ಶಿವಮೊಗ್ಗ : ಮಾನಸಿಕವಾಗಿ ಧೃತಿಗೆಡಿಸಲು, ಐಟಿ ದಾಳಿ ಮಾಡಿಸಲಾಗಿದ್ದು, ಬಿಜೆಪಿಯವರು ಪಾಪದ ಕೆಲಸವನ್ನ ಮಾಡುತ್ತಿದ್ದಾರೆ ಎಂದು ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಆರೋಪಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು ಐಟಿ ದಾಳಿ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸರ್ಕಾರ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಚುನಾವಣೆ ಮಾಡುವುದನ್ನು ಬಿಟ್ಟು, ಐಟಿ ಇಲಾಖೆ ಕಚೇರಿಗೆ ಅಲೆದಾಡಿಸಲು ಬಿಜೆಪಿ ತಂತ್ರ ಹೆಣೆದಿದೆ. ಈ ಹಿಂದೆ ಕೂಡ ಇದೇ ತಂತ್ರವನ್ನು ಅನುಸರಿಸಿದ್ದ ಬಿಜೆಪಿ ನಾಯಕರು, ಐಟಿ, ಇಡಿ, ಸಿಬಿಐ, ಈ ರೀತಿಯ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಕಳೆದ ಬಾರಿ ಚುನಾವಣೆಯಲ್ಲಿ, 7 ಜನ ಬಿಜೆಪಿ ಶಾಸಕರಿದ್ದಾಗಲೂ ಕೂಡ, ಹೆಚ್ಚಿನ ಮತಗಳನ್ನುಗಳಿಸಿ, ಕಡಿಮೆ ಮತಗಳ ಅಂತರದಲ್ಲಿ ಸೋತಿದ್ದೆ. ರಾಜ್ಯದಲ್ಲಿ ಶಿವಮೊಗ್ಗ ಕ್ಷೇತ್ರ ಗೊಂದಲ ಇಲ್ಲದ ಕ್ಷೇತ್ರವಾಗಿದೆ. ಬಂಗಾರಪ್ಪರ ಹೆಸರು ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಳ್ಳುವ ಸಂಪೂರ್ಣ ಅಧಿಕಾರ ನನಗಿದೆ. ಈ ಬಾರಿಯೂ ಬಂಗಾರಪ್ಪರ ಹೆಸರಿನಲ್ಲಿಯೇ, ಚುನಾವಣೆ ನಡೆಯಲಿದೆ. ನಮಗೆ ಈಗ ವಿಮಾನ ನಿಲ್ದಾಣದ ಅಗತ್ಯವಿಲ್ಲ. ಆದರೆ, ಈಗ ಸದ್ಯಕ್ಕೆ ರೈತರಿಗೆ ನೀರಿನ ಅಗತ್ಯವಿದೆ. ಈಗಾಗಲೇ ಈ ಬಾರಿಯ ಬಜೆಟ್ನಲ್ಲಿ ಘೋಷಣೆಯಾಗಿರುವ ನೀರಾವರಿ ಯೋಜನೆ ಅನುಷ್ಠಾನಕ್ಕೆ ಪ್ರಥಮ ಆದ್ಯತೆ ನೀಡಲಾಗುವುದು ಎಂದರು.
ಬಿಜೆಪಿಯವರು, ಈಗ ರಾಮನನ್ನು ಬಿಟ್ಟು, ಬಾಂಬ್ ಹಿಡಿದುಕೊಂಡು ಚುನಾವಣೆ ಎದುರಿಸುತ್ತಿದ್ದಾರೆ. ಮೋದಿ ಎಂಬ ಪದ ದೇಶದ ರಕ್ಷಣೆ ಮಾಡುವುದಿಲ್ಲ. ಕೇವಲ ಮೋದಿ, ಮೋದಿ ಎಂದು ಕೂಗಿದರೆ, ಆಗುವುದಿಲ್ಲ. ಮೋದಿ ಹಿಂದೆ, ಮುಂದೆ ಏನಾದರೂ ಕೂಗಬೇಕಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಕೆಲಸ ಮಾಡಿರೋ ಮೋದಿನಾ, ಕಳ್ಳ ಮೋದಿನಾ, ಸುಳ್ಳ ಮೋದಿನಾ, ಯಾವ ಮೋದಿ ಎಂದು ಕೂಗಬೇಕಲ್ಲಾ ಎಂದು ಮಧು ಲೇವಡಿ ಮಾಡಿದ್ದಾರೆ.
ಚುನಾವಣೆ ಬಿಟ್ಟು, ಐಟಿ ಕಚೇರಿಗೆ ಅಲೆದಾಡಿಸಲು ಬಿಜೆಪಿ ತಂತ್ರ : ಮಧು ಬಂಗಾರಪ್ಪ
TRENDING ARTICLES