ದೆಹಲಿಯಲ್ಲಿ ಬೀಡು ಬಿಟ್ಟಿದ್ದ ಕೇಸರಿ ಟೀಮ್ ಇದೀಗ ಹರಿಯಾಣದ ಗುರುಗ್ರಾಮ್‌ನ ಖಾಸಗಿ ರೆಸಾರ್ಟ್‌ಗೆ ಶಿಫ್ಟ್ ಆಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಡೆ ನಿಗೂಢವಾಗಿದ್ದು, ಶಾಸಕರನ್ನು ಅಮಿತ್ ಶಾ ಮತ್ತಷ್ಟು ಗೊಂದಕ್ಕೀಡು ಮಾಡಿದ್ದಾರೆ. ಎರಡು ದಿನಗಳ ಬಳಿಕ ಬಿಜೆಪಿ ಸಂಸದರು ಬೆಂಗಳೂರಿಗೆ ವಾಪಸ್ ಆಗಿದ್ರೆ, ಶಾಸಕರನ್ನು ಮಾತ್ರ ಗುರುಗ್ರಾಮ್‌ಗೆ ಶಿಫ್ಟ್ ಮಾಡಲಾಗಿದೆ.
20 ಶಾಸಕರ ಐದು ತಂಡಗಳನ್ನ ರಚಿಸಿ, ಅರವಿಂದ್ ಲಿಂಬಾವಳಿ, ಸಿಟಿ ರವಿ, ಆರ್.ಅಶೋಕ್, ಈಶ್ವರಪ್ಪ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೆಗಲಿಗೆ ಶಾಸಕರ ಜವಾಬ್ದಾರಿಯನ್ನು ವಹಿಸಲಾಗಿದೆ. ಆ ಮೂಲಕ ಬಿಜೆಪಿ ತಮ್ಮ ಶಾಸಕರನ್ನ ಹಿಡಿದಿಡುವ ತಂತ್ರಗಾರಿಕೆ ಅನುಸರಿಸ್ತಿದೆ.
ಸತೀಶ್ ಜಾರಕಿಹೊಳಿಗೆ ಟೈಂ ಕೊಟ್ಟಿದ್ದಾರೆ ಬಿಎಸ್‌ವೈ: ಬಿಜೆಪಿ ಶಾಸಕರೆಲ್ಲ ಹರಿಯಾಣದ ಗುರುಗ್ರಾಮ್‌ಗೆ ಶಿಫ್ಟ್ ಆಗಿದ್ರೆ, ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಂದು ಗೇಮ್ ಪ್ಲ್ಯಾನ್ ನಡೆಯುತ್ತಿದೆ. ಮೈತ್ರಿ ಸರ್ಕಾರದ 12 ಅತೃಪ್ತ ಶಾಸಕರು ದೆಹಲಿಯಲ್ಲೇ ಬೀಡು ಬಿಟ್ಟಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜೊತೆಗೆ ಚರ್ಚೆ ನಡೆಸಲು ಬಿಎಸ್‌ವೈ ಈಗಾಗಲೇ ಸಮಯ ನೀಡಿದ್ದಾರೆ ಎನ್ನಲಾಗಿದೆ. ಇಂದು ಮಧ್ಯಾಹ್ನದವರೆಗೆ ಅತೃಪ್ತ ಶಾಸಕರ ಸಹಿ ಪಡೆದು ಅದನ್ನು ಬಿಜೆಪಿ ಹೈಕಮಾಂಡ್‌ಗೆ ನೀಡಲು ಪ್ಲ್ಯಾನ್ ರೆಡಿಯಾಗಿದೆ. ಈ ಬಾರಿ ಇದರಲ್ಲಿ ರಾಜ್ಯ ಬಿಜೆಪಿಗರು ಫೇಲ್ ಆದ್ರೆ ಮತ್ತೆ ಹೈಕಮಾಂಡ್ ಎದುರು ಮುಜುಗರ ಅನುಭವಿಸುವ ಸಾಧ್ಯತೆಗಳು ಹೆಚ್ಚಿವೆ.
