Wednesday, January 15, 2025

ಬಿಜೆಪಿ ಮುಖಂಡ ಶತ್ರುಘ್ನ ಸಿನ್ಹಾ ಕಾಂಗ್ರೆಸ್​ಗೆ​ ಸೇರ್ಪಡೆ..!

ನವದೆಹಲಿ: ಬಾಲಿವುಡ್​ ನಟ ಹಾಗೂ ಬಿಜೆಪಿ ಮುಖಂಡ ಶತ್ರುಘ್ನ ಸಿನ್ಹಾ ಅವರು ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದಾರೆ. ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್​ ವಕ್ತಾರ ರಣ್​ದೀಪ್ ಸಿಂಗ್ ಸರ್ಜೇವಾಲಾ ಅವರು ಶತ್ರುಘ್ನ ಸಿನ್ಹಾ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ್ದಾರೆ. ಈ ಸಂದರ್ಭ ಮಾತನಾಡಿದ ಅವರು, “ಶತ್ರುಘ್ನ ಸಿನ್ಹಾ ಅವರು ನಿಜವಾದ ರಾಜಕಾರಣಿ. ಅವರು ಯಾವಾಗಲೂ ಸತ್ಯವನ್ನು ಧೈರ್ಯವಾಗಿ ನುಡಿದಿದ್ದಾರೆ” ಅಂತ ಹೇಳಿದ್ದಾರೆ. ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ಗಾಂಧಿ ಅವರನ್ನು ಭೇಟಿ ಮಾಡಿದ ಒಂದು ವಾರದ ನಂತರ ಶತ್ರುಘ್ನ ಸಿನ್ಹಾ ಅವರು ಕಾಂಗ್ರೆಸ್​ಗೆ ಸೇರಿದ್ದಾರೆ.

“ದೇಶದ ಉತ್ತಮ ರಾಜಕಾರಣಿಯೊಬ್ಬರು ಕಾಂಗ್ರೆಸ್​ಗೆ ಸೇರುತ್ತಿದ್ದಾರೆ. ಸರಿಯಾದ ರಾಜಕಾರಣಿಯೊಬ್ಬರು ಇಷ್ಟು ದಿನ ತಪ್ಪಾದ ಪಕ್ಷದಲ್ಲಿದ್ದರು. ಈಗ ಅವರು ಸರಿಯಾದ ಪಕ್ಷವನ್ನು ಸೇರಿದ್ದಾರೆ. ಈ ಚುನಾವಣೆ ಪ್ರಜಾಪ್ರಭುತ್ವ ವಿರೋಧಿ ಹಾಗೂ ಅಭಿವೃದ್ಧಿ ವಿರೋಧಿ ಮೋದಿ ಸರ್ಕಾರದ ವಿರುದ್ಧ ನಡೆಯುವ ಯುದ್ಧ” ಅಂತ ಪಕ್ಷದ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಹೇಳಿದ್ದಾರೆ.

ಕಾಂಗ್ರೆಸ್​ಗೆ ಸೇರುವ ಕುರಿತು ಶತ್ರುಘ್ನ ಸಿನ್ಹಾ ಅವರು ಟ್ವೀಟ್ ಮಾಡಿದ್ದು, “ನಾನು ಬಿಜೆಪಿಯಲ್ಲಿ ಹಿರಿಯರಾದ ಭಾರತ ರತ್ನ ನಾನಾಜಿ ದೇಶ್​ಮುಖ್, ಮಾಜಿ ಪ್ರಧಾನಿ ದಿ. ಅಟಲ್​ಬಿಹಾರಿ ವಾಜಪೇಯಿ, ಗುರು, ಸ್ನೇಹಿತರೂ ಆದ ಶ್ರೀ ಎಲ್. ಕೆ. ಅಡ್ವಾಣಿ ಅವರ ಮಾರ್ಗದರ್ಶನದಲ್ಲಿ ಬೆಳೆದು ಬಂದಿದ್ದೇನೆ. ಪಕ್ಷ ತೊರೆಯುವ ಬಗ್ಗೆ ನೋವಿದೆ. ದೇಶ ಸೇವೆಗೆ, ಜನರ ಸೇವೆ ಮಾಡುವುದಕ್ಕೆ ಕಾಂಗ್ರೆಸ್ ನನಗೆ ಅವಕಾಶ ನೀಡುತ್ತದೆ ಎಂಬ ವಿಶ್ವಾಸವಿದೆ ” ಅಂತ ಬರೆದಿದ್ದಾರೆ.

RELATED ARTICLES

Related Articles

TRENDING ARTICLES