Friday, September 20, 2024

ರಾಷ್ಟ್ರ ರಾಜಕಾರಣದಲ್ಲಿ ಅಗಸ್ಟಾ ಟಾಕ್​ವಾರ್​..! ಏನಿದು ಅಗಸ್ಟಾ ವೆಸ್ಟ್​ಲ್ಯಾಂಡ್​ ಹಗರಣ?

ಇಷ್ಟು ದಿನ ರಫೇಲ್‌ ಡೀಲ್ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿತ್ತು. ರಫೇಲ್​ ಗುತ್ತಿಗೆ ವಿಚಾರದಲ್ಲಿ ನಡೆದಿದೆ ಎನ್ನಲಾದ ಹಗರಣದ ವಿಚಾರ ಹಸಿ ಹಸಿಯಾಗಿರುವಾಗಲೇ ಯುಪಿಎ ಕಾಲದಲ್ಲಿ ನಡೆದ ಹಗರಣವೊಂದು ಮತ್ತೆ ಸದ್ದು ಮಾಡ್ತಿದೆ. ರಾಷ್ಟ್ರ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಹಾಗೂ ರಕ್ಷಣಾ ಸಚಿವರನ್ನೇ ಆರೋಪಿ ಸ್ಥಾನದಲ್ಲಿ ನೋಡುವಂತೆ ಮಾಡಿದ್ದ ಅಗಸ್ಟಾ ವೆಸ್ಟ್​ಲ್ಯಾಂಡ್​ ಪ್ರಕರಣಕ್ಕೆ ಮತ್ತೆ ಜೀವ ಬಂದಿದೆ. ಲೋಕಸಭಾ ಚುನಾವಣೆ ಸಮೀಪ ಇರುವಾಗಲೇ ಎದ್ದಿರುವ ಈ ಹಲ್​ಚಲ್​ ಕಾಂಗ್ರೆಸ್​ ಅನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಕೂಡ ಇದೆ..
ಅಗಸ್ಟಾ ವೆಸ್ಟ್‌ ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿಯ ಮಧ್ಯವರ್ತಿ ಅರ್ಥಾತ್​ ಕಿಂಗ್​ಪಿನ್​ ಆಗಿರುವ ಬ್ರಿಟನ್‌ ಪ್ರಜೆ ಕ್ರಿಸ್ಟಿಯನ್‌ ಮಿಷೆಲ್​​ ಜೇಮ್ಸ್​​ ಭಾರತಕ್ಕೆ ಹಸ್ತಾಂತರವಾಗಿದ್ದಾನೆ. ಈ ಮೂಲಕ ರಾಷ್ಟ್ರರಾಜಕಾರಣದಲ್ಲಿ ರಾಷ್ಟ್ರೀಯ ಪಕ್ಷಗಳ ವಾಕ್ಸಮರಕ್ಕೆ ಮತ್ತಷ್ಟು ಮೈಲೆಜ್​ ನೀಡುವ ಸಾಧ್ಯತೆ ಇದೆ..ಎಲ್ಲಕ್ಕಿಂತ ಹೆಚ್ಚಾಗಿ ಆತ ನೀಡುವ ಮಾಹಿತಿ ಮೇಲೆ ಕೆಲ ರಾಜಕಾರಣಿಗಳ ಭವಿಷ್ಯ ಕೂಡ ನಿರ್ಧಾರವಾದ್ರೆ ,ಕೈ ಪಡೆಗಂತೂ ಭಾರಿ ಮುಜುಗರ ತರುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ..
ಅಗಸ್ಟಾ ವೆಸ್ಟ್‌ ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿ ಹಗರಣ ಸಂಬಂಧ ಕಿಂಗ್​ಪಿನ್​ ​ ಕ್ರಿಸ್ಟಿಯನ್​ಮಿಷೆಲ್​​​​ಗಾಗಿ ಭಾರತ ರಾಜತಾಂತ್ರಿಕ ಹೆಜ್ಜೆ ಇಟ್ಟಿತ್ತು. ಇದರ ಫಲವಾಗಿ ನವೆಂಬರ್‌ನಲ್ಲಿ ಇಟಲಿಯ ಕ್ಯಾಸ್ಸೇಷನ್‌ ಕೋರ್ಟ್‌ ಮಿಷೆಲ್​​ ನನ್ನು ಭಾರತಕ್ಕೆ ಹಸ್ತಾಂತರಿಸಬಹುದು ಎಂದು ತೀರ್ಪು ನೀಡಿತ್ತು. ಈ ತೀರ್ಪಿನ ಬೆನ್ನಿಗೆ ಅವರನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆಗಳು ಆರಂಭಗೊಂಡಿದ್ದವು. ಇದಕ್ಕಾಗಿ ವಾರದ ಮೊದಲೇ ಸಿಬಿಐ ತಂಡವೊಂದು ದುಬೈಗೆ ತೆರಳಿ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿತ್ತು. ಈ ತಂಡವೀಗ ಅವರನ್ನು ಭಾರತಕ್ಕೆ ಕರೆತಂದಿದೆ. ಮಂಗಳವಾರ ಮಧ್ಯರಾತ್ರಿ ನವದೆಹಲಿಗೆ ಬಂದಿಳಿಯುತ್ತಿದ್ದಂತೆ ಪ್ರಕರಣಕ್ಕೆ ಮರುಜೀವ ಸಿಕ್ಕಿದೆ.
