ಬೆಂಗಳೂರು: ಯುಪಿಎಸ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು. ಕರ್ನಾಟಕದಲ್ಲಿ 23 ಜನ ವಿದ್ಯಾರ್ಥಿಗಳು ರ್‍ಯಾಂಕ್ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಹುಬ್ಬಳ್ಳಿ ಹುಡುಗ ಸಾಧನೆ ಮಾಡಿದ್ದಾರೆ. ದೇಶಕ್ಕೆ17ನೇ ರ್‍ಯಾಂಕ್ ಪಡೆಯುವ ಮೂಲಕ ರಾಜ್ಯ ಹಾಗೂ ವಾಣಿಜ್ಯ ನಗರಿಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ವಿದ್ಯಾನಗರದ ಬೃಂದಾವನ ಕಾಲೋನಿ ನಿವಾಸಿ ರಾಹುಲ್ ಸಂಕನೂರು ಈ ಸಾಧನೆ ಮಾಡಿದ್ದಾರೆ. ರಾಹುಲ್ ಸಾಧನೆಗೆ ಕುಟುಂಬಸ್ಥರು, ಸ್ನೇಹಿತರು ಸಂತಸ ವ್ಯಕ್ತಪಡಿಸಿದ್ದಾರೆ. ಎಂಜಿನಿಯರಿಂಗ್ ಮುಗಿಸಿ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದ ರಾಹುಲ್ ಸಂಕನೂರು ಅವರು ಮೂರನೆಯ ಪ್ರಯತ್ನದಲ್ಲಿ 17ನೇ ರ್‍ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.
ಬಳ್ಳಾರಿ: ಜಿಲ್ಲಾಧಿಕಾರಿಯೊಬ್ಬರು ಬಡವರಿಗೆ ಸೂರನ್ನು ಕಲ್ಪಿಸಿರುವುದನ್ನು ನೋಡಿ ಪ್ರೇರಣೆಗೊಂಡು ತಾನು ಕೂಡ ಜಿಲ್ಲಾಧಿಕಾರಿಯಾಗಬೇಕೆನ್ನುವ ಮಹದಾಸೆ ಹೊತ್ತ ಯುವತಿ ಇದೀಗ ಯುಪಿಎಸ್ಸಿಯಲ್ಲಿ 423ನೇ ರ್‍ಯಾಂಕ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಬಳ್ಳಾರಿ ತಾಲೂಕಿನ ಸಂಗನಕಲ್ ನಿವಾಸಿಗಳಾದ ವೆಂಕಟರಮಣಪ್ಪ ಮತ್ತು ಸುಮಾ ದಂಪತಿಗಳ ಮಗಳಾದ ಅಶ್ವೀಜಾ ಈ ಸಾಧನೆಗೈದಿದ್ದಾರೆ. ಅಶ್ವಿಜಾ ಬಳ್ಳಾರಿಯಲ್ಲಿ ಪಿಯುಸಿವರೆಗೂ ವ್ಯಾಸಂಗ ಮಾಡಿ, 2014-15ನೇ ಸಾಲಲ್ಲಿ ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ರು. ನಂತರ ನಿರಂತರ ಅಧ್ಯಯನ ಮಾಡುವ ಮೂಲಕ ಇದೀಗ ಯುಪಿಎಸ್‌ಸಿ ಯಲ್ಲಿ ರಾಜ್ಯಕ್ಕೆ 14ನೇ ಮತ್ತು ಒಟ್ಟಾರೆ 423ನೇ ಪಡೆದು ಬಳ್ಳಾರಿಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ದಾವಣಗೆರೆ: ಮಿರ್ಜಾ ಖಾದರ್ ಬೇಗ್ ಐಎಎಸ್ ನಲ್ಲಿ 336ನೇ ರ್‍ಯಾಂಕ್ ಪಡೆದು ಜಿಲ್ಲೆಗೆ ಹೆಸರು ತಂದುಕೊಟ್ಟಿದ್ದಾರೆ. ದಾವಣಗೆರೆಯ ಹಿರಿಯ ನ್ಯಾಯವಾದಿಗಳಾದ ಮಿರ್ಜಾ ಇಸ್ಮಾಯಿಲ್ ಮೊದಲನೇ ಮಗ ಮಿರ್ಜಾ ಖಾದರ್ ಬೇಗ್ ಎರಡನೇ ಪ್ರಯತ್ನದಲ್ಲಿಯೇ ಐಎಎಸ್ ಪಾಸ್ ಮಾಡಿ 336 ನೇ ರ್‍ಯಾಂಕ್ ಪಡೆದಿದ್ದಾರೆ.
ವಿಜಯಪುರ: ರೈತಾಪಿ ಕುಟುಂಬದಲ್ಲಿ ಹುಟ್ಟಿದ ಸಾಮಾನ್ಯ ಯುವಕನೊಬ್ಬ ಯುಪಿಎಸ್‌ಸಿ ಪರೀಕ್ಷೆಯಲ್ಲಿ 307ನೇ ರ್‍ಯಾಂಕ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ವಿಜಯಪುರ ಜಿಲ್ಲೆಯ ನಾಗಠಾಣ ಗ್ರಾಮದ ಗಿರೀಶ್ ಧರ್ಮರಾಜ್ ಕಲಗೊಂಡ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಸಾಧನೆ ಮಾಡಿದ್ದಾರೆ. ಯುಪಿಎಸ್‌ಸಿ ಪರೀಕ್ಷೆಗಾಗಿಯೇ ಖಾಸಗಿ ಕಂಪನಿಯಲ್ಲಿ ನೌಕರಿಗೆ ರಾಜೀನಾಮೆ ನೀಡಿದ್ದ ಗಿರೀಶ ಬೆಂಗಳೂರಿನಲ್ಲಿ ಇದ್ದುಕೊಂಡು ಪರೀಕ್ಷೆಗೆ ತಯಾರಿ ನಡೆಸಿದ್ದರು. 4ನೇ ಪ್ರಯತ್ನದಲ್ಲಿ 307 ರ್‍ಯಾಂಕ್ ಪಡೆಯುವ ಮೂಲಕ ವಿಜಯಪುರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.