ಗದಗ : ಸಾಮಾನ್ಯವಾಗಿ ನಾವು ಬಸ್ನಲ್ಲಿ ಪ್ರಯಾಣಿಸಬೇಕಾದರೆ ನಮ್ಮ ಗಮನ ನಾವು ತೆಗೆದುಕೊಂಡು ಹೋಗುತ್ತಿರುವ ವಸ್ತುಗಳ ಮೇಲೆ ಇರುತ್ತದೆ. ಆದರೆ ಕೆಲವೊಮ್ಮೆ ನಮ್ಮ ಆತುರದಿಂದಲೊ ಅಥವಾ ನಮ್ಮ ಮಂದ ಬುದ್ದಿಶಕ್ತಿಯಿಂದಲೊ ನಾವು ನಮ್ಮ ವಸ್ತುಗಳನ್ನು ಮರೆತು ಬಸ್ ಇಳಿದಿರುತ್ತೇವೆ. ನಂತರ ನಮಗೆ ನೆನಪಾಗುತ್ತದೆ ನಮ್ಮ ಬ್ಯಾಗ್ ಬಸ್ನಲ್ಲಿಯೆ ಇದೆ ಎಂದು ಆಗ ನಾವು ಹೋಗಿ ಹುಡುಕುವಸ್ಟರಲ್ಲಿ ನಮ್ಮ ಬ್ಯಾಗ್ ಬೇರೆಯವರ ಪಾಲಾಗಿರುತ್ತದೆ. ಆಗ ನಮಗೆ ಅನುಮಾನ ಬರುವುದು ಕಂಡೆಕ್ಟರ್ ಮೇಲೆಯೆ, ನಮ್ಮ ವಸ್ತುಗಳನ್ನು ಈತನೆ ಎಗರಿಸಿದ್ದಾನೆ ಎಂದು ಪೋಲಿಸರಿಗೆ ದೂರು ಕೊಡುತ್ತೇವೆ. ಈ ರೀತಿಯಾಗಿ ಕಳೆದುಕೊಂಡ ವಸ್ತುಗಳು ನಮಗೆ ಸಿಗದೆ ಕಳೆದು ಹೋಗುವುದೆ ಹೆಚ್ಚು. ಆದರೆ ಇಲ್ಲೊಬ್ಬ ನಿರ್ವಾಹಕಿ ತನ್ನ ಪ್ರಾಮಾಣಿಕತೆಯಿಂದ ಸಾರ್ವಜನಿಕರ ಗೌರವಕ್ಕೆ ಪಾತ್ರರಾಗಿದ್ದಾರೆ.
ಗದಗ ತಾಲೂಕಿನ ಮುಳಗುಂದ ಪಟ್ಟಣದ ಶಕಿಲಾಬಾನು ಎಂಬ ಮಹಿಳೆ ಬಸ್ನಲ್ಲಿ ಪ್ರಯಾಣ ಮಾಡುವ ವೇಳೆ ತಮ್ಮ ಬ್ಯಾಗ್ ಅನ್ನು ಬಸ್ನಲ್ಲಿಯೆ ಬಿಟ್ಟು ಗದಗದಲ್ಲಿ ಇಳಿದು ಹೋಗಿದ್ದರು. ಈ ಬ್ಯಾಗ್ನಲ್ಲಿ 30ಗ್ರಾಂ ಚಿನ್ನ, 100ಗ್ರಾಂ ಬೆಳ್ಳಿ, ಮತ್ತು 2160 ರೂಪಯಿ ನಗದು ಇತ್ತು. ಈ ಬ್ಯಾಗ್ ಅನ್ನು ನೋಡಿದ ಬಸ್ ನಿರ್ವಾಹಕಿ ಅನುಸೂಯ ತಮ್ಮ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದರು.
ಬ್ಯಾಗ್ ಪರಿಶೀಲಿಸಿದ ಅಧಿಕಾರಿಗಳಿಗೆ ಬ್ಯಾಗ್ನಲ್ಲಿದ್ದ ಪ್ಯಾನ್ ಕಾರ್ಡ್ ಸಿಕ್ಕಿದ್ದರಿಂದ ಪೋಲಿಸರಿಗೆ ಮಾಹಿತಿ ನೀಡಿ ಬ್ಯಾಗ್ ಮಾಲೀಕರನ್ನು ಕರೆಸಿ ಬೆಟಗೇರಿ ಬಡಾವಣೆ ಪೋಲಿಸರ ಸಮ್ಮುಖದಲ್ಲಿ ಆಭರಣ ಮತ್ತು ಹಣವನ್ನು ಮರಳಿಸಲಾಗಿದೆ. ನಿರ್ವಾಹಕಿ ಅನುಸೂಯ ಅವರ ಪ್ರಾಮಾಣಿಕತೆಗೆ ಸಾರ್ವಜನಿಕರಿಂದ ಭಾರೀ ಬೆಂಬಲ ವ್ಯಕ್ತವಾಗಿದೆ.