ದಕ್ಷಿಣ ಕನ್ನಡ: ಪ್ರೇತ, ದೆವ್ವದ ಕಾಟ ಇದೆಯೆಂದು ಮಂತ್ರವಾದಿಗಳು ಜನರನ್ನು ಮೂರ್ಖರನ್ನಾಗಿಸುವುದು ಕೇಳಿದ್ದೇವೆ. ಆದರೆ ಬುದ್ಧಿವಂತರ ಜಿಲ್ಲೆಯೆಂದು ಕರೆಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರೇತ ಕಾಟ ಇದೆಯೆಂದು ಕುಟುಂಬವೊಂದು ವೇದನೆ ಪಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದಲ್ಲಿ ಉಮೇಶ್ ಶೆಟ್ಟಿ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಮನೆಯವರಿಗೆ ಪ್ರೇತ ಕಾಣುತ್ತಿದೆಯೆಂದು ಹೇಳುತ್ತಿದ್ದು ಜನರು ಗಾಬರಿಗೊಂಡು ರಾತ್ರಿಯೆಲ್ಲ ಪರಿಸರದಲ್ಲಿ ಸೇರುತ್ತಿದ್ದಾರೆ. ಇಬ್ಬರು ಹೆಣ್ಣು ಮಕ್ಕಳೊಂದಿಗೆ ನೆಲೆಸಿರುವ ಉಮೇಶ್ ಶೆಟ್ಟಿ ದಂಪತಿ, ಮನೆಯಲ್ಲಿ ಪ್ರೇತ ಭಯ ಕಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ರಾತ್ರಿ ಮನೆಯಲ್ಲಿ ಪ್ರೇತ ಮಲಗಲು ಬಿಡುತ್ತಿಲ್ಲ, ಬಟ್ಟೆಗಳನ್ನು ಸುಟ್ಟು ಹಾಕುತ್ತಿದೆ, ಪಾತ್ರೆಗಳನ್ನು ಎಸೆಯುತ್ತಿದೆ, ಮನೆಯ ಸುತ್ತ ದೆವ್ವ ಓಡಾಡಿದ ಅನುಭವ ಆಗುತ್ತಿದೆ ಎಂದು ಹೇಳುತ್ತಿದ್ದಾರೆ.
ಇದನ್ನೂ ಓದಿ :ಹೊಟ್ಟೆಗೆ ಹಿಟ್ಟಿಲ್ಲದೆ, ಸ್ಮಶಾಣದ ಮುಂದೆ ಭಿಕ್ಷೆ ಬೇಡುವ ಸ್ಥಿತಿಗೆ ಬಂದ ಬಿಜೆಪಿ ನಾಯಕ
ಮನೆಯವರ ಮಾತು ಕೇಳಿ ಸ್ಥಳೀಯ ನಿವಾಸಿಗಳು ಕುತೂಹಲದಿಂದ ಸ್ಥಳದಲ್ಲಿ ಸೇರುತ್ತಿದ್ದಾರೆ. ರಾತ್ರಿ ವೇಳೆ ಬಂದು ಪ್ರೇತ ಎಲ್ಲಿದೆ ಎಂದು ಹುಡುಕಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಮನೆಯಲ್ಲಿ ಇದ್ದಕ್ಕಿದ್ದಂತೆ ಬಟ್ಟೆಗಳಿಗೆ ಬೆಂಕಿ ಹತ್ತಿರುವುದು, ಪರಿಸರದಲ್ಲಿ ಅಸ್ಪಷ್ಟ ಶರೀರವೊಂದು ಓಡಾಡುತ್ತಿರುವುದನ್ನು ಮೊಬೈಲ್ ನಲ್ಲಿ ಮನೆಯವರು ಸೆರೆಹಿಡಿದಿದ್ದಾರೆ. ಆದರೆ ಸ್ಥಳೀಯ ನಿವಾಸಿಗಳು ದೆವ್ವದ ಕಾಟವನ್ನು ನಂಬಲು ತಯಾರಿಲ್ಲ.
ಮೂರು ತಿಂಗಳಿನಿಂದ ಈ ರೀತಿ ದೆವ್ವ ಕಾಟ ಕೊಡುತ್ತಿದೆ ಎಂದು ಉಮೇಶ್ ಶೆಟ್ಟಿ ಕುಟುಂಬಸ್ಥರು ಹೇಳುತ್ತಿದ್ದು ನಾಲ್ಕು ದಿನಗಳಿಂದ ಪ್ರೇತ ಕಾಟ ಹೆಚ್ಚಾಗಿದೆ ಎನ್ನುತ್ತಿದ್ದಾರೆ. ಇವರ ಮಾತು ಕೇಳಿ ಸ್ಥಳೀಯ ಜನರಿಗೆ ಕುತೂಹಲದ ಜೊತೆ ಭಯ ಕಾಡತೊಡಗಿದ್ದು. ರಾತ್ರಿ ವೇಳೆಯೂ ಉಮೇಶ್ ಶೆಟ್ಟಿ ಕುಟುಂಬಸ್ಥರಿಗೆ ಧೈರ್ಯ ತುಂಬುತ್ತಿದ್ದಾರೆ. ಕೆಲವರು, ದೆವ್ವದ ಕಾಟ ಯಾರದ್ದು ಎನ್ನುವ ಬಗ್ಗೆ ಸತ್ಯಶೋಧನೆ ಮಾಡುವುದಕ್ಕೂ ಹೊರಟಿದ್ದಾರೆ. ಒಟ್ಟಿನಲ್ಲಿ ದೆವ್ವದ ಕಾಟ ಇದೆಯೆಂಬ ಭ್ರಮೆಯಲ್ಲಿ ಕುಟುಂಬ ಸದಸ್ಯರು ಭೀತಿಗೊಳಗಾದಂತೆ ವರ್ತಿಸುತ್ತಿದ್ದು, ಮೂಢನಂಬಿಕೆಯಿಂದಲೇ ಈ ರೀತಿ ಮಾಡುತ್ತಿದ್ದಾರೆ ಎನ್ನುವ ಮಾತು ಕೇಳಿಬಂದಿದೆ.