ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುವ ಸೂಚನೆ ನೀಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಾವುದಾದರು ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿರೋ ನಿಖಿಲ್, ‘ನೋಡೋಣ, ಮುಂದಿನ ದಿನಗಳಲ್ಲಿ ಏನಾಗುತ್ತೆ ಅಂತ. ನಿಜ ಹೇಳ್ಬೇಕಂದ್ರೆ ಇವತ್ತು ನಮ್ಮ ಕುಟುಂಬವನ್ನು ಇಷ್ಟಪಡುವ ಜನ ಸಿಕ್ಕಾಪಟ್ಟೆ ಇದ್ದಾರೆ.
ಹಲವು ಜಿಲ್ಲೆಗಳಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯ ಮಾಡ್ತಿದ್ದಾರೆ. ಇಲ್ಲ ಅಂತ ನಾನು ಹೇಳ್ತಾ ಇಲ್ಲ. ನಾನು ಕೂಡ ಯೋಚ್ನೆ ಮಾಡ್ತೀನಿ. ತಂದೆ ಅವರೊಂದಿಗೆ ಕುಳಿತು ಚರ್ಚಿಸಿ ತೀರ್ಮಾನಕ್ಕೆ ಬರ್ತೀನಿ ಅಂತ ಹೇಳಿದ್ರು. ‘ಎಲ್ಲಿ ಮಲಗಿದ್ಯಮ್ಮಾ’ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರೋ ನಿಖಿಲ್, ”ಎಲ್ಲಿದ್ರಿ, ಎಲ್ಲಿ ಹೋಗಿದ್ರು ಅನ್ನೋ ಅರ್ಥದಲ್ಲಿ ಎಲ್ಲಿ ಮಲಗಿದ್ರಿ ಅಂತ ಹೇಳ್ಬಹುದು. ಯಾಕಾಗಿ ತಪ್ಪಾಗಿ ಅರ್ಥ ಮಾಡಿಕೊಂಡು, ವಿಶ್ಲೇಷಿಸುತ್ತಿದ್ದಾರೋ ಗೊತ್ತಿಲ್ಲ. ಇದು ಮನಸ್ಸಿಗೆ ದುಃಖವಾಗ್ತಿದೆ” ಅಂದ್ರು. ಸಾಲಮನ್ನಾ ಮಾಡ್ತಾರೆ..! ಸಾಲಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ನಿಖಿಲ್ , ”ಸರ್ಕಾರದ ಖಜಾನೆ ಸ್ಥಿತಿ ಏನಿದೆ ಅನ್ನೋದು ತಂದೆ ಅವ್ರಿಗೆ (ಕುಮಾರಸ್ವಾಮಿ ಅವರಿಗೆ) ಗೊತ್ತಿದೆ. ಅಷ್ಟು ಸುಲಭವಾಗಿ 44 ಸಾವಿರ ಕೋಟಿ ಇದ್ದಿದ್ರೆ ಯಾರು ಬೇಕಾದ್ರು ಮನ್ನಾ ಮಾಡಿ ಬಿಡ್ತಿದ್ರು. ಅದರಲ್ಲಿ ವಿಶೇಷ ಏನಿಲ್ಲ. ಆದರೆ, ಕುಮಾರಣ್ಣ ಅವ್ರು ಸಂಪೂರ್ಣ ಸಾಲಮನ್ನಾ ಮಾಡ್ಬೇಕು ಅಂತ ಭಾವನೆ ಇಟ್ಕೊಂಡಿದ್ದಾರೆ. ನಾನೇಳೋದು ಇಷ್ಟೇ, ಮುಂದಿನ ಲೋಕಸಭಾ ಚುನಾವಣೆ ಒಳಗಾಗಿ ಶೇಕಡ 50-60 ರಷ್ಟು ಸಾಲಮನ್ನಾ ಮಾಡ್ತಾರೆ ಅಂತ ಹೇಳಿದ್ದಾರೆ. ಮಾಡೇ ಮಾಡ್ತಾರೆ” ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ.