ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಸೇರಿದಂತೆ ಅನೇಕ ಕ್ರಿಕೆಟಿಗರ ಗುರು ರಮಾಕಾಂತ್ ಅಚ್ರೇಕರ್ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅಚ್ರೇಕರ್ ಬುಧವಾರ ಸಂಜೆ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದರು. ಇಂದು ಅವರ ಅಂತ್ಯಕ್ರಿಯೆ ನೆರವೇರಿತು. ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಶಿಷ್ಯ ಸಚಿನ್ ತೆಂಡೂಲ್ಕರ್, ಪಾರ್ಥೀವ ಶರೀರಕ್ಕೆ ಹೆಗಲು ಕೊಟ್ಟು ಗುರುವಿಗೆ ಗೌರವ ಸೂಚಿಸಿದ್ರು. ಅಂತ್ಯಕ್ರಿಯೆಯಲ್ಲಿ ಮತ್ತೊಬ್ಬ ಪಾಲ್ಗೊಂಡಿದ್ದ ಶಿಷ್ಯ ವಿನೋದ್ ಕಾಂಬ್ಳಿ ಗುರುವಿನ ಅಗಲಿಕೆಯ ದು:ಖ ತಾಳಲಾರದೇ ಬಿಕ್ಕಿ ಬಿಕ್ಕಿ ಅಳುತ್ತಿದ್ರು.
1932ರಲ್ಲಿ ಜನಿಸಿದ್ದ ಅಚ್ರೇಕರ್, ಮುಂಬೈನ ದಾದರ್‌ನಲ್ಲಿರುವ ಶಿವಾಜಿಪಾರ್ಕ್‌ನಲ್ಲಿ ‘ಕಾಮತ್ ಮೆಮೋರಿಯಲ್ ಕ್ರಿಕೆಟ್ ಕ್ಲಬ್’ನಲ್ಲಿ ಯುವ ಕ್ರಿಕೆಟಿಗರಿಗೆ ತರಬೇತಿ ನೀಡುತಿದ್ದರು. ಅಜಿತ್ ಅಗರ್ಕರ್, ಸಂಜಯ್ ಬಂಗಾರ್, ಬಲ್ವಿಂದರ್ ಸಿಂಗ್ ಸಂಧು, ವಿನೋದ್ ಕಾಂಬ್ಳಿ, ಪ್ರವೀಣ್ ಆಮ್ರೆ, ರಮೇಶ್ ಪೊವಾರ್, ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವು ಆಟಗಾರರು ಕೂಡ ಅವರ ಬಳಿ ತರಬೇತಿ ಪಡೆದಿದ್ದಾರೆ.