ಮೈಸೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತವರೂರಾದ ಮೈಸೂರು ಜಿಲ್ಲೆಯಲ್ಲಿ ಕಾಂಗ್ರೆಸ್ಗೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಕೈ ಕೊಟ್ಟಿದೆ. ಸ್ಥಳೀಯ ಶಾಸಕರ ನಿರ್ಧಾರಕ್ಕೆ ಮಣಿದ ಜೆಡಿಎಸ್ ಹೈಕಮಾಂಡ್ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಹಸಿರು ನಿಶಾನೆ ತೋರಿಸಿದೆ.
32 ತಿಂಗಳ ಹಿಂದೆ ನಡೆದ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಾಗ ಜೆಡಿಎಸ್ ಆಗಿನ ತನ್ನ ತೀವ್ರ ವಿರೋಧಿಯಾದ ಕಾಂಗ್ರೆಸ್ನ ದೂರ ಇಟ್ಟು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿತ್ತು. 5 ವರ್ಷ ಅಂದ್ರೆ 60 ತಿಂಗಳ ಅವಧಿಯನ್ನ 20-40 ತಿಂಗಳುಗಳ ಅನುಪಾತದಂತೆ ಎರಡು ಪಕ್ಷಗಳು ಹಂಚಿಕೊಂಡಿದ್ದವು. ಜೆಡಿಎಸ್ ಅಧ್ಯಕ್ಷ ಸ್ಥಾನ ಹಾಗೂ ಬಿಜೆಪಿ ಉಪಾಧ್ಯಕ್ಷ ಸ್ಥಾನ ಅಲಂಕರಿಸಿ ತೃಪ್ತಿ ಪಟ್ಟುಕೊಂಡವು.
ಇದೀಗ ಮೊದಲ ಅವಧಿ ಮುಗಿದಿದ್ದು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ತೆರವಾಗಿದೆ. ನಾಳೆ ಮತ್ತೆ ಚುನಾವಣೆ ನಡೆಯಲಿದೆ. ಈ ಮಧ್ಯೆ ಉಂಟಾದ ರಾಜ್ಯ ರಾಜಕೀಯ ಬೆಳವಣಿಗೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರಸ್ ಮೈತ್ರಿ ಮಾಡಿಕೊಂಡಿದೆ. ಮೈಸೂರು ಜಿಲ್ಲಾ ಪಂಚಾಯ್ತಿಯಲ್ಲೂ ಇದೇ ಕಾಂಬಿನೇಷನ್ ಮುಂದುವರೆಸುವ ಇಂಗಿತವನ್ನ ಕಾಂಗ್ರೆಸ್ ವ್ಯಕ್ತಪಡಿಸಿತ್ತು. ಆದ್ರೆ ಕಾಂಗ್ರೆಸ್ನ ಆಫರ್ ಅನ್ನು ತಿರಸ್ಕರಿಸಿದ ಜೆಡಿಎಸ್ ಹಿಂದೆ ಮಾಡಿಕೊಂಡಿದ್ದ ಕಾಂಬಿನೇಷನ್ ಮುಂದುವರೆಸಿದೆ. ಈ ಮೂಲಕ ಬಿಜೆಪಿ ಜೊತೆ ಮಾಡಿಕೊಂಡ ಒಪ್ಪಂದಕ್ಕೆ ಗೌರವ ಕೊಟ್ಟಿದೆ.
ಜೆಡಿಎಸ್ ಕಾಂಗ್ರೆಸ್ ಜೊತೆ ಹೊಂದಾಣಿಕೆಯನ್ನ ಸಾರಾಸಗಟಾಗಿ ತಿರಸ್ಕರಿಸಿದೆ. ಇದಕ್ಕೆ ಜೆಡಿಎಸ್ ನಾಯಕರು ಬದ್ದವಾಗಿದ್ದಾರೆ. ಇದೇನೂ ಹೊಸ ಒಪ್ಪಂದವಲ್ಲ ಈ ಹಿಂದೆ ನಡೆದ ಒಪ್ಪಂದವನ್ನ ಮುಂದುವರೆಸಿರುವುದಾಗಿ ಸ್ಪಷ್ಟವಾಗಿ ತಿಳಿಸಿದ್ದಾರೆ…
ಇದು ಕೇವಲ ಜಿಲ್ಲಾಪಂಚಾಯ್ತಿ ಚುನಾವಣೆಗೆ ಮಾತ್ರ ಸೀಮಿತ ಅಂತ ಜೆಡಿಎಸ್ ನಾಯಕರು ಹೇಳಿದ್ರೆ ಪ್ರತಾಪ್ ಸಿಂಹ ಲೋಕಸಭೆಗೂ ಮುಂದುವರೆಯಲಿದೆ ನೀವು ನಮ್ಮ ಜೊತೆ ಇರ್ತೀರಾ ಆಂತ ಹೇಳಿದ್ರು. ಇದಕ್ಕೆ ಪ್ರತ್ಯುತ್ತರ ನೀಡಿದ ಸಾ.ರಾ.ಮಹೇಶ್ ಲೋಕಸಭೆಯಲ್ಲಿ ನಿಮ್ಮ ವಿರುದ್ದ ಮತ ಕೇಳುವುದಾಗಿ ತಿಳಿಸಿದ್ರು.
ನಂತರ ಸ್ಪಷ್ಟೀಕರಣ ನೀಡಿದ ಪ್ರತಾಪ್ ಸಿಂಹ ಜಿಲ್ಲಾಪಂಚಾಯ್ತಿಯಲ್ಲಿ ಕೇವಲ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಬದಲಾವಣೆ ಮಾತ್ರ ಆಗುತ್ತಿದೆ ಇನ್ನೇನು ವಿಶೇಷವಿಲ್ಲ ಎಂದ್ರು.
49 ಸದಸ್ಯರ ಬಲ ಇರುವ ಮೈಸೂರು ಜಿಲ್ಲಾಪಂಚಾಯ್ತಿಯಲ್ಲಿ ಜೆಡಿಎಸ್ 21,ಕಾಂಗ್ರೆಸ್ 20 ಹಾಗೂ ಬಿಜೆಪಿ 8 ಸದಸ್ಯರನ್ನು ಹೊಂದಿದೆ. ಮ್ಯಾಜಿಕ್ ನಂಬರ್ 25 ಕ್ಕಾಗಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿತ್ತು.
ಬಿಜೆಪಿ-ಜೆಡಿಎಸ್ ಒಪ್ಪಂದವನ್ನ ಖಚಿತಪಡಿಸಿದ್ರೂ ಆಪರೇಷನ್ ಕಾಂಗ್ರೆಸ್ ನಡೆಯಬಹುದೆಂಬ ಅನುಮಾನ ಕಾಡುತ್ತಿದೆ. ಆದ್ದರಿಂದ ಮುಂಜಾಗ್ರತೆಯಾಗಿ ಎರಡು ಪಕ್ಷಗಳ ಸದಸ್ಯರು ಕುಶಾಲನಗರದ ರೆಸಾರ್ಟ್ಗೆ ತೆರಳಲಿದ್ದಾರೆ.
ಮೈಸೂರಲ್ಲಿ ಬಿಜೆಪಿ-ಜೆಡಿಎಸ್ ಭಾಯ್ ಭಾಯ್..!
TRENDING ARTICLES