ಬೆಂಗಳೂರು: ಸೀಟು ಹಂಚಿಕೆ ವಿಚಾರವಾಗಿ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ. ಮಾರ್ಚ್ 16ಕ್ಕೆ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸಭೆ ಹಿನ್ನೆಲೆ ಮಾರ್ಚ್ 15ರಂದು ರಾಹುಲ್ ಗಾಂಧಿ ಜೊತೆ ದೇವೇಗೌಡರು ಚರ್ಚೆ ನಡೆಸಲಿದ್ದಾರೆ. ರಾಜ್ಯದಲ್ಲಿ ಸೀಟು ಹೊಂದಾಣಿಕೆಯ ಬಗ್ಗೆ ದೇವೇಗೌಡರು ರಾಹುಲ್ ಗಾಂಧಿ ಜೊತೆ ಕೊನೆ ಹಂತದ ಮಾತುಕತೆ ನಡೆಸಲಿದ್ದಾರೆ.
16 ರಂದು ಕಾಂಗ್ರೆಸ್ ಕೇಂದ್ರ ಚುನಾವಣೆ ಸಮಿತಿ ಸಭೆ ಹಿನ್ನೆಲೆಯಲ್ಲಿ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ. ಸೀಟು ಹಂಚಿಕೆ ಸಂಬಂಧ ದೇವೇಗೌಡರ ಮತ್ತು ರಾಹುಲ್ ಗಾಂಧಿ ಭೇಟಿ ಮಹತ್ವ ಪಡೆದಿದೆ. ದೊಡ್ಡಗೌಡರ ಜೊತೆ ಮಾತುಕತೆ ನಡೆಸಿದ ಬಳಿಕ ಕೈ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಸ್ಥಾನ ಹಂಚಿಕೆ ಬಗ್ಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದ್ದು, ಪ್ರತಿಷ್ಠಿಯ ಕಣವಾಗಿರುವ ಮೈಸೂರು, ಮಂಡ್ಯ ಕ್ಷೇತ್ರದ ಬಗ್ಗೆ ಚರ್ಚಿಸಲಿದ್ದಾರೆ. ಕೊನೆಯ ಹಂತದಲ್ಲಿ ದೋಸ್ತಿ ನಾಯಕರು ಗೀವ್ ಅಂಡ್ ಟೇಕ್ ಪಾಲಿಸಿಯನ್ನ ಅಳವಡಿಸಿಕೊಳ್ಳಲಿದ್ದಾರಾ ಅನ್ನೋದನ್ನು ಕಾದು ನೋಡಬೇಕಿದೆ. ಹಾಗೆಯೇ ದೇವೆಗೌಡರು ಮತ್ತೆ 10 ಸ್ಥಾನಕ್ಕೆ ಬೇಡಿಕೆ ಇಟ್ಟು ಚೌಕಾಸಿ ಮಾಡುವ ಸಾಧ್ಯತೆಯೂ ಇದೆ.