ದೋಸ್ತಿ ಸರ್ಕಾರ ಬಂದಾಗಿನಿಂದಲು ಒಂದಿಲ್ಲೊಂದು ಸಮಸ್ಯೆಗಳು ಎದುರಾಗುತ್ತಲೇ ಇವೆ. ರಾಜ್ಯ ರಾಜಕಾರಣದಲ್ಲಿ ಬಿರುಸಿನ ವಿದ್ಯಮಾನಗಳು ನಡೆಯುತ್ತಿವೆ. ಅದರಲ್ಲೂ ರಮೇಶ ಜಾರಕಿಹೊಳಿ ವಿಚಾರ ಸರಕಾರಕ್ಕೆ ಪದೇ ಪದೇ ಮುಜುಗರ ಉಂಟು ಮಾಡ್ತಿದೆ. ಜೊತೆಗೆ ಕೆಲ ಕಾಂಗ್ರೆಸ್ ಶಾಸಕರು ಸಂಪರ್ಕಕಕ್ಕೆ ಸಿಗದಿರುವುದು ಬಿಜೆಪಿಯ ಆಪರೇಷನ್ ಕಮಲ ಸಕ್ಸಸ್ ಆಗುತ್ತಾ ಅನ್ನೋ ಆತಂಕವನ್ನು ಕಾಂಗ್ರೆಸಿಗರಲ್ಲಿ ಹುಟ್ಟು ಹಾಕ್ತಿದೆ. ಇದರ ಜೊತೆಗೆ ರಮೇಶ್ ಜಾರಕಿಹೊಳಿ ಆಪ್ತ ಎಂದೇ ಗುರುತಿಸಿಕೊಂಡಿರುವ ಅಥಣಿ ಶಾಸಕ ಮಹೇಶ ಕುಮಟಳ್ಳಿ ಕೂಡ ಈಗ ಕಾಂಗ್ರೆಸ್‌ಗೆ ಕೈ ಕೊಡ್ತಾರಾ ಅನ್ನೋ ಡೌಟ್ ಶುರುವಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಕಳೆದ 5 ದಿನಗಳಿಂದ ಕ್ಷೇತ್ರದ ಶಾಸಕ ಮಹೇಶ್ ಕುಮಟಳ್ಳಿ ನಾಪತ್ತೆಯಾಗಿದ್ದಾರೆ. ಅವರ ಮೊಬೈಲ್ ಕೂಡ ಸ್ವಿಚ್ಆಪ್ ಆಗಿದ್ದು ಅವರು ಮಹಾರಾಷ್ಟ್ರದಲ್ಲಿ ಬಿಡು ಬಿಟ್ಟಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಒಂದಡೆ ಮೈತ್ರಿ ಸರ್ಕಾರವನ್ನು ಮುಳುಗಿಸಲು ಕೇಸರಿ ಪಡೆ ಆಪರೇಷನ್ ಕಮಲ ನಡೆಸ್ತಿದೆ ಅನ್ನೋ ಆರೋಪ ಕೇಳಿ ಬರ್ತಿದೆ. ಇದಕ್ಕೆ ಪ್ರತಿಯಾಗಿ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಕೂಡ ಪ್ರತಿತಂತ್ರ ಹೆಣೆಯುತ್ತಿದೆ. ಈ ಸಂಬಂಧ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸಂಪುಟದ ಸಚಿವರು ಸಭೆ ನಡೆಸಿದ್ರು. ಕಾಂಗ್ರೆಸ್ ಸಚಿವರ ಸಭೆಯಲ್ಲಿ ಆಪರೇಷನ್ ಕಮಲದ ವಿಚಾರವೇ ಚರ್ಚೆಯಾಯ್ತು. ಕಾಂಗ್ರೆಸ್‌ಗೆ ಸೇರುವ ಶಾಸಕರಿಗೆ ಸಚಿವ ಸ್ಥಾನವನ್ನೇ ಬಿಟ್ಟುಕೊಡುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಸಚಿವ ಕೆ.ಜೆ.ಜಾರ್ಜ್, ಪ್ರಿಯಾಂಕ್ ಖರ್ಗೆ, ಕೃಷ್ಣಬೈರೇಗೌಡ ಹಾಗೂ ಡಿ.ಕೆ.ಶಿವಕುಮಾರ್ ಕೇಸರಿ ಪಡೆ ತಂತ್ರಕ್ಕೆ ಪ್ರತಿತಂತ್ರ ಹೆಣೆಯುವ ಬಗ್ಗೆ ಸಮಾಲೋಚನೆ ನಡೆಸಿದ್ರು.