ದೆಹಲಿ: ಎಮ್‌ಎಸ್‌ಪಿ(MSP) ಜೊತೆಗೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಂಜಾಬ್‌ನ ರೈತರು ದೆಹಲಿಯ ಶಂಭು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಪ್ರತಿಭಟನೆ ಜಾಥ ಮೂಲಕ ದೆಹಲಿಯತ್ತ ಹೊರಟಾಗ ಪೊಲೀಸರು ಮತ್ತು ರೈತರ ನಡುವೆ ವಾಗ್ವಾದ ನಡೆದಿದೆ. ಪೊಲೀಸರು ಬ್ಯಾರಿಕೇಡ್‌ಗಳನ್ನು ಬಲಪಡಿಸುವ ಮೂಲಕ ರೈತರನ್ನು ತಡೆದಿದ್ದಾರೆ. ಶಂಭು ಗಡಿಯಿಂದ ಹರಿಯಾಣಕ್ಕೆ ಬರುತ್ತಿರುವ ರೈತರನ್ನು ತಡೆಯಲು ಲಾಠಿ ಚಾರ್ಜ್ ಬದಲಿಗೆ ಭದ್ರತಾ ಸಿಬ್ಬಂದಿ ಕೆಲವು ವಿನೂತನ ತಂತ್ರಗಳನ್ನು ಬಳಸಿದ್ದಾರೆ.
ಕೇಂದ್ರ ಸರ್ಕಾರದ ಜೊತೆ ಮಾತುಕತೆ ವಿಫಲವಾದ ಹಿನ್ನೆಲೆ, ದೆಹಲಿಯ ಶಂಭು ಗಡಿಯಲ್ಲಿ101 ರೈತರ ಗುಂಪು, ಶಂಭು ಗಡಿಯಿಂದ ದೆಹಲಿಗೆ ತಮ್ಮ ಪಾದಯಾತ್ರೆಯನ್ನು ಆರಂಭಿಸಿದ್ರು. ಆದ್ರೆ, ಪೊಲೀಸರು ರೈತರ ಪಾದಯಾತ್ರೆಯನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ರೈತರು ಈ ಹಿಂದೆ ಫೆಬ್ರವರಿಯಲ್ಲಿ ರಾಜಧಾನಿಗೆ ಮೆರವಣಿಗೆ ಮಾಡುವ ಮೊದಲ ಪ್ರಯತ್ನ ವಿಫಲವಾದಾಗಿನಿಂದ ಅಂದಿನಿಂದಲೂ ಗಡಿಯಲ್ಲಿ ಪ್ರತಿಭಟನೆ ನಡೆಸ್ತಿದ್ದಾರೆ. ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ಸೇರಿದಂತೆ ತಮ್ಮ ವಿವಿಧ ಸುಮಾರು ಹನ್ನೆರಡು ಬೇಡಿಕೆಗಳನ್ನು ಈಡೇರಿಸುವಂತೆ ಸಂಯುಕ್ತ ಕಿಸಾನ್ ಮೋರ್ಚಾ ರಾಜಕೀಯೇತರ ಬ್ಯಾನರ್ ಅಡಿಯಲ್ಲಿ ಪ್ರತಿಭಟನೆ ನಡೆಯುತ್ತಿದೆ.
ಇದನ್ನೂ ಓದಿ : ಮಹಾಯುತಿ ಸರ್ಕಾರದ ಪದಗ್ರಹಣ ವೇಳೆ 12 ಲಕ್ಷ ಮೌಲ್ಯದ ವಸ್ತುಗಳು ಕಳವು !
