ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸೌರಾಷ್ಟ್ರ ವಿರುದ್ಧದ ಪ್ರಸಕ್ತ ಸಾಲಿನ ರಣಜಿ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ಮುಗ್ಗರಿಸಿದೆ. ತಂಡದ ಉತ್ತಮ ಪ್ರದರ್ಶನದ ಹೊರತಾಗಿಯೂ ಅಂಪೈರ್ಗಳ ಯಡವಟ್ಟು, ಕ್ರೀಡಾ ಸ್ಫೂರ್ತಿ ಮರೆತ ಚೇತೇಶ್ವರ ಪೂಜಾರ ಆಟದ ಪರಿಣಾಮವಾಗಿ ತವರಿನಂಗಳದಲ್ಲಿ ಕರ್ನಾಟಕ ಸೋಲುಂಡಿತು. 5 ವಿಕೆಟ್ಗಳ ಅಂತರದಿಂದ ಪಂದ್ಯ ಜಯಸಿದ ಸೌರಾಷ್ಟ್ರ ಫೈನಲ್ ಪ್ರವೇಶಿಸಿತು.
ಇಂದು ನಡೆದ ಅಂತಿಮ ದಿನದಾಟದಲ್ಲಿ ಪ್ರವಾಸಿ ತಂಡಕ್ಕೆ ಗೆಲ್ಲಲು 55 ರನ್ಗಳ ಅವಶ್ಯಕತೆ ಇತ್ತು. ದಿನದಾಟದಲ್ಲಿ ಸೌರಾಷ್ಟ್ರ ಬ್ಯಾಟ್ಸ್ಮನ್ ಜಾಕ್ಸನ್ ಶತಕ ಸಿಡಿಸಿದ್ರು. ಸೆಂಚುರಿ ಬಾರಿಸಿದ ಬೆನ್ನಲ್ಲೇ ಜಾಕ್ಸನ್ ವಿನಯ್ ಕುಮಾರ್ಗೆ ಎಸೆತದಲ್ಲಿ ಬೌಲ್ಡ್ ಆಗಿ ನಿರ್ಗಮಿಸಿದ್ರು. ಬಳಿಕ ಕಣಕ್ಕಿಳಿದ ಅರ್ಪಿತ್ ವಸವಾಡ ರೋನಿತ್ ಮೋರೆ ಎಸೆತದಲ್ಲಿ ಔಟಾದ್ರು. ಆದರೆ, ಅದಾಗಲೇ ಸೌರಾಷ್ಟ್ರ ತಂಡ ಗೆಲುವಿನ ಹೊಸ್ತಿಲಿಗೆ ಬಂದು ನಿಂತಿತ್ತು. 4ನೇ ದಿನದಾಟದಲ್ಲಿ ಶತಕ ಸಿಡಿಸಿದ್ದ ಪೂಜಾರ ಹಾಗೂ ಪ್ರೀರಕ್ ಮಂಕಡ್ ಅಜೇಯರಾಗುಳಿದು ತಂಡವನ್ನ ಗೆಲುವಿನ ದಡ ಸೇರಿಸಿದ್ರು.
ಕ್ರೀಡಾ ಸ್ಫೂರ್ತಿ ಮರೆತು ಬ್ಯಾಟಿಂಗ್ ಮಾಡಿದ ಪೂಜಾರ 266 ಎಸೆತಗಳನ್ನು ಎದುರಿಸಿ 17 ಬೌಂಡರಿ ಸಹಿತ 131 ರನ್ ಗಳಿಸಿ ಗೆಲುವಿಗೆ ಕಾರಣರಾದ್ರು. ಅಂಪೈರ್ ನೀಡಿದ ಕೆಟ್ಟ ತೀರ್ಪುಗಳು ಕರ್ನಾಟಕದ ಗೆಲುವಿಗೆ ಮುಳುವಾದವು.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಕರ್ನಾಟಕ ಮೊದಲ ಇನ್ನಿಂಗ್ಸ್ನಲ್ಲಿ 275 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಸೌರಾಷ್ಟ್ರ 236 ರನ್ಗಳಿಗೆ ಆಲೌಟ್ ಆಗಿ 39 ರನ್ಗಳ ಹಿನ್ನಡೆಯಲ್ಲಿತ್ತು. ತನ್ನ ದ್ವಿತೀಯ ಇನ್ನಿಂಗ್ಸ್ನಲ್ಲಿ 239 ರನ್ ಪೇರಿಸಿದ ಕರ್ನಾಟಕ 279 ರನ್ಗಳ ಟಾರ್ಗೆಟ್ ನೀಡಿತ್ತು.
ಪ್ರಸಕ್ತ ಸಾಲಿನ ರಣಜಿ ಫೈನಲ್ ಫೆಬ್ರವರಿ 3 ರಿಂದ ನಾಗ್ಪುರದಲ್ಲಿ ನಡೆಯಲಿದ್ದು, ಪ್ರಶಸ್ತಿಗಾಗಿ ವಿದರ್ಭ ಹಾಗೂ ಸೌರಾಷ್ಟ್ರ ತಂಡಗಳು ಹೋರಾಡಲಿವೆ.