ಮೈಸೂರು: ಕೊನೆಗೂ ಸಚಿವ ಜಿ.ಟಿ.ದೇವೇಗೌಡ ಅವರು ವರಿಷ್ಠರ ವಿರುದ್ಧ ಮುನಿಸು ಮರೆತು ಜೆಡಿಎಸ್ ಶಾಸಕರು, ಮುಖಂಡರ ಸಭೆ ನಡೆಸಿದ್ದಾರೆ. ಮೈಸೂರು ನಗರದ ಖಾಸಗಿ ಹೋಟೆಲ್ನಲ್ಲಿ ಸಭೆ ನಡೆದಿದ್ದು, ಮೊದಲು ಶಾಸಕರ ಸಭೆ ಹಾಗೂ ಮುಖಂಡರ ಸಭೆ, ನಂತರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆ ಆಯೋಜಿಸಲಾಗಿತ್ತು. ಇದೀಗ ಮೈಸೂರಿನಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಗಲಾಟೆ ಮಾಡಿದ್ದಾರೆ. ಜೆಡಿಎಸ್ ಕಾರ್ಯಕರ್ತರು ಮುಖಂಡರ ವಿರುದ್ಧ ತಿರುಗಿಬಿದ್ದಿದ್ದಾರೆ.
ಸಭೆಯಲ್ಲಿ ಗಲಾಟೆ ಮಾಡಿ ಕಾರ್ಯಕರ್ತರು ತಮ್ಮ ಆಕ್ರೋಶ ಹೊರಹಾಕಿದ್ದು, ಯಾವುದೇ ಕಾರಣಕ್ಕೂ ಕಾಂಗ್ರೆಸ್ಗೆ ಓಟ್ ಹಾಕುವುದಿಲ್ಲ ಅಂತ ಹೇಳಿದ್ದಾರೆ. ಈ ಸಂದರ್ಭ ಕಾರ್ಯಕರ್ತರನ್ನು ಸಮಾಧಾನಪಡಿಸಲು ಜಿ.ಟಿ ದೇವೇಗೌಡರು ಮುಂದಾಗಿದ್ದಾರೆ. ಆದರೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದ್ದು, ಏನೂ ಮಾಡಲಾಗದೆ ಸಚಿವ ಸಾ. ರಾ. ಮಹೇಶ್ ಅವರೂ ಅಸಹಾಯಕರಾಗಿ ನಿಂತಿದ್ರು. ಸಚಿವ ಸಾ.ರಾ.ಮಹೇಶ್, ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್, ಶಾಸಕ ಅಶ್ವಿನ್ ಕುಮಾರ್ ಅವರೂ ಸಭೆಯಲ್ಲಿ ಭಾಗಿಯಾಗಿದ್ದರು.
“ಮೈಸೂರು- ಕೊಡಗು ಕ್ಷೇತ್ರದಲ್ಲಿ ಸೋತರೆ ನಾನಾಗಲಿ, ಸಾ.ರಾ ಮಹೇಶ್ ಆಗಲಿ ಹೊಣೆಯಲ್ಲ. ನಾವು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ. ಎಲ್ಲಾ ಕ್ಷೇತ್ರದ ಕಾರ್ಯಕರ್ತರ ಮನಸು ಒಡೆದಿದೆ” ಅಂತ ಜಿ. ಟಿ. ದೇವೇಗೌಡ ಅವರು ಸಭೆಗೂ ಮುನ್ನ ಹೇಳಿದ್ದಾರೆ. ಕಾಂಗ್ರೆಸ್ ಮುಖಂಡರ ನಡೆಗೆ ಜಿ. ಟಿ. ದೇವೇಗೌಡರು ಬೇಸರಗೊಂಡಿದ್ದರು. ಜಿಟಿಡಿ ಪ್ರಚಾರಕ್ಕೆ ಬರಲು ಕಾಂಗ್ರೆಸ್ ಮುಖಂಡರು ಮನವಿ ಮಾಡಿದ್ದರು.