ನವದೆಹಲಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಇಂದು ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ದೆಹಲಿಯಲ್ಲಿರುವ ಬಿಜೆಪಿ ಮುಖ್ಯ ಕಚೇರಿಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದ್ದು, ಈ ಸಂದರ್ಭ ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್ ಸೇರಿದಂತೆ ಹಲವು ಕೇಂದ್ರ ಸಚಿವರು ಉಪಸ್ಥಿತರಿದ್ದರು.
ಪ್ರಾಣಾಳಿಕೆ ಬಿಡುಗಡೆ ಬಳಿಕ ಮಾತನಾಡಿದ ಮೋದಿ ಅವರು, 2019ರಿಂದ 2024ರವರೆಗೆ ನೀವು ನಿರ್ಮಿಸುವ ಭಾರತ 2047 ಭವಿಷ್ಯಕ್ಕೆ ಮುನ್ನುಡಿಯಾಗಲಿದೆ. ಒಂದು ಧ್ಯೇಯ, ಒಂದು ದೇಶ ಎಂಬುದೇ ನಮ್ಮ ಅಜೆಂಡಾ. ಈ ಅಜೆಂಡಾ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯಲಿದೆ. ಜೀವಜಲದ ರಕ್ಷಣೆಗಾಗಿ ಜಲ್ ಶಕ್ತಿ ಸಚಿವಾಲಯ ಅಸ್ತಿತ್ವಕ್ಕೆ ಬರಲಿದೆ. 2014ರಿಂದ ಇಂದಿನ ತನಕ ನಾವು ಗಳಿಸಿದ ಅನುಭವವೇ ಈ ಪ್ರಣಾಳಿಕೆ ರೂಪಿಸಲು ನೆರವಾಯ್ತು” ಎಂದಿದ್ದಾರೆ.
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮಾತನಾಡಿ, “ಇದು ನಮ್ಮ ಘೋಷಣಾ ಪತ್ರವಲ್ಲ. ಇದು ಸಂಕಲ್ಪ ಪತ್ರ. ಇದು ಜನರಿಗೆ ನೀಡುತ್ತಿರುವ ಭರವಸೆ” ಎಂದಿದ್ದಾರೆ. ಪ್ರಣಾಳಿಕೆ ಬಿಡುಗಡೆ ಸಂದರ್ಭ ಮಾತನಾಡಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ವಿವಿಧ ಕ್ಷೇತ್ರಗಳಲ್ಲಿ ಸರ್ಕಾರದ ಸಾಧನೆಗಳನ್ನು ವಿವರಿಸಿದರು.
ಬಿಜೆಪಿ ಸಂಕಲ್ಪ ಪತ್ರದ ಪ್ರಮುಖ ಅಂಶಗಳು:
- ಒಂದು ಧ್ಯೇಯ ಒಂದು ದೇಶ (ವನ್ ಮಿಷನ್, ವನ್ ನೇಷನ್), 2022ರೊಳಗೆ 75 ಭರವಸೆಗಳನ್ನು ಪೂರೈಸುವ ಗುರಿ.
- ಜೀವಜಲ ಸಂರಕ್ಷಣೆಗೆ ಜಲ್ಶಕ್ತಿ ಸಚಿವಾಲಯ ಅಸ್ತಿತ್ವಕ್ಕೆ
- ಭೂದಾಖಲೆಗಳನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸುವುದು
- ದೇಶದ 50 ಪ್ರಮುಖ ನಗರಗಳಲ್ಲಿ ಮೆಟ್ರೋ ನೆಟ್ವರ್ಕ್ ಬಲಿಷ್ಠಪಡಿಸುವುದು.
- ಒಳನುಸುಳುವಿಕೆ ತಡೆಯಲು ಕ್ರಮ, ರಾಷ್ಟ್ರದ ಭದ್ರತೆಗೆ ಪ್ರಮುಖ ಆದ್ಯತೆ. ಆಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸುವ ಮೂಲಕ ಭದ್ರತಾ ಪಡೆಯನ್ನು ಬಲಪಡಿಸುವುದು
- ಆರ್ಟಿಕಲ್ 370( ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಸ್ವಾಯತ್ತತೆ) ಹಾಗೂ ಆರ್ಟಿಕಲ್ 35ಎ( ಜಮ್ಮು ಕಾಶ್ಮೀರ ಖಾಯಂ ನಿವಾಸಿಗಳಿಗೆ ವಿಶೇಷ ಹಕ್ಕು) ರದ್ದು ಮಾಡುವುದು.
- 60 ವರ್ಷ ಮೇಲ್ಪಟ್ಟ ಸಣ್ಣ ರೈತರಿಗೆ ಪಿಂಚಣಿ, 25 ಲಕ್ಷ ಕೋಟಿ ರೂ. ಕೃಷಿ ಬಂಡವಾಳ
- ರೈತರಿಗೆ 1 ಲಕ್ಷದವರೆಗೆ ಬಡ್ಡಿರಹಿತ ಅಲ್ಪಾವಧಿ ಸಾಲ, 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವುದು
- ಸಾಮರಸ್ಯ ಪರಿಸರದಲ್ಲಿ ರಾಮ ಮಂದಿರ ನಿರ್ಮಣ
- ಭಾರತದ ರಫ್ತು ಹೆಚ್ಚಿಸುವುದು, ಉದ್ಯೋಗ ಸೃಷ್ಟಿಗೆ ಒತ್ತು, 22 ಪ್ರಮುಖ ಚಾಂಪಿಯನ್ ಸೆಕ್ಟರ್ಗಳನ್ನ ಗುರುತಿಸುವುದು
- ಸಾಂವಿಧಾನಿಕ ತಿದ್ದುಪಡಿ ಮೂಲಕ ಸಂಸತ್ ಹಾಗೂ ರಾಜ್ಯ ವಿಧಾನಸಭೆಗಲ್ಲಿ ಮಹಿಳೆಯರಿಗೆ ಶೇ. 33ಷ್ಟು ಮೀಸಲಾತಿ
- 2020ರ ವೇಳೆಗೆ ಎಲ್ಲರಿಗೂ ವಸತಿ ಸೌಲಭ್ಯ, ಜಿಎಸ್ಟಿಯನ್ನು ಮತ್ತಷ್ಟು ಸರಳಗೊಳಿಸುವುದು, ಬೇನಾಮಿ ಆಸ್ತಿಗಳ ಮೇಲೆ ಕ್ರಮ, ತೆರಿಗೆ ದರ ಕಡಿಮೆ ಮಾಡುವ ಗುರಿ
- ಮೂಲ ಸೌಕರ್ಯಕ್ಕೆ 100 ಕೋಟಿ ರೂ ಹೂಡಿಕೆ -2024ರೊಳಗೆ 200 ಏರ್ಪೋರ್ಟ್ಗಳ ನಿರ್ಮಾಣ, 60,000 ಕಿ.ಮೀ ನಷ್ಟು ಹೊಸ ಹೆದ್ದಾರಿ ನಿರ್ಮಾಣದ ಗುರಿ, 2024ರೊಳಗೆ ಸಂಪೂರ್ಣ ರೇಲ್ವೆ ವಿದ್ಯುತೀಕರಣ
- ಆಯುಶ್ಮಾನ್ ಭಾರತ್ ಯೋಜನೆಯನ್ನು ಮತ್ತಷ್ಟು ದೊಡ್ಡದಾಗಿಸುವುದು
- ಉದ್ಯಮಿಗಳಿಗೆ 50 ಲಕ್ಷ ಸಾಲ