ಶಿವಮೊಗ್ಗ: ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಓಡಾಡಿಕೊಂಡಿದ್ದ ಮಗುವೊಂದು ಪರೋಪಕಾರದ ಆಶಯದಲ್ಲಿ ಬೆಂದು ದುರಂತ ಅಂತ್ಯ ಕಂಡ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರ ಸಮೀಪದ ಹಿರೀಮನೆಯಲ್ಲಿ ಈ ಘಟನೆ ನಡೆದಿದ್ದು, ಶಾಸಕ ಆರಗ ಜ್ಞಾನೇಂದ್ರ ಹೊಸನಗರ ಭಾಗದ ಆಪ್ತ ಸಹಾಯಕ ರಾಜೇಶ ಹಿರಿಮನೆ, ತಾಪಂ ಮಾಜಿ ಸದಸ್ಯೆ ಅಶ್ವಿನಿ ಪಾಟೀಲ್ ಮಗು ಕಳೆದುಕೊಂಡ ದುರ್ದೈವಿಯಾಗಿದ್ದಾರೆ.
ರಾಜೇಶ ಹಿರೀಮನೆ ಕೊನೆಯ ಪುತ್ರ ಅಥರ್ವ ಕಳೆದ ಅ. 24ರ ಗುರುವಾರ ಬಿಸಿ, ಬಿಸಿ ಮಾಡಿಟ್ಟಿದ್ದ ಟೀ ಮೈಮೇಲೆ ಬೀಳಿಸಿಕೊಂಡು, ಗಂಭೀರ ಗಾಯಗೊಂಡಿದ್ದ. ಕೂಡಲೇ ಮಗುವನ್ನು ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ 8 ದಿನದಿಂದ ನೀಡುತ್ತಿದ್ದ ಚಿಕಿತ್ಸೆ ಫಲಕಾರಿಯಾಗದೇ, ಜಗತ್ತು ನೋಡಬೇಕಿದ್ದ ಮಗು ನ. 1 ಅಂದರೆ ಇಂದು ಬೆಳಿಗ್ಗಿನ ಜಾವ ಅಸುನೀಗಿದೆ.
ಅಂದು ಪಕ್ಕದ ಮನೆಯಲ್ಲೊಬ್ಬ ಹಿರಿಯರು ತೀರಿ ಹೋಗಿದ್ದು, ಅವರ ಮನೆಯಲ್ಲಿ ರಾತ್ರಿ ವೇಳೆ ಇದ್ದ ಜನರಿಗೆ ಟೀ ಮಾಡಿಕೊಡುವ ಸದಾಶಯದೊಂದಿಗೆ ರಾಜೇಶ ಮತ್ತು ಪತ್ನಿ ಅಶ್ವಿನಿ ತಮ್ಮ ಮನೆಯಲ್ಲಿ 10 ರಿಂದ 15 ಕಪ್ ಟೀ ಮಾಡಿ ಪಾತ್ರೆಗೆ ಹಾಕಿ ಜಗಲಿ ಮೇಲೆ ಇಟ್ಟಿದ್ದಾರೆ. ಈ ವೇಳೆ ಅಲ್ಲಿಗೆ ಆಟವಾಡುತ್ತ ಬಂದ ಮಗು, ಪಾತ್ರೆ ಎಳೆದಿದೆ. ಪಾತ್ರೆಯಲ್ಲಿದ್ದ ಬಿಸಿ ಟೀ ಮೈಮೇಲೆ ಸುರಿದಿದೆ. ಮೈಯೆಲ್ಲ ಸುಟ್ಟುಕೊಂಡ ಮಗುವನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು. ಆರಂಭದಲ್ಲಿ ಪರವಾಗಿಲ್ಲ ಮಗು ಚೇತರಿಸಿಕೊಳ್ಳುತ್ತಿದೆ ಎಂಬ ಸಂದೇಶ ಸಮಾಧಾನ ತಂದಿತ್ತು. ಆದರೆ ದುರದೃಷ್ಟವಶಾತ್ ಮಗು ಇಂದು ಬೆಳಿಗ್ಗೆ ಇಹಲೋಕ ತ್ಯಜಿಸಿದೆ. ಮದ್ಯರಾತ್ರಿ ಎದ್ದು ಪರೋಪಕಾರ ಮಾಡುವ ಆಶಯ ತೋರಿದ್ದೇ ರಾಜೇಶ ದಂಪತಿಗಳ ಪಾಲಿಗೆ ಮುಳುವಾಗಿದ್ದು ದುರಂತವಾಗಿದೆ.