ಮಗಳನ್ನು ಉಳಿಸಿಕೊಳ್ಳಬೇಕೆಂದು ಕಷ್ಟಪಟ್ಟ ಮಾರಮ್ಮ ದೇವಸ್ಥಾನದ ಅಡುಗೆ ಭಟ್ಟ ಪುಟ್ಟಸ್ವಾಮಿಗೆ ಮಗಳ ಅಂತ್ಯಕ್ರಿಯೆಗೆ ಹೋಗುವುದಕ್ಕೂ ಸಾಧ್ಯವಾಗಿಲ್ಲ. ಸುಳ್ವಾಡಿ ವಿಷಪ್ರಸಾದ ದುರಂತದಲ್ಲಿ ಮಗಳನ್ನು ಕಳೆದುಕೊಂಡ ಅಡುಗೆ ಭಟ್ಟ ಪುಟ್ಟಸ್ವಾಮಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಚೇತರಿಸಿಕೊಂಡ ಕೂಡಲೇ ಘಟನೆ ಬಗ್ಗೆ ಅವರು ವಿವರಿಸಿದ್ದಾರೆ.
ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಪುಟ್ಟಸ್ವಾಮಿಗೆ ಈಗ ಸಂಪೂರ್ಣ ಮಾತನಾಡಲು ಸಾಧ್ಯವಾಗುತ್ತಿದ್ದು, ಘಟನೆ ಬಗ್ಗೆ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ದುರಂತ ನಡೆದ ದಿನದ ಘಟನೆಯನ್ನು, ಅಂದಿನ ಸ್ಥಿತಿಯ ಬಗ್ಗೆ ಸ್ಪಷ್ಟವಾಗಿ ವಿವರಿಸಿದ್ದಾರೆ. ಮಗಳನ್ನು ಬದುಕಿಸಲು ಹರಸಾಹಸ ಪಟ್ಟಿರುವ ಅಡುಗೆ ಭಟ್ಟ ಪುಟ್ಟಸ್ವಾಮಿ, ಅಸ್ವಸ್ಥಳಾಗಿದ್ದ ಮಗಳನ್ನ ಸ್ಕೂಟರ್ನಲ್ಲೇ 15 ಕಿಲೋಮೀಟರ್ ಕರೆತಂದಿದ್ದರು. ತಾನು ವಿಷ ಪ್ರಸಾದ ತಿಂದು ಅಸ್ವಸ್ಥನಾಗಿದ್ದೀನಿ ಎಂದು ತಿಳಿದಿದ್ದರೂ ಮಗಳನ್ನ ಉಳಿಸಲು ಸಾಹಸ ಪಟ್ಟಿದ್ದರು. ಹೊಟ್ಟೆಯಲ್ಲಿ ತುಂಬಾ ನೋವಾಗುತ್ತಿದ್ದರೂ ಮಗಳನ್ನ ಉಳಿಸುವ ಪ್ರಯತ್ನ ಮಾಡಿದ್ದರು ಪುಟ್ಟಸ್ವಾಮಿ. ಮಗಳು ಸತ್ತ ನಂತರ, ತನ್ನ ಜೀವವಾದರೂ ಉಳಿಸಿಕೊಳ್ಳೋಣ ಎಂದುಕೊಂಡು ಆಸ್ಪತ್ರೆ ಸೇರಿದ್ದರು.
ಚೇತರಿಸಿದ ನಂತರ ಮಾತನಾಡಿದ ಪುಟ್ಟಸ್ವಾಮಿ,”ಮಗಳನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂಬ ನೋವಿದೆ. ಮಗಳ ಅಂತ್ಯಕ್ರಿಯೆಗೆ ಹೋಗುವುದಕ್ಕೂ ದೇವರು ಅವಕಾಶ ಕೊಡಲಿಲ್ಲ. ಅಡುಗೆಯಲ್ಲಿ ವಿಷ ಹಾಕಿದವರಿಗೆ ಕಠಿಣ ಶಿಕ್ಷೆಯಾಗಬೇಕು” ಎಂದಿದ್ದಾರೆ.
ವಿಷಪ್ರಸಾದ ಸೇವಿಸಿ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿದೆ. ಅಸ್ವಸ್ಥರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.