ಶಂಭು ಗಡಿ ಪ್ರತಿಭಟನಾ ಸ್ಥಳದಿಂದ ದೆಹಲಿಯ ಸಂಸತ್ ಭವನಕ್ಕೆ ಪಾದಯಾತ್ರೆ ಮಧ್ಯಾಹ್ನ 1 ಗಂಟೆಗೆ ಪ್ರಾರಂಭವಾಯ್ತು, ಆಗ ರೈತರ ಮೇಲೆ ಅಶ್ರುವಾಯು ಪ್ರಯೋಗಿಸಿ ಪಾದಯಾತ್ರೆ ಹತ್ತಿಕ್ಕುವ ಸಲುವಾಗಿ, ಹರಿಯಾಣ ಪೊಲೀಸರು ಶಂಭು ಗಡಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಿದ್ದಾರೆ. ರೈತರು ರಾಷ್ಟ್ರ ರಾಜಧಾನಿ ಕಡೆಗೆ ಹೋಗುವುದನ್ನು ತಡೆಯಲು ಪೊಲೀಸರು ಬ್ಯಾರಿಕೇಡ್‌ಗಳ ಜೊತೆಗೆ ಕಬ್ಬಿಣದ ಮೊಳೆಗಳನ್ನು ರಸ್ತೆಗೆ ಹೊಡೆದಿರುವುದು ಅನ್ನದಾತರ ಆಕ್ರೋಶಕ್ಕೆ ಮತ್ತಷ್ಟು ಕಾರಣವಾಗಿದೆ.
ಪಂಜಾಬ್‌ನ ಪ್ರತಿಭಟನಾನಿರತ ರೈತರು ಪಂಜಾಬ್‌ನಲ್ಲಿ ಬಿಜೆಪಿ ನಾಯಕರ ಪ್ರವೇಶವನ್ನು ಪ್ರತಿಭಟಿಸುವುದಾಗಿ ಬೆದರಿಕೆ ಹಾಕಿದ್ದಾರೆ. ರೈತ ಮುಖಂಡ ಸರ್ವಣ್ ಸಿಂಗ್ ಪಂಢೇರ್ ಮಾತನಾಡಿ, ಕಿಸಾನ್ ಮಜ್ದೂರ್ ಮೋರ್ಚಾ ಹಾಗೂ ಸಂಯುಕ್ತ ಕಿಸಾನ್ ಮೋರ್ಚಾದ ಪ್ರತಿಭಟನೆ ಮೂನ್ನೂರನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಕೇಂದ್ರ ಸರ್ಕಾರ ಬೇಡಿಕೆ ಈಡೇರಿಸಲ್ಲ, ರೈತರ ಬೇಡಿಕೆ ಈಡೇರಿವ ತನಕ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದ್ದಾರೆ.
ಪೊಲೀಸರು ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಶೆಲ್‌ಗಳನ್ನು ಹಾರಿಸುವುದನ್ನು ಮುಂದುವರೆಸಿದ್ರು. ಸಹಜವಾಗಿ ರೈತರು ನಾನಾ ತೊಂದರೆಗಳನ್ನು ಎದುರಿಸಿದ್ದಾರೆ. ಪ್ರಬಲವಾದ ಅಶ್ರುವಾಯಯುವಿನಿಂದ ಕೆಲ ರೈತರ ಗಂಟಲು ಮತ್ತು ಕಣ್ಣುಗಳಿಗೆ ಪೆಟ್ಟಾಗಿದೆ, ಬಳಿಕ ಸ್ಥಳೀಯ ಆಸ್ಪತ್ರೆಗೆ ಗಾಯಗೊಂಡ ರೈತರನ್ನು ಸ್ಥಳಾಂತರಿಸಲಾಯ್ತು.
ರೈತರು ಬೆಳೆದ ಬೆಂಬಲ ಬೆಲೆಗೆ ಕಾನೂನಿನ ಮಾನ್ಯತೆ ನೀಡುವುದು, ಡಾ. ಸ್ವಾಮಿನಾಥನ್ ವರದಿ ಜಾರಿ ಮಾಡುವುದು, ರೈತರ ಕೃಷಿ ಸಾಲ ಮನ್ನಾ, ರೈತರು ಮತ್ತು ರೈತ ಕಾರ್ಮಿಕರಿಗೆ ಪಿಂಚಣಿ, ವಿದ್ಯುತ್ ದರದಲ್ಲಿ ಹೆಚ್ಚಳ ಮಾಡಬಾರದು, ರೈತರ ಪ್ರಕರಣಗಳನ್ನು ಹಿಂಪಡೆಯಬೇಕು ಮತ್ತು 2021ರ ಲಖಿಂಪುರ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯಕ್ಕಾಗಿ ರೈತರು ಬಿಗಿಪಟ್ಟು ಹಿಡಿದಿದ್ದಾರೆ.