ಮಂಗಳವಾರ ಕ್ರಿಸ್ಟಿಯನ್​ ಮಿಷೆಲ್​​ ನನ್ನ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತರಲಾಗಿತ್ತು. ಅಲ್ಲಿಂದ ಅವರನ್ನು ಸಿಬಿಐ ತಂಡ ನವದೆಹಲಿಗೆ ಕರೆತಂದಿದೆ. 54 ವರ್ಷದ ಮಿಷೆಲ್​​ ನನ್ನು ತನಗೆ ಹಸ್ತಾಂತರಿಸುವಂತೆ ಗಲ್ಫ್ ದೇಶಗಳಿಗೆ 2017ರಲ್ಲೇ ಭಾರತ ಮನವಿ ಮಾಡಿಕೊಂಡಿತ್ತು. ಅಗಸ್ಟಾ ವೆಸ್ಟ್‌ಲ್ಯಾಂಡ್‌ ವಿವಿಐಪಿ ಹೆಲಿಕಾಪ್ಟರ್‌ ಖರೀದಿ ಹಗರಣದ ತನಿಖೆ ನಡೆಸಿದ್ದ ಸಿಬಿಐ ಮತ್ತು ‘ಇಡಿ’ ಯ ಶಿಫಾರಸ್ಸಿನ ಮೇಲೆ ಭಾರತ ಈ ಬೇಡಿಕೆಯನ್ನು ಇಟ್ಟಿತ್ತು.
2009ರಲ್ಲಿ ಮನಮೋಹನ್‌ ಸಿಂಗ್‌ ಸರಕಾರ ಅಸ್ತಿತ್ವದಲ್ಲಿದ್ದಾಗ ಗಣ್ಯ ವ್ಯಕ್ತಿಗಳ ಪ್ರಯಾಣಕ್ಕೆ 12 ವಿವಿಐಪಿ ಹೆಲಿಕಾಪ್ಟರ್‌ಗಳ ಅಗತ್ಯವಿದೆ ಎಂದು ವಾಯು ಸೇನೆ ಪ್ರಸ್ತಾವನೆ ಸಲ್ಲಿಸಿತ್ತು. ಮರು ವರ್ಷವೇ ಈ ಪ್ರಸ್ತಾವನೆ ಮೇಲೆ ಹೆಲಿಕಾಪ್ಟರ್​ಗಳನ್ನು ಖರೀದಿಸಲು ಡೀಲ್‌ನ್ನು ಅಗಸ್ಟಾ ವೆಸ್ಟ್‌ಲ್ಯಾಂಡ್‌ ಕಂಪನಿಗೆ ನೀಡಲಾಗಿತ್ತು. 2010ರ ಫೆಬ್ರವರಿ 8ರಂದು ಈ ಡೀಲ್‌ಗೆ ಭಾರತ ಸರಕಾರ ಸಹಿ ಹಾಕಿತ್ತು. ಒಟ್ಟು 556.262 ಮಿಲಿಯನ್‌ ಯೂರೋ ಅಂದರೆ 3,600 ಕೋಟಿ ರೂಪಾಯಿ ಮೊತ್ತದ ಡೀಲ್‌ ಇದಾಗಿತ್ತು.
ಆದರೆ ಈ ಡೀಲ್​ ನಡೆದ ಬೆನ್ನಿಗೆ ಇದರಲ್ಲಿ ಹಗರಣ ನಡೆದಿದೆ ಎಂಬ ಆರೋಪಗಳು ಕೇಳಿ ಬಂದವು. ಅಗಸ್ಟಾ ವೆಸ್ಟ್‌ಲ್ಯಾಂಡ್‌ಗೆ ಡೀಲ್‌ ದೊರೆಯುವಂತೆ ಮಾಡಲು ತಾಂತ್ರಿಕ ನಿಯಮಗಳನ್ನು ಬದಲಾಯಿಸಲಾಗಿದೆ ಎಂಬುದು ಪ್ರಮುಖ ಆರೋಪವಾಗಿತ್ತು. ಈ ಒಂದು ವಿಚಾರ ಯುಪಿಎ ಸರ್ಕಾರದ ಬುಡವನ್ನೇ ಅಲ್ಲಾಡಿಸೋಕೆ ಶುರುಮಾಡಿದಾಗ ಇದರ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು.
