ಬೆಂಗಳೂರು : ಬಜೆಟ್ ದಿನ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಸಿಡಿಸಿದ ‘ಆಪರೇಷನ್ ಆಡಿಯೋ ಬಾಂಬ್’ ಬಿಜೆಪಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಸ್ಪೀಕರ್ ರಮೇಶ್ ಕುಮಾರ್ ಅವರ ಸಲಹೆಯಂತೆ ಎಸ್ಐಟಿ ತನಿಖೆಗೆ ಮೈತ್ರಿ ಒಪ್ಪಿದ್ದು, ಎಸ್ಐಟಿ ತನಿಖೆಗೆ ಒಪ್ಪಿಸಿಯೇ ಸಿದ್ಧ ಅಂತ ಪಟ್ಟು ಹಿಡಿದಿದೆ. ಆದರೆ, ಬಿಜೆಪಿ ಎಸ್ಐಟಿ ತನಿಖೆಯಲ್ಲಿ ನಂಬಿಕೆಯಿಲ್ಲ. ತನಿಖೆ ಆಗುವುದಾದರೆ ನ್ಯಾಯಾಂಗ ತನಿಖೆಯಾಗಲಿ ಇಲ್ಲವೇ ಸದನ ಸಮಿತಿಗೆ ಒಪ್ಪಿಸಬೇಕು ಅಂತ ಬಿಜೆಪಿ ಪಟ್ಟು ಹಿಡಿದಿದೆ.
ಈ ನಡುವೆ ಬಿಜೆಪಿ ನಾಯಕರು ನಮ್ಮಿಂದ ತಪ್ಪಾಗಿದೆ ಅಂತ ಮತ್ತೊಮ್ಮೆ ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಆಗಿದ್ದಾಯ್ತು ಕ್ಷಮಿಸಿಬಿಡಿ ಅಂತ ಸ್ಪೀಕರ್ ಅವರಲ್ಲಿ ವಿನಮ್ರವಾಗಿ ಮನವಿಯನ್ನೂ ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ಮನವಿ ಹಾಗೂ ಸಲಹೆಯಂತೆ ಇಂದು ಸ್ಪೀಕರ್ ರಮೇಶ್ ಕುಮಾರ್ ಅವರು ಮೂರು ಪಕ್ಷಗಳ ನಾಯಕರ ಸಭೆಯನ್ನು ಕರೆದಿದ್ದರು. ಈ ವೇಳೆ ಸಭೆಗೆ ಹಾಜರಾದ ಬಿಜೆಪಿ ನಾಯಕರು ‘ನಮ್ಮಿಂದ ತಪ್ಪಾಯ್ತು. ಆಗಿದ್ದಾಗಿದೆ ದಯವಿಟ್ಟು ಕ್ಷಮಿಸಿ ಬಿಡಿ’ ಅಂತ ಮನವಿ ಮಾಡಿ ಸಭೆಯನ್ನು ಅರ್ಧಕ್ಕೆ ಬಿಟ್ಟು ಸ್ಪೀಕರ್ ಕೊಠಡಿಯಿಂದ ಹೊರಬಂದಿದ್ದಾರೆ. ಒಟ್ಟಾರೆ ಸ್ಪೀಕರ್ ಕೊಠಡಿಯಲ್ಲಿ ನಡೆದ ಸಭೆ ವಿಫಲವಾಗಿದ್ದು, ಸರ್ಕಾರ ಎಸ್ಐಟಿ ತನಿಖೆಗೆ ಒಪ್ಪಿಸೋದು ಬಹುತೇಕ ಖಚಿತ.