ಢಾಕಾ: ಬಾಂಗ್ಲಾದೇಶದಲ್ಲಿ ಇಸ್ಕಾನ್ ಚಟುವಟಿಕೆಯನ್ನು ನಿಷೇಧಿಸುವ ಸ್ವಯಂ ಪ್ರೇರಿತ ಆದೇಶವನ್ನು ಜಾರಿಗೊಳಿಸಲು ಢಾಕಾ ಹೈಕೋರ್ಟ್ ಗುರುವಾರ ನಿರಾಕರಿಸಿದ್ದು, ಇದು ಬಾಂಗ್ಲಾದೇಶ್ ಸರ್ಕಾರಕ್ಕೆ ತೀವ್ರ ಮುಖಭಂಗಕ್ಕೀಡು ಮಾಡಿದೆ. ಇಸ್ಕಾನ್ ನಿಷೇಧಕ್ಕೆ ಸಂಬಂಧಿಸಿದಂತೆ ಬಾಂಗ್ಲಾ ಸರ್ಕಾರದ ಅಧಿಕಾರಿಗಳೇ ಅಗತ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಿದೆ.
ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ವಕೀಲ ಮೊಹಮ್ಮದ್ ಮೋನಿರ್ ಉದ್ದೀನ್, ಇಸ್ಕಾನ್ ಗೆ ಸಂಬಂಧಿಸಿದ ಸುದ್ದಿ ಪ್ರಕಟಿಸಿದ್ದ ಹಲವಾರು ದಿನಪತ್ರಿಕೆಗಳ ವರದಿಯನ್ನು ಪೀಠಕ್ಕೆ ಸಲ್ಲಿಸಿದ್ದರು. ಇಸ್ಕಾನ್ ಚಟುವಟಿಕೆಗೆ ಸಂಬಂಧಿಸಿದ ವರದಿಗಳು ಇದಾಗಿದ್ದು, ಇದನ್ನು ಪರಿಶೀಲಿಸಬೇಕು. ಅಲ್ಲದೇ ಹೈಕೋರ್ಟ್ ಇಸ್ಕಾನ್ ಸಂಘಟನೆಯನ್ನು ನಿಷೇಧಿಸಿ, ಚತ್ತೋಗ್ರಾಮ್, ರಂಗ್ ಪುರ್ ಹಾಗೂ ದಿನಾಜ್ ಪುರ್ ನಲ್ಲಿ ಸೆಕ್ಷನ್ 144 ಜಾರಿಗೊಳಿಸಲು ಆದೇಶ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದರು.
ಹೈಕೋರ್ಟ್ ಪೀಠದ ಜಸ್ಟೀಸ್ ಫರಾಹ್ ಮೆಹಬೂಬ್ ಮತ್ತು ಜಸ್ಟೀಸ್ ದೇಬಸೀಸ್ ರಾಯ್ ಚೌಧುರಿ, ಇತ್ತೀಚೆಗಿನ ಇಸ್ಕಾನ್ ಚಟುವಟಿಕೆಗೆ ಸಂಬಂಧಿಸಿದಂತೆ ಸರ್ಕಾರ ಕೈಗೊಂಡ ಕ್ರಮಗಳ ಸಂಪೂರ್ಣ ವಿವರ ನೀಡುವಂತೆ ಸೂಚಿಸಿರುವುದಾಗಿ ವರದಿ ವಿವರಿಸಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ್ದ ಹಿಂದೂ ಮುಖಂಡ, ಇಸ್ಕಾನ್ ನ ಚಿನ್ಮಯ್ ಕೃಷ್ಣದಾಸ್ ಬ್ರಹ್ಮಚಾರಿಯನ್ನು ದೇಶದ್ರೋಹ ಆರೋಪದ ಮೇಲೆ ಬಾಂಗ್ಲಾ ಸರ್ಕಾರ ಬಂಧಿಸಿತ್ತು. ಬಳಿಕ ಇಸ್ಕಾನ್ ಸಂಘಟನೆ ನಿಷೇಧಿಸುವಂತೆ ಕೋರಿ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿತ್ತು.
ಆದರೆ ಇದಕ್ಕೆ ಒಪ್ಪದ ಬಾಂಗ್ಲಾ ಹೈಕೋರ್ಟ್ ಇಸ್ಕಾನ್ನನ್ನು ನಿಷೇದಿಸುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದೆ.