ರಾಮನಗರ : ಆಪರೇಷನ್ ಕಮಲದ ಆತಂಕಕ್ಕೆ ಒಳಗಾಗಿರೋ ಕಾಂಗ್ರೆಸ್, ರೆಸಾರ್ಟ್ ಸೇರಿಕೊಂಡಾಗಿದೆ. ಆದರೆ ರೆಸಾರ್ಟ್‌ನಲ್ಲೂ ಕಾಂಗ್ರೆಸ್ ಶಾಸಕರು ಒಟ್ಟಾಗಿರುವಂತೆ ಕಾಣ್ತಿಲ್ಲ!
ಈಗಲ್ಟನ್ ಸೇರಿರೋ ಕೈ ಶಾಸಕರು ಅಲ್ಲೂ ನೆಮ್ಮದಿಯಿಂದ ಇಲ್ಲ. ಈ ಮಾತಿಗೆ ಸಾಕ್ಷಿಯಾಗಿದ್ದೇ ಶನಿವಾರ ನಡೆದ ಸಿಎಲ್‌ಪಿ ಮೀಟಿಂಗ್..
ಹೌದು.. ಈಗಲ್ಟನ್ ರೆಸಾರ್ಟ್‌ನಲ್ಲಿ ನಿನ್ನೆ ಕಾಂಗ್ರೆಸ್ ಶಾಸಕಾಂಗ ಸಭೆಯನ್ನ ಕರೆಯಾಗಿತ್ತು. ಆದ್ರೆ ಯಾವೊಬ್ಬ ಶಾಸಕರೂ ಇನ್ ಟೈಮ್‌ಗೆ ಬರಲೇ ಇಲ್ಲ. ಅಲ್ಲಿಗೆ ಮಧ್ಯಾಹ್ನ ನಿಗದಿಯಾಗಿದ್ದ ಸಭೆ ಆರಂಭವಾಗಿದ್ದೇ ಸಂಜೆ 6 ಗಂಟೆಗೆ. ಅದಕ್ಕೂ ಸಹ ಎಲ್ಲಾ ಶಾಸಕರು ಹಾಜರು ಇರಲಿಲ್ಲ. ಸಿಎಲ್‌ಪಿ ಮೀಟಿಂಗ್‌ನಲ್ಲಿ ಕಾಣಿಸಿಕೊಂಡಿದ್ದು ಕೇವಲ 30 ರಿಂದ 40 ಮಂದಿ ಶಾಸಕರಷ್ಟೇ. ಇದರಿಂದ ಕೆರಳಿದ ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ರು. ಈ ರೀತಿ ಸಭೆ ನಡೆಸಲು ಬೆಳಗ್ಗೆಯಿಂದ ನಾವು ಕಾಯಬೇಕಿತ್ತಾ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.
ಇನ್ನು ಸಿಎಲ್‌ಪಿ ಮೀಟಿಂಗ್‌ನಲ್ಲೇ ಶಾಸಕ ಬಸವರಾಜ್ ದದ್ದಲ್, ಪ್ರತಾಪ್ ಗೌಡ ಪಾಟೀಲ್‌ಗೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸರಿಯಾಗೇ ಕ್ಲಾಸ್ ತೆಗೆದುಕೊಂಡ್ರು. ಬಿಜೆಪಿಗರು ನಿಮ್ಮನ್ನ ಸಂಪರ್ಕಿಸಿದ್ದು ಹೇಗೆ, ಮುಳುಗುವ ಹಡಗಿನಂತಿರೋ ಬಿಜೆಪಿಗೆ ಹೋಗಿ ಏನ್ ಮಾಡ್ತೀರಾ. ಅಲ್ಲಿ ನಿಮ್ಮನ್ನ ಮೂಲೆಗುಂಪು ಮಾಡ್ತಾರೆ ಹುಷಾರ್ ಅಂತಾ ಬುದ್ಧಿವಾದ ಹೇಳಿದ್ರು.
ಸಭೆಗೆ ಗೈರಾಗಿರುವ ಶಾಸಕರಿಗೆ ನೋಟಿಸ್ ನೀಡಲಾಗಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಇಂದು ಕಾಂಗ್ರೆಸ್ ಶಾಸಕರ ಜೊತೆ ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದಾರೆ. ಶಾಸಕರೊಂದಿಗೆ ಪ್ರತ್ಯೇಕ ಮಾತುಕತೆಯನ್ನೂ ನಡೆಸಲಿದ್ದು, ಮುಂದಿನ ಲೋಕಸಭಾ ಚುನಾವಣೆ ಹಾಗೂ ರಾಜ್ಯ ಬಜೆಟ್ ಮಂಡನೆ ಕುರಿತು ಚರ್ಚಿಸಲಿದ್ದಾರೆ. ಎಲ್ಲ ಅಂದುಕೊಂಡಂತೆ ಆದ್ರೆ ಮಾತ್ರ ರೆಸಾರ್ಟ್ ಹಕ್ಕಿಗಳಾಗಿರೋ ಕಾಂಗ್ರೆಸ್ ಶಾಸಕರಿಗೆ ನಾಳೆ ಮುಕ್ತಿ ಸಿಗಬಹುದು.