ಮುಂಬೈ: ಬಹು ನಿರೀಕ್ಷಿತ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಐದು ದಿನಗಳು ಬಾಕಿಯಿದೆ. ನ.20ಕ್ಕೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ನ.23ಕ್ಕೆ ಫಲಿತಾಂಶ ಹೊರಬೀಳಲಿದೆ. 288 ಸದಸ್ಯ ಬಲದ ವಿಧಾನಸಭೆಗೆ ಸರಳ ಬಹುಮತಕ್ಕೆ 145 ಸ್ಥಾನ ಬೇಕಿದೆ.
ಲೋಕಪಾಲ್ ಸಂಸ್ಥೆಯು ಚುನಾವಣಾ ಪೂರ್ವ ಸಮೀಕ್ಷೆಯನ್ನು ನಡೆಸಿದ್ದು, ಮ್ಯಾಟ್ರಿಜ್ ನಡೆಸಿದ್ದ ಸಮೀಕ್ಷೆಗಿಂತ ಭಿನ್ನವಾಗಿದೆ. ಮಹಾಯುತಿ ಒಕ್ಕೂಟದ ಅಡಿಯಲ್ಲಿ ಬಿಜೆಪಿ – ಶಿವಸೇನೆ ಶಿಂಧೆ – ಎನ್ಸಿಪಿ ಅಜಿತ್ ಪವಾರ್ ಪಕ್ಷ, ಮಹಾ ವಿಕಾಸ್ ಅಘಾಡಿ ಅಡಿಯಲ್ಲಿ ಶಿವಸೇನೆ ಠಾಕ್ರೆ – ಎನ್ಸಿಪಿ ಶರದ್ ಪವಾರ್ – ಕಾಂಗ್ರೆಸ್ ಒಟ್ಟಾಗಿ ಸ್ಪರ್ಧಿಸಲಿದೆ.ಆರು ಪಕ್ಷಗಳು ಸೇರಿದಂತೆ ಇತರ ಪಕ್ಷಗಳೂ ಸ್ಪರ್ಧಾ ಕಣದಲ್ಲಿವೆ.
ಮಹಾಯುತಿ ಒಕ್ಕೂಟ ಅಧಿಕಾರವನ್ನು ತಮ್ಮಲ್ಲೇ ಉಳಿಸಿಕೊಳ್ಳಲಿದೆ ಎಂದು ಮ್ಯಾಟ್ರಿಜ್ ಸಂಸ್ಥೆ ನಡೆಸಿದ್ದ ಸಮೀಕ್ಷೆಯಲ್ಲಿ ಹೇಳಲಾಗಿತ್ತು. ಆದರೆ, ಲೋಕಪಾಲ್ ಸರ್ವೇಯ ಪ್ರಕಾರ, ಬಿಜೆಪಿ ಮೈತ್ರಿಕೂಟ ಅಧಿಕಾರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುವುದಿಲ್ಲ.ಬಿಜೆಪಿ ನೇತೃತ್ವದ ಮಹಾಯುತಿ ಒಕ್ಕೂಟಕ್ಕೆ 115 ರಿಂದ 128 ಸ್ಥಾನ ಮಾತ್ರ ಸಿಗಲಿದೆ, ಆ ಮೂಲಕ ಅಧಿಕಾರವನ್ನು ಕಳೆದುಕೊಳ್ಳಲಿದೆ. ಇನ್ನೊಂದು ಕಡೆ, ಮಹಾ ವಿಕಾಸ್ ಅಘಾಡಿಗೆ 151 – 162 ಸ್ಥಾನ ಸಿಗುವ ಸಾಧ್ಯತೆಯಿದೆ ಎಂದು ಸಮೀಕ್ಷೆಯಲ್ಲಿ ಉಲ್ಲೇಖವಾಗಿದೆ.