ಬೆಂಗಳೂರು: ರಾಜಧಾನಿಯ ಮೆಟ್ರೋದ ಹಸಿರು ರೈಲು ಮಾರ್ಗವು ನಾಗಸಂದ್ರದಿಂದ ಮಾದಾವರಕ್ಕೆ 3.14 ಕಿಮೀ ವಿಸ್ತರಣೆಗೊಂಡಿದೆ. ಇಂದು ಮುಂಜಾನೆ 5 ಗಂಟೆಯಿಂದಲೇ ಹಸಿರು ಬಣ್ಣದ ಮೆಟ್ರೊ ಶುರುವಾಗಿದೆ.
ನಾಗಸಂದ್ರ ನಿಲ್ದಾಣದವರೆಗೂ ಹಸಿರು ಮಾರ್ಗ ಇದ್ದು, ನಾಗಸಂದ್ರದಿಂದ ಮಾದಾವರವರೆಗೂ ಮೆಟ್ರೋ ಮಾರ್ಗ ವಿಸ್ತರಣೆ ಮಾಡಲಾಗಿದೆ. ನಿನ್ನೆ ಡಿಸಿಎಂ ಡಿಕೆ ಶಿವಕುಮಾರ್, ಸಂಸದ ತೇಜಸ್ವಿ ಸೂರ್ಯ, ನೆಲಮಂಗಲ ಶಾಸಕ ಶ್ರೀನಿವಾಸ್, ಬಿಎಂಆರ್ಸಿಎಲ್ ಎಂಡಿ ಮಹೇಶ್ವರ್ ರಾವ್ ವಿಸ್ತರಿತ ಮಾರ್ಗದಲ್ಲಿ ಮೆಟ್ರೋ ಸಂಚಾರ ಮಾಡುವ ಮೂಲಕ ಪ್ರಾಯೋಗಿಕ ಚಾಲನೆ ನೀಡಿದ್ದರು.
ಮಾದಾವರದಿಂದ ಯಲಚೇನಹಳ್ಳಿಗೆ ಮೆಟ್ರೋ ತಲುಪಲಿದೆ. 6 ಬೋಗಿಗಳನ್ನು ಒಳಗೊಂಡಿರುವ ಹಸಿರು ಮೆಟ್ರೋ ಟ್ರೈನ್, 10 ನಿಮಿಷಕ್ಕೆ ಒಂದರಂತೆ ಈ ಮಾರ್ಗದಲ್ಲಿ ಪ್ರಯಾಣಿಸುತ್ತವೆ. ಒಂದು ಬಾರಿಗೆ 800 ರಿಂದ 1000 ಜನ ಸಂಚಾರ ಮಾಡಬಹುದು. 2017ರಲ್ಲಿ ಮಾದಾವರ ಮೆಟ್ರೋ ಕಾಮಗಾರಿ ಆರಂಭವಾಗಿತ್ತು. 298 ಕೋಟಿ ರೂಪಾಯಿ ವೆಚ್ಚದಲ್ಲಿ ಎಲಿವೇಟೆಡ್ ಮೆಟ್ರೋ ಮಾರ್ಗ ನಿರ್ಮಾಣ ಆಗಿದೆ.
ವಿಶೇಷವಾಗಿ ಯಾವುದೇ ವಿಐಪಿಗಳಿಲ್ಲದೆ ಮೆಟ್ರೋವನ್ನು ಜನರ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ತುಮಕೂರು ರಸ್ತೆಯಲ್ಲಿನ ಜನರ ದಟ್ಟಣೆಯನ್ನು ಕಡಿಮೆಗೊಳಿಸಲು ಇದು ಉಪಯುಕ್ತವಾಗಿದೆ ಎಂದು ಬಿಎಂಆರ್ಸಿಎಲ್ ಹೇಳಿದೆ.