ದಾವಣಗೆರೆ : ಜಗತ್ತಿನಲ್ಲಿ ಸಹಿಸಿಕೊಳ್ಳಲಾಗದ ಸತ್ಯ ಎಂದರೆ ಪದೇ ಪದೇ ಕಾಡುವ ನೋವು, ಅರಗಿಸಿಕೊಳ್ಳಲಾಗದ ವಿಚಾರ ಎಂದರೆ ಸಾವು, ಇಲ್ಲೊಂದು ಕುಟುಂಬದಲ್ಲಿ ಇದೇ ಆಗಿದ್ದು, ಮನೆ ಬಿದ್ದು ಕೂದಲೆಳೆ ಅಂತರದಲ್ಲಿ ಕುಟುಂಬ ಪಾರಾಗಿತ್ತು, ಇಲ್ಲಿ ಪಾರಾಗಿದ್ರು ಯಮರಾಯ ಬಿಡ್ಬೇಕಲ್ಲ, ಇಂದು ಅಪಘಾತದಲ್ಲಿ ಎಂಟು ವರ್ಷದ ಪುತ್ರಿ ಸಾವನ್ನಪ್ಪಿದ್ದು ಇಡಿ ಕುಟುಂಬದಲ್ಲಿ ಸ್ಮಶಾನ ಮೌನ ಆವರಿಸಿದೆ.
ದಾವಣಗೆರೆಯ ಚಿಕ್ಕಕುರುಬರಹಳ್ಳಿಯಲ್ಲಿ ಕಷ್ಟಪಟ್ಟು ದುಡಿತ ಇದ್ದ ನಾಗರಾಜ್ ಮತ್ತು ಅಕ್ಷತಾ ದಂಪತಿಗಳು ತಮ್ಮ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದರು, ಆದ್ರೆ ವಿಧಿಯಾಟ ಭಾರೀ ಮಳೆಯಿಂದ ಎಲ್ಲರು ಮನೆಯಲ್ಲಿದ್ದಾಗ ಮನೆ ಬಿದ್ದು ಬಿಟ್ಟಿತ್ತು, ಈ ವೇಳೆ ನಾಗರಾಜ್ ಮತ್ತು ಅಕ್ಷತಾಗೆ ಗಂಭೀರ ಪೆಟ್ಟಾಗಿ, ನಾಗರಾಜ್ ಗೆ ಕಾಲು ಕೈ ಮುರಿತಗೊಂಡಿದ್ರೆ, ಇತ್ತ ಅಕ್ಷತಾಗೆ ಕೈ ಮೂಳೆ ಮುರಿದಿದ್ದರಿಂದ ಮನೆಯಲ್ಲಿ ಜೀವನ ಸಾಗಿಸೋದು ದಂಪತಿಗಳಿಗೆ ಕಷ್ಟವಾಗಿತ್ತು, ಹೀಗಾಗಿ ಗೆದ್ದಲಹಟ್ಟಿಯಲ್ಲಿರುವ ಸಂಬಂಧಿಕರ ಮನೆಗೆ ಕುಟುಂಬ ಆಗಮಿಸಿ ಹೇಗೋ ಜೀವನ ಸಾಗಿಸುತ್ತಿದ್ದರು. ಆದರೆ ಇಂದು ಈ ದಂಪತಿಯ 8ವರ್ಷದ ಮುದ್ದಿನ ಮಗಳು ರಸ್ತೆ ದಾಟುವಾಗ ಅಪಘಾತವಾಗಿ ಕೊನೆಯುಸಿರೆಳೆದಿದ್ದಾಳೆ.
ರಸ್ತೆ ದಾಟುವಾಗ ಕಾರು ಡಿಕ್ಕಿಯಾಗಿ ಬಾಲಕಿ ಸ್ಥಳದಲ್ಲೆ ಸಾವನ್ನಪ್ಪಿದ್ದಾಳೆ, ಎಂಟು ವರ್ಷದ ರೂಪಾ ಮೃತಪಟ್ಟ ದುರ್ದೈವಿ ಬಾಲಕಿಯಾಗಿದ್ದು, ವೇಗವಾಗಿ ಕಾರು ಬಂದು ಗುದ್ದಿದೆ, ಗುದ್ದಿದ ರಭಸಕ್ಕೆ ಬಾಲಕಿ ಸಾವನ್ನಪ್ಪಿದ್ದಾಳೆ, ಇನ್ನೂ ಬಾಲಕಿಯನ್ನ ಅದೇ ಕಾರಿನಲ್ಲಿ ಡ್ರೈವರ್ ಕರೆದುಕೊಂಡು ಹೋಗಿದ್ದು ಅದಾಗಲೇ ಬಾಲಕಿ ಪ್ರಾಣ ಪಕ್ಷಿ ಹಾರಿ ಹೋಗಿದೆ, ಕಾರನ್ನ ಆಸ್ಪತ್ರೆ ಬಳಿ ಬಿಟ್ಟು ಡ್ರೈವರ್ ಎಸ್ಕೇಪ್ ಆಗಿದ್ದಾನೆ, ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ..ಕಳೆದ ಕೆಲ ದಿನದ ಹಿಂದೆ ಇದೇ ರೀತಿ ಅಪಘಾತ ಆಗಿತ್ತು, ಪದೇ ಪದೇ ದುರಂತ ಸಂಭವಿಸಿದ್ರು ಹಂಪ್ಸ್ ಹಾಕಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ..
ಇನ್ನೂ ಅಪಘಾತ ಮಾಡಿದ್ದ ಕಾರನ್ನ ವಶಕ್ಕೆ ಪಡೆದ ಸಂತೆಬೆನ್ನೂರು ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಇತ್ತ ಮೊದಲೇ ನೋವಿನಲ್ಲಿರುವ ಕುಟುಂಬಕ್ಕೆ ಬರ ಸಿಡಿಲು ಬಡಿದಿದ್ದು ಸಂಪೂರ್ಣ ಕುಟುಂಭ ಕಣ್ಣೀರಲ್ಲಿ ಮುಳುಗಿ ಹೋಗಿದೆ.