ಬೆಂಗಳೂರು: ನಿರ್ಮಾಣ ಹಂತದ ಕಟ್ಟಡ ಕುಸಿದು ಇಬ್ಬರ ಮೃತಪಟ್ಟಿರುವ ಘಟನೆ ಯಶವಂತಪುರದ ಎಪಿಎಂಸಿ ಯಾರ್ಡ್ನಲ್ಲಿ ನಡೆದಿದೆ. ಅವಘಡದಲ್ಲಿ ಬಿಹಾರ ಮೂಲದ ರಾಹುಲ್, ರಾಕೇಶ್ ಮೃತಪಟ್ಟಿದ್ದಾರೆ. . ಘಟನೆಯಲ್ಲಿ 12 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಹನ ನಿಲುಗಡೆಗಾಗಿ ಕಟ್ಟಡ ನಿರ್ಮಿಸಲಾಗುತ್ತಿತ್ತು. ಆರ್ಎಂಸಿ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಎಂಜಿನಿಯರ್ ಉಮಾಶಂಕರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನಾ ಸ್ಥಳಕ್ಕೆ ಉತ್ತರ ವಲಯ ಡಿಸಿಪಿ ಶಶಿಕುಮಾರ್ ಭೇಟಿ ನೀಡಿದ್ದಾರೆ. ಶಶಿಕುಮಾರ್ ಅವರು ಸ್ಥಳ ಪರಿಶೀಲನೆ ನಡೆಸಿದ್ದು, ಗುತ್ತಿಗೆದಾರರು, ಮಾಲೀಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಅಂತ ಹೇಳಿದ್ದಾರೆ. ಘಟನೆ ಬಗ್ಗೆ ಎಪಿಎಂಸಿ ಕಾರ್ಯದರ್ಶಿ ಅನಿಲಾ ಕುಮಾರಿ ಪ್ರತಿಕ್ರಿಯಿಸಿದ್ದು, “600 ವಾಹನಗಳ ನಿಲುಗಡೆಗೆ ಅನುಕೂಲವಾಗುವಂತೆ 77 ಕೋಟಿ ರೂಪಾಯಿ ವೆಚ್ಚದಲ್ಲಿ ಪಾರ್ಕಿಂಗ್ ಕಟ್ಟಡ ನಿರ್ಮಿಸಲಾಗುತ್ತಿತ್ತು. ಈರುಳ್ಳಿ ಬೆಳೆಗಾರರು ಬಂದಾಗ ವಾಹನ ನಿಲುಗಡೆಗೆ ಸಮಸ್ಯೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿತ್ತು. ಸ್ಟಾರ್ ಕನ್ಸ್ಟ್ರಕ್ಷನ್ ಕಂಪನಿಗೆ ಗುತ್ತಿಗೆ ಕೊಡಲಾಗಿತ್ತು. 24 ತಿಂಗಳಲ್ಲಿ ಕಾಮಗಾರಿ ಮುಗಿಸಲು ಹೇಳಲಾಗಿತ್ತು. ಎಂನಿಯರ್, ಗುತ್ತಿಗೆದಾರರ ಸಭೆ ಕರೆಯಲಾಗಿದೆ. ಘಟನೆಗೆ ಕಾರಣವಾದ ಮಾಹಿತಿ ಕಲೆ ಹಾಕಲಾಗುತ್ತೇವೆ” ಅಂತ ಹೇಳಿದ್ದಾರೆ.