ಚೆನ್ನೈ: ಪೆರಿಯಾರ್ ಪ್ರತಿಮೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತು ಡಿಎಂಕೆ ಸಂಸದೆ ಕನಿಮೊಳಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣಗಳಲ್ಲಿ ಬಿಜೆಪಿ ನಾಯಕ ಎಚ್.ರಾಜಾ ಅವರನ್ನು ಇಲ್ಲಿನ ನ್ಯಾಯಾಲಯ ದೋಷಿ ಎಂದು ಹೇಳಿದ್ದು, ಶಿಕ್ಷೆ ವಿಧಿಸಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯೂ ಆಗಿರುವ ರಾಜಾ ಅವರಿಗೆ ಎರಡೂ ಪ್ರಕರಣಗಳಲ್ಲಿ ಆರು ತಿಂಗಳ ಸಾದಾ ಜೈಲು ಮತ್ತು ಒಟ್ಟು ₹6 ಸಾವಿರ ದಂಡ ವಿಧಿಸಿ ಸೋಮವಾರ ತೀರ್ಪು ನೀಡಿದೆ. ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಾಧ್ಯವಾಗುವಂತೆ ನ್ಯಾಯಾಲಯವು ಶಿಕ್ಷೆಯನ್ನು 30 ದಿನಗಳವರೆಗೆ ಅಮಾನತಿನಲ್ಲಿರಿಸಿದೆ.
ತೀರ್ಪಿನ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರಾಜಾ, ‘ನಮ್ಮ ವಕೀಲರ ತಂಡವು ಮುಂದಿನ ಕಾನೂನು ಹೋರಾಟದ ಬಗ್ಗೆ ನಿರ್ಧರಿಸಲಿದೆ’ ಎಂದು ಹೇಳಿದರು. 2018ರಲ್ಲಿ ದುಷ್ಕರ್ಮಿಗಳು ಚೆನ್ನೈನಲ್ಲಿ ಪೆರಿಯಾರ್ ಅವರ ಪ್ರತಿಮೆ ಧ್ವಂಸಗೊಳಿಸಿದ್ದರು. ಅದಕ್ಕೆ ಸಂಬಂಧಿಸಿದಂತೆ ರಾಜಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ ಸಂದೇಶ ವಿವಾದಕ್ಕೆ ಕಾರಣವಾಗಿತ್ತು. ಕನಿಮೊಳಿ ವಿರುದ್ಧ ಅವರು ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದರು.