ಲೋಕಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಜಿದ್ದಾಜಿದ್ದಿನ ಕ್ಷೇತ್ರವಾದ ಕಲಬುರಗಿಯಲ್ಲಿ ಕೇಸರಿ ಪಡೆ ನಾಳೆ ರಣಕಹಳೆ ಮೊಳಗಿಸಲಿದೆ. ಕಾಂಗ್ರೆಸ್ ತೊರೆದ ಉಮೇಶ್ ಜಾಧವ್ ಕಮಲ ಹಿಡಿಯಲು ಸಜ್ಜಾಗಿದ್ದು, ದೋಸ್ತಿ ನಾಯಕರ ಎಲ್ಲರ ಚಿತ್ತ ನಾಳಿನ ಬಿಜೆಪಿ ಕಾರ್ಯಕ್ರಮದತ್ತ ನೆಟ್ಟಿದೆ.
ಲೋಕಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಕರುನಾಡಿಗೆ ನಾಳೆ ಪ್ರಧಾನಿ ಮೋದಿ ಎಂಟ್ರಿ ಕೊಡ್ತಿದ್ದಾರೆ. ಬೆಳಗ್ಗೆ 10:50ರ ವೇಳೆಗೆ ಬೀದರ್‌ಗೆ ಆಗಮಿಸಲಿರುವ ನಮೋ, ಹೆಲಿಕಾಪ್ಟರ್ ಮೂಲಕ ಕಲಬುರಗಿಗೆ ತೆರಳಲಿದ್ದಾರೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿರುವ ಪ್ರಧಾನಿ ನಂತ್ರ, ಎನ್.ವಿ.ಮೈದಾನದಲ್ಲಿ ನಡೆಯುವ ಬಿಜೆಪಿ ಸಮಾವೇಶದಲ್ಲಿ ಲೋಕಸಮರಕ್ಕೆ ರಣಕಹಳೆ ಮೊಳಗಿಸಲಿದ್ದಾರೆ.
ಕಲಬುರಗಿಯಲ್ಲಿ ಸೋಲಿಲ್ಲದ ಸರ್ದಾರನ ವಿರುದ್ಧ ಬಿಜೆಪಿ ಶಿಷ್ಯಾಸ್ತ್ರ ಪ್ರಯೋಗಿಸಲು ಅಣಿಯಾಗಿದೆ. ಇತ್ತೀಚಿಗಷ್ಟೇ ಕೈಗೆ ಗುಡ್ ಬೈ ಹೇಳಿದ ಉಮೇಶ್ ಜಾಧವ್‌ರನ್ನೇ ಖರ್ಗೆ ವಿರುದ್ಧ ಕಣಕ್ಕಿಳಿಸಲು ಕೇಸರಿ ಟೀಮ್ ಪ್ಲ್ಯಾನ್ ಮಾಡಿಕೊಂಡಿದೆ. ಎಲ್ಲ ಅಂದುಕೊಂಡಂತೆ ಆದ್ರೆ, ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲೇ ಉಮೇಶ್ ಜಾಧವ್ ಕಮಲ ಹಿಡಿಯಲಿದ್ದಾರೆ.
ಇನ್ನು, ಉಮೇಶ್ ಜಾಧವ್ ಮೊದಲ ವಿಕೆಟ್ ಅಷ್ಟೇ.. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ನ ಮತ್ತಷ್ಟು ವಿಕೆಟ್‌ಗಳು ಬೀಳಲಿವೆ ಅಂತಾ ಮಾಜಿ ಡಿಸಿಎಂ ಆರ್.ಅಶೋಕ್ ಹೊಸ ಬಾಂಬ್ ಸಿಡಿಸಿದ್ದಾರೆ.
ಕಲಬುರಗಿಯಲ್ಲಿ ನಡೆಯುವ ಬಿಜೆಪಿ ಶಕ್ತಿ ಪ್ರದರ್ಶನಕ್ಕೆ ಈಗಾಗ್ಲೆ ಬೃಹತ್ ವೇದಿಕೆ ಸಜ್ಜಾಗಿದೆ.. ಪ್ರಧಾನಿ ಮೋದಿ ಆಗಮನ ಹಿನ್ನೆಲೆ ಜಿಲ್ಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ..
ಇದೇ ನನ್ನ ಕೊನೆಯ ಚುನಾವಣೆ ಅಂತಾ ಈಗಾಗ್ಲೆ ಹಿರಿಯ ಸಂಸದ ಮಲ್ಲಿಕಾರ್ಜುನ್ ಖರ್ಗೆ ಘೋಷಣೆ ಮಾಡಿದ್ದಾಗಿದೆ. ಇನ್ನೊಂದೆಡೆ ಕಲಬುರಗಿಯಲ್ಲಿ ಸೋಲಿಲ್ಲದ ಸರದಾರನಿಗೆ ಸೋಲಿನ ರುಚಿ ತೋರಿಸಲು ಬಿಜೆಪಿಯೂ ಅಣಿಯಾಗಿದೆ. ಆದ್ರೆ ಮತದಾರರ ಮನಸ್ಸಿನಲ್ಲೇನಿದೆ ಅನ್ನೋದು ಫಲಿತಾಂಶದ ನಂತ್ರವಷ್ಟೇ ತಿಳಿದು ಬರಬೇಕಿದೆ.
-ಶಿವಕುಮಾರ ಖೇಡ, ಕಲಬುರಗಿ