ಆರಂಭದಲ್ಲಿ 6,000 ಮೀಟರ್‌ ಎತ್ತರದಲ್ಲಿ ಹಾರುವ ಸಾಮರ್ಥ್ಯ ಇರುವ ಹೆಲಿಕಾಪ್ಟ್‌ರ್​ಗಳಿಗೆ ಬೇಡಿಕೆ ಇಡಲಾಗಿತ್ತು. ಆದರೆ ಅಗಸ್ಟಾ ವೆಸ್ಟ್‌ಲ್ಯಾಂಡ್‌ಗೆ ಡೀಲ್‌ ಸಿಗಬೇಕು ಎಂಬ ಒಂದೇ ಕಾರಣಕ್ಕೆ ಇದನ್ನು 4,500 ಮೀಟರ್‌ಗಳಿಗೆ ಇಳಿಸಲಾಯಿತು. ಈ ರೀತಿಯ ತಾಂತ್ರಿಕ ಮಾರ್ಪಾಡುಗಳನ್ನು ಮಾಡಿ ಡೀಲ್‌ ಕುದುರುವಂತೆ ಮಾಡಲು ಲಂಚ ಪಾವತಿ ಮಾಡಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿ ಈ ಡೀಲ್​ನಲ್ಲಿ ಕೇಳಿಬಂದಿದ್ದಿತ್ತು.
ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಮಾರ್ಚ್‌ 14, 2013ರಲ್ಲಿ ಸಿಬಿಐ ಎಫ್‌ಐಆರ್ ದಾಖಲಿಸಿತ್ತು. ಐಎಎಫ್‌ ಮುಖ್ಯಸ್ಥ ಎಸ್‌.ಪಿ. ತ್ಯಾಗಿ ಮತ್ತು 12 ಮಂದಿ ಇತರರು ಹಾಗೂ ಕಂಪನಿಗಳನ್ನು ಇದರಲ್ಲಿ ಆರೋಪಿಗಳಾಗಿ ಹೆಸರಿಸಲಾಗಿತ್ತು. ಆರೋಪಿಗಳ ಪಟ್ಟಿಯಲ್ಲಿ ತ್ಯಾಗಿ ಕುಟುಂಬಸ್ಥರು ಮತ್ತು ಮಧ್ಯವರ್ತಿಗಳಾದ ಮಿಷೆಲ್​​, ಕಾರ್ಲೊ ಗೆರೋಸಾ ಮತ್ತು ಗೈಡೋ ಹಷ್ಕೆ ಹೆಸರುಗಳಿತ್ತು. ಇದೇ ಹೊತ್ತಿಗೆ ಲೇವಾದೇವಿ ಪ್ರತಿಬಂಧಕ ಕಾಯ್ದೆಯಡಿಯಲ್ಲಿ ‘ಇಡಿ’ಯೂ ಪ್ರಕರಣದ ತನಿಖೆಗೆ ಇಳಿಯಿತು.

ಹಗರಣದ ನಡೆದು ಬಂದ ದಾರಿ :  ಪ್ರಕರಣ ಶುರುವಾಗಿದ್ದು 2010ರಲ್ಲಿ . 2010ರಲ್ಲಿ ಯುಪಿಎ ಸರಕಾರ ರಾಷ್ಟ್ರಪತಿ, ಪ್ರಧಾನ ಮಂತ್ರಿ ಸೇರಿದಂತೆ ವಿವಿಐಪಿಗಳ ಪ್ರಯಾಣಕ್ಕಾಗಿ ಅಗಸ್ಟಾ ಹೆಲಿಕಾಪ್ಟರ್​​ ಖರೀದಿಗೆ ಕೇಂದ್ರ ಕೈಹಾಕಿತ್ತು. ಮತ್ತು ಬ್ರಿಟನ್ ಮೂಲದ ‘ಅಗಸ್ಟಾ ವೆಸ್ಟ್ ಲ್ಯಾಂಡ್’ ನಡುವೆ 12 ‘ಎಡಬ್ಲ್ಯೂ101′ ಹೆಲಿಕಾಪ್ಟರ್​ ಗಳ ಖರೀದಿಗೆ ಒಪ್ಪಂದ ನಡೆದಿತ್ತು. 3600 ಕೋಟಿ ರೂಪಾಯಿಗಳ ಬೃಹತ್ ಡೀಲ್ ಇದಾಗಿತ್ತು.
ಆದ್ರೆ ,ಈ ಒಪ್ಪಂದದಲ್ಲಿ ಹಗರಣ ನಡೆದಿರುವುದು ಬೆಳಕಿಗೆ ಬಂದಿತ್ತು. ಭಾರತದ ವಾಯು ಸೇನೆಯ ಜೊತೆ ಡೀಲ್ ಕುದುರಿಸಲು ಮಧ್ಯವರ್ತಿಗೆ ಲಂಚ ನೀಡಿದ ಆರೋಪದಲ್ಲಿ ಅಗಸ್ಟಾ ವೆಸ್ಟ್ ಲ್ಯಾಂಡ್ ಸಿಇಒ ಬ್ರುನೋ ಸ್ಪಾಗ್ನೋಲಿನ್ ಹಾಗೂ ಫಿನ್ಮೆಕಾನಿಕಾ ಎಂಬ ಇಟಲಿ ಮೂಲದ ಕಂಪೆನಿಯ ಅಧ್ಯಕ್ಷ ಗುಸೆಪ್ಪೆ ಒರ್ಸಿ ಬಂಧಿತರಾಗಿದ್ದರು. ಫಿನ್ಮೆಕಾನಿಕಾ ಕಂಪೆನಿಯೇ ಅಗಸ್ಟಾ ವೆಸ್ಟ್ ಲ್ಯಾಂಡ್ ಮಾತೃ ಕಂಪೆನಿ ಎಂಬುದು ಗಮನಾರ್ಹ. ಕೊನೆಗೆ ಭಾರತ ಸರಕಾರ ಈ ಡೀಲನ್ನೇ ರದ್ದುಗೊಳಿಸಿತ್ತು. ಅಂದಿನ ರಕ್ಷಣಾ ಸಚಿವ ಎ.ಕೆ.ಆ್ಯಂಟನಿ ಪ್ರಕರಣದ ತನಿಖೆಗೂ ಆದೇಶ ನೀಡಿದ್ದರು.
