಬಿಡುಗಡೆಗೆ ಸುಪ್ರೀಂ ತಡೆಯಿಲ್ಲ..!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಬಯೋಪಿಕ್ ಬಿಡುಗಡೆಗೆ ತಡೆ ನೀಡಬೇಕು ಎಂದು ಕಾಂಗ್ರೆಸ್​ ನಾಯಕರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್​ ತಿರಸ್ಕರಿಸಿದೆ. ಗುರುವಾರ ಬಿಡುಗಡೆಯಾಗುವ ಸಿನಿಮಾ ಬಿಡುಗಡೆಯಾಗಬೇಕಾ ಅಥವಾ ದಿನಾಂಕ ಮುಂದೂಡಬೇಕಾ ಅನ್ನೋ ಬಗ್ಗೆ ಚುನಾವಣಾ ಆಯೋಗ ತೀರ್ಮಾನ ತೆಗೆದುಕೊಳ್ಳಬೇಕು ಅಂತ ನ್ಯಾಯಾಲಯ ಹೇಳಿದೆ. ಸಿನಿಮಾಗೆ ಇನ್ನೂ ಸೆನ್ಸಾರ್ ಮಂಡಳಿಯೇ ಸರ್ಟಿಫಿಕೇಟ್​ ನೀಡದಿರುವಾಗ ಈ ಅರ್ಜಿ ಅಪ್ರಸ್ತುತ. ಹಾಗಾಗಿ ಈ ಅರ್ಜಿಯನ್ನು ಪುರಸ್ಕರಿಸಲಾಗುವುದಿಲ್ಲ ಅಂತ ಮುಖ್ಯ ನ್ಯಾ. ರಂಜನ್​ ಗೊಗೊಯ್​​, ನ್ಯಾ. ದೀಪಕ್​ ಗುಪ್ತಾ, ಸಂಜೀವ್ ಖನ್ನಾ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಜೀವನಾಧರಿತ ಚಲನಚಿತ್ರಕ್ಕೆ ಈಗ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಕಾಂಗ್ರೆಸ್​ ನಾಯಕರು ಸುಪ್ರೀಂಕೋರ್ಟ್​ಗೆ ಅರ್ಜಿಸಲ್ಲಿಸಿದ್ದರು. ಕಾಂಗ್ರೆಸ್​ ವಕ್ತಾರ ಅಮನ್ ಪವಾರ್ ಅವರನ್ನು ಪ್ರತಿನಿಧಿಸಿದ, ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ” ಬಿಜೆಪಿಯ ನಾಲ್ವರು ಸಿನಿಮಾಗೆ ಹೂಡಿಕೆ ಮಾಡಿದ್ದಾರೆ. ಚುನಾವಣೆ ಸಮೀಪದಲ್ಲಿದ್ದು ಈ ಸಂದರ್ಭ ಸಿನಿಮಾ ಬಿಡುಗಡೆ ಮಾಡಿದ್ರೆ ಅದು ರಾಜಕೀಯ ಬೆಳವಣಿಗೆಗಳ ಮೇಲೆ ಪರಿಣಾಮ ಬೀರುತ್ತದೆ. ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಅಂತ ವಾದಿಸಿದ್ದಾರೆ.

ಇದೀಗ ಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿದೆ. ಪ್ರಧಾನಿ ಮೋದಿ ಈ ಬಗ್ಗೆ ಪ್ರತಿಕ್ರಿಯಿಸಿ, ನ್ಯಾಯಾಲಯದ ಅಮೂಲ್ಯ ಸಮಯ ವ್ಯರ್ಥವಾಗಿದೆ ಅಂತ ಹೇಳಿದ್ದಾರೆ. ಸಿನಿಮಾದಲ್ಲಿ ಮೋದಿ ಪಾತ್ರದಲ್ಲಿ ನಟಿಸಿರುವ ನಟ ವಿವೇಕ್ ಒಬೆರಾಯ್ ಅವರು ಟ್ವೀಟ್ ಮಾಡಿದ್ದಾರೆ. “ನಿಮ್ಮೆಲ್ಲರ ಆಶಿರ್ವಾದ, ಪ್ರೀತಿಯಿಂದ ನಾವಿಂದು ಕೋಟ್​​ನಲ್ಲಿ ಗೆಲುವು ಸಾಧಿಸಿದ್ದೇವೆ. ಪ್ರಜಾಪ್ರಭುತ್ವದ ಮೇಲಿನ ನಮ್ಮ ನಂಬಿಕೆ ಉಳಿಸಿದ ನ್ಯಾಯಾಲಯಕ್ಕೆ ಧನ್ಯವಾದಗಳು. ಏಪ್ರಿಲ್​ 11 ಗುರುವಾರ.. ಜೈ ಹಿಂದ್” ಅಂತ ಟ್ವೀಟ್ ಮಾಡಿದ್ದಾರೆ.

RELATED ARTICLES

Related Articles

TRENDING ARTICLES