Friday, November 22, 2024

ನಾಮಪತ್ರ ಹಿಂಪಡೆದೇ ಬಿಟ್ಟರು ಮುದ್ದಹನುಮೇಗೌಡ್ರು – ದೇವೇಗೌಡ್ರು ನಿರಾಳಾನಾ?

ತುಮಕೂರು : ಹಾಲಿ ಸಂಸದ ಎಸ್​.ಪಿ ಮುದ್ದಹನುಮೇಗೌಡ ಅವರ ಮನವೊಲಿಕೆಗೆ ‘ಕೈ’ನಾಯಕರು ನಡೆಸಿದ ಕಸರತ್ತು ಯಶಸ್ವಿಯಾಗಿದೆ. ಕಾಂಗ್ರೆಸ್​ ಟಿಕೆಟ್ ಸಿಗದೇ ಇದ್ರೂ ಸೈಯೇ ತಾನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಅಂತ ಪಟ್ಟು ಹಿಡಿದಿದ್ದ ಮುದ್ದಹನುಮೇಗೌಡ್ರು ಕೊನೆಗೂ ನಾಮಪತ್ರ ಹಿಂಪಡೆದೇ ಬಿಟ್ಟಿದ್ದಾರೆ.
ಮೈತ್ರಿ ಸೀಟು ಹಂಚಿಕೆಯಾದಾಗ ಕಾಂಗ್ರೆಸ್ ಹಾಲಿ ಸಂಸದರಿರುವ ಪ್ರತಿಷ್ಠಿತ ತುಮಕೂರು ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಟ್ಟಿತ್ತು. ಆಗಲೇ ಮುದ್ದಹನುಮೇಗೌಡರು ಮತ್ತವರ ಬೆಂಬಲಿಗರು ಅಸಮಧಾನ ವ್ಯಕ್ತಪಡಿಸಿದ್ರು. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರೇ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಪಕ್ಕಾ ಆದಾಗಲೂ ಮುದ್ದಹನುಮೇಗೌಡರು ಪಟ್ಟು ಬಿಡದೇ ಅಖಾಡಕ್ಕೆ ಧುಮುಕಲು ಮುಂದಾಗಿದ್ದರು. ದೊಡ್ಡ ಗೌಡರು ನಾಮಪತ್ರ ಸಲ್ಲಿಸಿದ ದಿನವೇ ಮುದ್ದಹನುಮೇಗೌಡರೂ ನಾಮಪತ್ರ ಸಲ್ಲಿಸಿದ್ದರು.
ನಾಮಪತ್ರ ವಾಪಸ್ಸು ಪಡೆಯುವಂತೆ ಡಿಸಿಎಂ ಡಾ.ಜಿ ಪರಮೇಶ್ವರ್​ ಸೇರಿದಂತೆ ಕಾಂಗ್ರೆಸ್​ ನಾಯಕರು ಒತ್ತಡ ಹೇರಿದ್ದರು. ಕೊನೆಗೂ ಮನಸ್ಸು ಬದಲಿಸಿ ಮುದ್ದಹನುಮೇಗೌಡರು ನಾಮಪತ್ರ ವಾಪಸ್ಸು ಪಡೆದಿದ್ದಾರೆ. ಆದರೆ, ಬೇಸರದಿಂದಲೇ ಈ ನಿರ್ಧಾರಕ್ಕೆ ಬಂದಿರುವ ಮುದ್ದಹನುಮೇಗೌಡರು, ತಾವಾಗಿಯೇ ಹೋಗಿ ನಾಮಪತ್ರ ಹಿಂಪಡೆದಿಲ್ಲ. ರವಿಕುಮಾರ್ ಎನ್ನುವವರು ಮುದ್ದಹನುಮೇಗೌಡರ ಪರವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ವಾಪಸ್ಸು ಪಡೆದರು.
ಮುದ್ದಹನುಮೇಗೌಡರು ಕಣದಿಂದ ಹಿಂದೆ ಸರಿದಿರುವುದರಿಂದ ದೇವೇಗೌಡ್ರಿಗೆ ಸ್ವಲ್ಪ ಮಟ್ಟಿಗೆ ತಲೆನೋವು ಕಡಿಮೆ ಆಗಿದೆ. ಆದರೆ, ಸಂಪೂರ್ಣ ನಿರಾಳ ಅಂತ ಹೇಳೋಕೆ ಆಗಲ್ಲ. ಯಾಕಂದ್ರೆ, ಮುದ್ದಹನುಮೇಗೌಡರು ಬೇಸರದಲ್ಲಿ ಹಾಗೂ ಇಷ್ಟು ದಿನ ಅಖಾಡಕ್ಕೆ ಇಳಿದೇ ಸೈ ಅಂತ ಹೇಳಿ, ಇದೀಗ ದೇವೇಗೌಡರ ಪರ ಮತಯಾಚನೆ ಮಾಡಲು ಹೋಗ್ತಾರಾ? ಎಸ್​ಪಿಎಂ ಬೆಂಬಲಿಗರು ದೇವೇಗೌಡರ ಪರ ಪ್ರಚಾರ ಮಾಡ್ತಾರಾ ಅನ್ನೋದು ಪ್ರಶ್ನೆ.

RELATED ARTICLES

Related Articles

TRENDING ARTICLES