2014ರ ಆರಂಭದಲ್ಲಿ ಈ ಪ್ರಕರಣ ಇಟಲಿ ಕೋರ್ಟ್ ಮೆಟ್ಟಿಲೇರಿದಾಗ, ವಿಚಾರಣೆ ವೇಳೆ ಭಾರತೀಯ ವಾಯು ಸೇನೆ ಅಂದಿನ ಮುಖ್ಯಸ್ಥ ಎಸ್.ಪಿ ತ್ಯಾಗಿ ಹೆಸರೂ ಪ್ರಸ್ತಾಪವಾಗಿತ್ತು. ಮಾತ್ರವಲ್ಲ ಫಿನ್ಮೆಕಾನಿಕಾ ಕಂಪೆನಿ ಕಡೆಯಿಂದ ಅಗಸ್ಟಾ ವೆಸ್ಟ್ ಲ್ಯಾಂಡ್ ಜತೆ ಒಪ್ಪಂದ ಕುದುರಿಸಲು ತ್ಯಾಗಿಗೆ ಹಣ ಸಂದಾಯವಾಗಿದೆ ಎಂದೂ ಹೇಳಿತ್ತು. ಆದರೆ 2015ರಲ್ಲಿ ಪ್ರಕರಣದಿಂದ ತ್ಯಾಗಿಯನ್ನು ದೋಷಮುಕ್ತಗೊಳಿಸಿದ ಇಟಲಿ ನ್ಯಾಯಾಲಯ ಭಾರತದ ಅಧಿಕಾರಿಗಳ್ಯಾರೂ ಹಗರಣದಲ್ಲಿ ಭಾಗಿಯಾಗಿಲ್ಲ ಎಂದು ಹೇಳಿತ್ತು.
ಭಾರತೀಯ ವಾಯು ಸೇನೆ ಸಿಯಾಚಿನ್, ಟೈಗರ್ ಹಿಲ್ಸ್ ನಂಥಹ ಎತ್ತರದ ಪ್ರದೇಶಗಳಲ್ಲಿ ಪ್ರಯಾಣಿಸಲು ಸಾಧ್ಯವಿರುವ ಹೆಲಿಕಾಪ್ಟರ್ಗಳನ್ನು ಖರೀಸುವಂತೆ ರಕ್ಷಣಾ ಇಲಾಖೆ ಬಳಿ ಕೇಳಿಕೊಂಡಿತ್ತು. ಅದರಂತೆ ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಖರೀದಿಗೆ ಇಲಾಖೆ ಮುಂದಾಗಿತ್ತು. ಆದರೆ ಸವಿವರವಾಗಿ ‘ಎಡಬ್ಲ್ಯೂ101’ ಹೆಲಿಕಾಪ್ಟರನ್ನು ಪರೀಕ್ಷೆಗೆ ಒಳಪಡಿಸಿದಾಗ ಸಮುದ್ರ ಮಟ್ಟದಿಂಸ 6,000 ಮೀಟರಿಗಿಂತ ಎತ್ತರದ ಪ್ರದೇಶದಲ್ಲಿ ಹೆಲಿಕಾಪ್ಟರ್ ಓಡಾಡಲು ಸಾಧ್ಯವಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿತ್ತು. ಇದರಿಂದ ಉದ್ದೇಶಿತ ಬೇಡಿಕೆಯನ್ನೇ ಅಗಸ್ಟಾ ಪೂರೈಸಲು ಶಕ್ತವಾಗಿರಲಿಲ್ಲ. ಆರೋಪಿ ಮಧ್ಯವರ್ತಿ ಗೈಡೋ ಹಶ್ಚ್ಕೆ ಕೂಡಾ ವಾಯುಸೇನೆಯ ಬೇಡಿಕೆಯನ್ನು ‘ಎಡಬ್ಲ್ಯೂ101’ ನೀಗಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು ಎನ್ನಲಾಗಿದೆ.
