Sunday, January 19, 2025

ಅಕ್ರಮ ಮರಳುಗಾರಿಕೆ ವಿರುದ್ಧ ಕ್ರಮಕ್ಕೆ ಮೀನಾಮೇಷ

ಕೊಪ್ಪಳ: ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿ, ಸಾಕ್ಷ್ಯಾಧಾರಗಳು ಸಿಕ್ಕಿ 10 ದಿನಗಳು ಕಳೆದರೂ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಪೊಲೀಸರು ಮೀನಮೇಷ ಎಣಿಸುತ್ತಿದ್ದಾರೆ.

ಗಂಗಾವತಿಯ ನಿವಾಸಿ ಬಸವಗೌಡ ಕಕ್ಕರಗೋಳ ಮನೆಗೆ ಜನವರಿ 21 ರಂದು ತಹಸೀಲ್ದಾರ್ ಮತ್ತು ಪೊಲೀರು ದಾಳಿ ಮಾಡಿದ್ದರು. ಈ ಸಂದರ್ಭ ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕು ಉದ್ದಿಹಾಳ ಗ್ರಾಮದ ಮರಳು ಕೇಂದ್ರದಲ್ಲಿರಬೇಕಿದ್ದ ಮರಳು ಪರ್ಮಿಟ್ ಪುಸ್ತಕಗಳು ಗಂಗಾವತಿಯ ಕಕ್ಕರಗೋಳ ಬಸವಗೌಡ ಎಂಬುವರ ಮನೆಯಲ್ಲಿ ಪತ್ತೆಯಾಗಿತ್ತು. ಬಸವಗೌಡ ವಿರುದ್ಧ ದೂರು ದಾಖಲಿಸಿದರೂ ಬಂಧನ ವಿಳಂಬವಾಗುತ್ತಿದ್ದು, ಪೊಲೀಸರ ನಡೆ ಸಂಶಯಕ್ಕೆಡೆ ಮಾಡಿದೆ.

ಖಚಿತ ಮಾಹಿತಿ ಆಧರಿಸಿ ಗಂಗಾವತಿ ತಹಸೀಲ್ದಾರ ವೀರೇಶ ಬಿರಾದಾರ ಮತ್ತು ಪೊಲೀಸರು ಬಸನಗೌಡರ ಮನೆ ಮೇಲೆ ದಾಳಿ ಮಾಡಿದ ವೇಳೆ ಮರಳು ಪರ್ಮಿಟ್ ಪತ್ತೆಯಾಗಿದ್ದವು. ನಿಯಮ ಬಾಹಿರವಾಗಿ ಮನೆಯಲ್ಲಿ ಮರಳು ಪರ್ಮಿಟ್ ಪಾಸ್ ನೀಡುತ್ತಿದ್ದಾರೆ ಅಂತ ಬಸವಗೌಡ ವಿರುದ್ಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ದೂರು ನೀಡಿದ್ದು, ಕೊಪ್ಪಳದ ಗಂಗಾವತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗಿ 10 ದಿನ ಕಳೆದರೂ ಆರೋಪಿ ಬಂಧನವಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸರ್ಕಾರದ ನಿಯಮದಂತೆ ಮರಳು ಸಾಗಣೆಯ ಗುತ್ತಿಗೆ ಪಡೆದಿದ್ದ ವಿವೇಕಾನಂದ ಚೌದ್ರಿ ಎಂಬವರು ಮರಳು ವಿತರಣಾ ಕೇಂದ್ರದಲ್ಲೇ ಪರ್ಮಿಟ್ ವಿತರಣೆ ಮಾಡಬೇಕಿತ್ತು. ಆದರೆ ಬಸನಗೌಡರ ಮನೆಯಲ್ಲಿ ಮರಳು ಪರ್ಮಿಟ್ ನೀಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಬಸನಗೌಡ ಮತ್ತು ವಿವೇಕಾನಂದ ಚೌದ್ರಿ ವಿರುದ್ಧ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 420 ಮತ್ತು 406ರಡಿ ಪ್ರಕರಣ ದಾಖಲಾಗಿದೆ.

ಒಟ್ಟು 19 ಸಾವಿರ ಮೆಟ್ರಿಕ್ ಟನ್ ಮರಳು ಸಾಗಣೆ ಮಾಡಲು ಸರ್ಕಾರ ಪರವಾನಗಿ ನೀಡಿದ್ದು, ಸಾಮಾನ್ಯವಾಗಿ ಒಂದು ಪಾಸ್​ನಲ್ಲಿ 8 ಮೆಟ್ರಿಕ್ ಟನ್ ಪರವಾನಗಿ ನೀಡಬೇಕು. ಆದ್ರೆ, ಆರೋಪಿಗಳು ಕಡಿಮೆ ಪ್ರಮಾಣ ದಾಖಲಿಸಿ, ಸರ್ಕಾರಕ್ಕೆ ವಂಚನೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆಫಿಯಾದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಪೊಲೀಸ್ ಆಧಿಕಾರಿಗಳು ಭಾಗಿಯಾಗಿರುವ ಆರೋಪ ಕೇಳಿ ಬಂದಿದೆ. ಈ ಪ್ರಕರಣದಲ್ಲಿ ಬಸನಗೌಡ ನಿಯಮ ಬಾಹಿರವಾಗಿ ಮರಳು ಪರ್ಮಿಟ್ ವಿತರಿಸಿದ್ದು ಒಂದೆಡೆಯಾದ್ರೆ, ಗಂಗಾವತಿಯಲ್ಲಿ ನಕಲಿ ಪರ್ಮಿಟ್ ಜಾಲವೂ ಇದೆ ಎಂಬ ಅರೋಪ ಕೇಳಿ ಬಂದಿವೆ.

RELATED ARTICLES

Related Articles

TRENDING ARTICLES