ಅಗಸ್ಟಾ ವೆಸ್ಟ್​ಲ್ಯಾಂಡ್​ ಡೀಲ್ ಕುದುರಿದ್ದು ಹೇಗೆ? : ಆಗಿದ್ದರೂ ಈ ಡೀಲ್ ಕುದುರಿದ್ದೇ ಅಚ್ಚರಿಯ ಸಂಗತಿ. ಈ ಸಂದರ್ಭದಲ್ಲಿ ಅಗಸ್ಟಾ ಕಂಪೆನಿ ಡೀಲ್ ಕುದುರಿಸಲು ಸುಮಾರು 200 ಕೋಟಿ ಲಂಚ ನೀಡಿತ್ತು. ಇದರಲ್ಲಿ ಸುಮಾರು 140 ಕೋಟಿಯನ್ನು ಹಶ್ಚ್ಕೆ ಮತ್ತು ಕಾರ್ಲೊ ಗೆರೋಸಾ ಮೂಲಕ ಪಾವತಿ ಮಾಡಲಾಗಿತ್ತು. ಮುಂದೆ ಬಿಡುಗಡೆಯಾದ ಸಿಬಿಐ ವರದಿಯಲ್ಲಿ, ತ್ಯಾಗಿ ವಾಯು ಸೇನೆ ಮುಖ್ಯಸ್ಥರಾಗುವವರೆಗೆ ವಾಯು ಸೇನೆ ಕೆಳ ಹಂತದಲ್ಲಿ ಹಾರಾಟ ಮಾಡುವ ಹೆಲಿಕಾಪ್ಟರ್ ಖರೀದಿಗೆ ವಿರೋಧ ವ್ಯಕ್ತಪಡಿಸುತ್ತಾ ಬಂದಿತ್ತು ಎಂದು ಹೇಳಿತ್ತು. ಆದರೆ ತ್ಯಾಗಿ ಬಂದ ಮೇಲೆ ಬದಲಾಯಿತು ಎಂದು ಷರಾ ಬರೆದಿತ್ತು. ತ್ಯಾಗಿ ಆಗಮನದ ನಂತರ ಉದ್ದೇಶಿತ ಹಾರಾಟದ ಸಾಮರ್ಥ್ಯವನ್ನು ಕಡಿಮೆ ಮಾಡಲಾಗಿತ್ತು. ಈ ಮೂಲಕ ಅಗಸ್ಟಾ ವೆಸ್ಟ್ ಲ್ಯಾಂಡಿಗೆ ಮತ್ತೆ ಬಿಡ್ಡಿನಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು.
ಇಟಲಿಯ ಅಧಿಕಾರಿಗಳ ಪ್ರಾಥಮಿಕ ತನಿಖೆಗಳ ಪ್ರಕಾರ, ಡೀಲ್ ನಡೆಯುವುದಕ್ಕೆ ಮೊದಲು ತ್ಯಾಗಿ ಖುದ್ದು ಹಶ್ಚ್ಕೆಯನ್ನು ಭೇಟಿಯಾಗಿದ್ದರು. ತ್ಯಾಗಿಯ ಸಹೋದರ ಜೂಲಿ, ಸಂದೀಪ್ ಮತ್ತು ಡಿಸ್ಕಾ ಮೂಲಕ ಹಣ ಚಲಾವಣೆಯಾಗಿತ್ತು. ಆದರೆ ಹಶ್ಚ್ಕೆ ಭೇಟಿಯಾಗಿರುವುದನ್ನು ತ್ಯಾಗಿ ತಳ್ಳಿಹಾಕಿದರು.. ಮಿಲಾನ್ ನ್ಯಾಯಾಲಯ ತನ್ನ ಆದೇಶದಲ್ಲಿಯೂ ತ್ಯಾಗಿ ಹೆಸರನ್ನು ಪ್ರಸ್ತಾಪಿಸಿತ್ತು. ವೈರುಧ್ಯ ಸೂಚನೆಗಳು ಇಲ್ಲದ ಕಾರಣ ಮಿಲಿಟರಿಗಾಗಿ ಭಾರತ ಸರಕಾರ ಖರೀದಿಸಲು ಹೊರಟಿದ್ದ 3,600 ಕೋಟಿ ಮೊತ್ತದ ಪ್ರಕರಣದಲ್ಲಿ ಅಗಸ್ಟಾ ವೆಸ್ಟ್ ಲ್ಯಾಂಡ್ ಪರವಾಗಿ ನಿಂತಿದ್ದಕ್ಕೆ ತ್ಯಾಗಿ ಕುಟುಂಬ ಪ್ರತಿಫಲ ಪಡೆದಿತ್ತು ಎಂದು ಹೇಳಿತ್ತು.
ಇದಿಷ್ಟೇ ಅಲ್ಲ ಮಿಲಾನ್ ನ್ಯಾಯಾಲಯ ಕಾರ್ಲೊಸ್ ಗೆರೊಸಾ, ಕ್ರಿಸ್ಟಿಯನ್ ಮಿಶೆಲ್ ಮತ್ತು ಗುಲ್ಡೊ ಹಶ್ಚ್ಕೆ ನಡುವೆ ನಡೆದ ಸಂಭಾಷಣೆಯನ್ನು ವಿಚಾರಣೆಗೆ ಎತ್ತಿಕೊಂಡಿತ್ತು. ಈ ಸಂಭಾಷಣೆಗಳಲ್ಲಿ ಮೂವರೂ ಆರೋಪಿಗಳು ‘ಮಿಸೆಸ್ ಗಾಂಧಿ’ ಮತ್ತು ಅವರ ಆಪ್ತರಾದ ಅಹ್ಮದ್ ಪಟೇಲ್ ಹಾಗೂ ಪ್ರಣಬ್ ಮುಖರ್ಜಿ ವಿಐಪಿಗಳ ಬೆನ್ನಿಗಿದ್ದಾರೆ ಎಂದು ಮಾತಾಡಿಕೊಂಡಿದ್ದರು.
ಅಗಸ್ಟಾ ವೆಸ್ಟ್ ಲ್ಯಾಂಡ್ ಮಾರಾಟ ಮತ್ತು ಲೈಸನ್ಸ್ ವಿಭಾಗದ ಭಾರತೀಯ ಪ್ರತಿನಿಧಿ ಪೀಟರ್ ಹುಲೆಟ್​ಗೆ ಕ್ರಿಷ್ಟಿಯನ್ ಮೈಖೆಲ್ ಬರೆದ ಪತ್ರದಲ್ಲಿ, ಆತ್ಮೀಯ ಪೀಟರ್, ವಿಐಪಿಗಳ ಹಿಂದೆ ಮಿಸೆಸ್ ಗಾಂಧಿ ಇದ್ದು ಅವರು ಎಂ18ನಲ್ಲಿ ಪ್ರಯಾಣಿಸಲಾರರು. ಶ್ರೀಮತಿ ಗಾಂಧಿ ಮತ್ತು ಅವರ ಆತ್ಮೀಯರಾದ ಹಿರಿಯ ಸಲೆಹೆಗಾರರು, ನಿಸ್ಸಂಶಯವಾಗಿ ಪ್ರಧಾನಮಂತ್ರಿ ಮನ್ ಮೋಹನ್ ಸಿಂಗ್ ಮತ್ತು ಅಹ್ಮದ್ ಪಟೇಲ್ ಇದರ ಹಿಂದಿದ್ದಾರೆ ಎಂದು ಬರೆದಿದ್ದರು. ಆದರೆ ಯುಪಿಎ ಸರಕಾರ ಮುಂದೆ ಇದನ್ನು ತಳ್ಳಿ ಹಾಕಿತ್ತು. ಮಾತ್ರವಲ್ಲ ಮುಚ್ಚಿಡಲು ಏನೂ ಇಲ್ಲ ಎಂದು ಹೇಳಿತ್ತು.

ಅಗಸ್ಟಾ ವಿಚಾರವಾಗಿ ‘ಇಡಿ’ ತನಿಖೆಯಲ್ಲಿ ಮಿಷೆಲ್‌ ತಮ್ಮ ದುಬೈ ಮೂಲದ ಗ್ಲೋಬಲ್‌ ಸರ್ವಿಸಸ್‌ ಸಂಸ್ಥೆ ಮೂಲಕ ದೆಹಲಿಯಲ್ಲಿರುವ ಮಾಧ್ಯವೊಂದಕ್ಕೆ ಹಣ ಪಾವತಿ ಮಾಡಿದ್ದು ತಿಳಿದು ಬಂದಿತ್ತು. ಈ ಹಣವನ್ನು ಮಿಷೆಲ್​ ಗೆ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಪಾವತಿ ಮಾಡಿತ್ತು. ಇದರಲ್ಲಿ ಇಬ್ಬರು ಭಾರತೀಯರೂ ಪಾಲುದಾರರಾಗಿದ್ದರು. ಆ ಇಬ್ಬರೂ ಭಾರತೀಯರೇ ಗಾಂಧಿ ಕುಟುಂಬಕ್ಕೆ ತಲೆ ನೋವು ತಂದಿಟ್ಟರು ಅನ್ನಬಹುದು
ಗಾಂಧಿ ಕುಟುಂಬದ ಆಳಿಯ ರಾರ್ಬಟ್​ ವಾದ್ರಾ ಅವರೇ ಈ ಬೇನಾಮಿ ಕಂಪೆನಿಯ ಸಹ ಪಾಲುದಾರ ಆಗಿದ್ದಾರೆ ಅನ್ನುವ ಆರೋಪವಿದೆ. ಅಷ್ಟೆ ಅಲ್ಲ ಈ ಕಂಪೆನಿಯ ಮಧ್ಯವರ್ತಿಯಂತೆ ಕಾರ್ಯ ನಿರ್ವಹಣೆ ಮಾಡಿರೋದು ಸಂಜಯ್ ​ಭಂಡಾರಿ ಅನ್ನೋ ಶಸ್ತ್ರಾಸ್ತ್ರಗಳ ಉದ್ಯಮಿ. ರಾರ್ಬಟ್​ ವಾದ್ರಾ ಹಾಗೂ ಸಂಜಯ್​ ಭಂಡಾರಿ ಇಬ್ಬರು ನಿಕಟವರ್ತಿಗಳಾಗಿದ್ದು. ಈ ಬೆನಾಮಿ ಕಂಪೆನಿ ಮೂಲಕ ಲಂಡನ್​ನಲ್ಲಿ 18ಕೋಟಿ ಮೊತ್ತದ ಒಂದು ಪ್ಲಾಟ್​ ಖರೀದಿ ಮಾಡಿದ್ದರು..ಈ ಹೂಡಿಕೆಯ ಹಿಂದೆ ಅಗಸ್ಟಾ ವೆಸ್ಟ್​ಲ್ಯಾಂಡ್​ನ ಕಿಕ್​ ಬ್ಯಾಕ್​ ಹಣದ ಘಮಲು ಹರಡಿದ್ದು ಗಾಂಧಿ ಕುಟುಂಬದ ಮೇಲೆ ಆರೋಪ ಬರಲು ಕಾರಣವಾಯ್ತು ಅಂತಾನೆ ಹೇಳಲಾಗ್ತಿದೆ.
ಇದೆಲ್ಲದರ ಪರಿಣಾಮವಾಗಿ 2013ರ ಮಾರ್ಚ್‌ 25ರಂದು ಈ ಹೆಲಿಕಾಪ್ಟರ್‌ ಖರೀದಿ ಪ್ರಕ್ರಿಯೆಯಲ್ಲಿ ಹಗರಣ ನಡೆದಿದೆ ಎಂಬುದನ್ನು ಅಂದಿನ ರಕ್ಷಣಾ ಸಚಿವ ಎ.ಕೆ. ಆಂಟನಿ ಬಹಿರಂಗವಾಗಿ ಒಪ್ಪಿಕೊಂಡರು. ಅಷ್ಟೇ ಅಲ್ಲ ದೇಶದಲ್ಲಿ ನಡೆಯುತ್ತಿದ್ದ ತನಿಖೆ ಮತ್ತು ವಿರೋಧ ಪಕ್ಷಗಳ ಆರೋಪ ಹಾಗೂ ತನಿಖೆಯಲ್ಲಿ ಕೇಳಿ ಬಂದ ಕೆಲ ಆರೋಪಗಳ ಮುಜುಗರದಿಂದ ತಪ್ಪಿಸಿಕೊಳ್ಳಲು ಯುಪಿಎ ಸರಕಾರ ಅನಿವಾರ್ಯವಾಗಿ ಈ ಒಪ್ಪಂದದಿಂದ ಹಿಂದೆ ಸರಿಯಿತು.ಈ ಮೂಲಕ 2014ರಲ್ಲಿ ಇಟಲಿ ಮೂಲದ ಪಿನ್ಮೆಕ್ಕಾನಿಕಾ ಕಂಪನಿಯ ಉಪ ಸಂಸ್ಥೆ ಬ್ರಿಟನ್‌ನ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಜತೆಗಿನ ‘12 ಎಡಬ್ಲ್ಯೂ-101 ವಿವಿಐಪಿ’ ಹೆಲಿಕಾಪ್ಟರ್‌ ಖರೀದಿಯ ಒಪ್ಪಂದವನ್ನು ಸರಕಾರ ರದ್ದುಗೊಳಿಸಿತ್ತು.
ಇದಾದ ನಂತರವೂ ಪ್ರಕರಣದ ತನಿಖೆಯನ್ನು ಮುಂದುವರಿಸಿದ ಸಿಬಿಐ ಒಟ್ಟಾರೆ ಡೀಲ್‌ನಲ್ಲಿ ಸುಮಾರು 2,666 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಆರೋಪಿಸಿತ್ತು. ಅಷ್ಟೆ ಅಲ್ಲ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ರಾಜಕಾರಣಿಗಳು, ಅಧಿಕಾರಿಗಳು ಮತ್ತು ವಾಯುಸೇನೆ ಅಧಿಕಾರಿಗಳಿಗೆ ಲಂಚ ನೀಡಿದ್ದಕ್ಕಾಗಿ ಇಟಲಿ ನ್ಯಾಯಾಲಯ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಕಾರ್ಯನಿರ್ವಹಣಾಧಿಕಾರಿಗೆ 4 ವರ್ಷಗಳ ಜೈಲು ಶಿಕ್ಷೆ ವಿಧಿಸಿತು.ಈ ಮೂಲಕ ಈ ಪ್ರಕರಣ ವಿಶ್ವಮಟ್ಟದಲ್ಲೂ ಕೂಡ ಭಾರಿ ಸಂಚಲನ ಉಂಟು ಮಾಡಿತ್ತು..
2016ರ ಡಿಸೆಂಬರ್‌ ಹೊತ್ತಿಗೆ ಅಖಾಡಕ್ಕಿಳಿದ ಸಿಬಿಐ, ಮಾಜಿ ವಾಯುಸೇನೆ ಮುಖ್ಯಸ್ಥ ಎಸ್‌ಪಿ ತ್ಯಾಗಿ ಮತ್ತು ಅವರ ಕುಟುಂಬಸ್ಥರು, ವಕೀಲರನ್ನು ಬಂಧಿಸಿತು. 2017ರ ಸೆಪ್ಟಂಬರ್‌ಲ್ಲಿ ತ್ಯಾಗಿ ಮತ್ತು ಇತರ 9 ಜನರ ವಿರುದ್ಧ ಸಿಬಿಐ ಚಾರ್ಜ್‌ಶೀಟ್‌ ಕೂಡ ಸಲ್ಲಿಸಿದೆ.
ಇದೀಗ ಮಹತ್ವದ ಬೆಳವಣಿಗೆಯಲ್ಲಿ ಪ್ರಕರಣದ ಮೂವರು ಮಧ್ಯವರ್ತಿಗಳಲ್ಲಿ ಒಬ್ಬರಾದ ಮಿಷೆಲ್ ಭಾರತಕ್ಕೆ ಹಸ್ತಾಂತರವಾಗಿದ್ದಾರೆ. ಗೈಡೋ ಹಷ್ಕೆ ಮತು ಕಾರ್ಲೊ ಗೆರೋಸಾ ತಲೆ ಮರೆಸಿಕೊಂಡಿದ್ದಾರೆ. ಇಬ್ಬರ ವಿರುದ್ಧವೂ ‘ಇಡಿ’ ಮತ್ತು ‘ಸಿಬಿಐ’ ಎರಡೂ ಸಂಸ್ಥೆಗಳ ಮನವಿ ಮೇರೆಗೆ ಇಂಟರ್‌ಪೋಲ್‌ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸಿವೆ. ಭಾರತದಲ್ಲಿ ಇಬ್ಬರ ಮೇಲೂ ಜಾಮೀನು ರಹಿತ ವಾರಂಟ್‌ ಜಾರಿಯಲ್ಲಿದೆ. ಆದರೆ ಅವರು ಮಾತ್ರ ಇನ್ನೂ ಸಿಕ್ಕಿಲ್ಲ.
ಈ ಡೀಲ್‌ ಕುದುರಲು ಅಗಸ್ಟಾ ವೆಸ್ಟ್‌ಲ್ಯಾಂಡ್‌ ಸುಮಾರು 423 ಕೋಟಿ ರೂಪಾಯಿ ಕಿಕ್‌ಬ್ಯಾಕ್‌ ನೀಡಿದ ಆರೋಪ ಎದುರಿಸುತ್ತಿದೆ. ಅದರಲ್ಲಿ ಹೆಚ್ಚಿನ ಹಣವನ್ನು ಇದೇ ಮಿಷೆಲ್ ನಿರ್ವಹಣೆ ಮಾಡಿದ್ದಾನೆ ಎನ್ನಲಾಗಿದ್ದು, ವಿಚಾರಣೆ ವೇಳೆ ಆತನ ನೀಡಲಿರುವ ಮಾಹಿತಿಗಳು ಪ್ರಾಮುಖ್ಯತೆ ಪಡೆಯಲಿವೆ.
ಕಾಂಗ್ರೆಸ್‌ಗೆ ಮುಖಭಂಗ :  ಈ ಬೆಳವಣಿಗೆ ರಫೇಲ್‌ ಡೀಲ್ ಸಂಬಂಧ ಕೇಂದ್ರ ಸರಕಾರವನ್ನು ಪ್ರಶ್ನಿಸುತ್ತಿರುವ ಕಾಂಗ್ರೆಸ್‌ನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲಿದೆ ಎಂದುಕೊಳ್ಳಲಾಗಿದೆ. ಮಿಷೆಲ್‌ ಹಸ್ತಾಂತರ ಭಾರತದ ರಾಜತಾಂತ್ರಿಕ ಗೆಲುವು,” ಎಂದು ಈಗಾಗಲೇ ಬಿಜೆಪಿ ಹೇಳಿಕೊಳ್ಳಲು ಆರಂಭಿಸಿದೆ. ಜತೆಗೆ ‘ಇದು ಕಾಂಗ್ರೆಸ್‌ಗೆ ಭಾರಿ ಸಮಸ್ಯೆ ತಂದೊಡ್ಡಲಿದೆ’ ಎಂದು ಬಿಜೆಪಿ ವಲಯದಿಂದ ಹೇಳಿಕೆಗಳು ಹೊರಬರುತ್ತಿರೋದು ಕೈ ಪಡೆಗೆ ಭಾರಿ ಮುಖಭಂಗವಾಗುವ ಸಾಧ್ಯತೆಯನ್ನ ತೆರೆದಿಡುತ್ತಿದೆ.

ಬಹಿರಂಗವಾಗುತ್ತಾ ಕೋಡ್​ವರ್ಡ್? : ಇನ್ನು ಈ ಹಗರಣದಲ್ಲಿ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ರಕ್ಷಣಾ ಸಚಿವ ಎ.ಕೆ.ಆಂಟನಿ, ವಾಯುಸೇನೆ ಮಾಜಿ ಮುಖ್ಯಸ್ಥ ಎಸ್.ಪಿ.ತ್ಯಾಗಿ, ಅಹ್ಮದ್ ಪಟೇಲ್ ವಿರುದ್ಧ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲ ಲಂಚ ಸಲ್ಲಿಕೆಯಾಗಿರುವುದನ್ನು ಕೋಡ್​ವರ್ಡ್​ಗಳಲ್ಲಿ ನಮೂದಿಸಿರುವ ಡೈರಿ ಈಗಾಗಲೇ ಸಿಬಿಐಗೆ ಸಿಕ್ಕಿದ್ದು.ಇದರಲ್ಲಿರುವ ಕೋಡ್​ವರ್ಡ್​ಗಳನ್ನು ಮಿಷೆಲ್ ಬಹಿರಂಗಪಡಿಸಿದರೆ ರಾಜಕೀಯ ಸಂಚಲನ ಉಂಟಾಗುವುದು ಖಚಿತ.

RELATED ARTICLES

Related Articles

TRENDING ARTICLES