ಬೆಳಗಾವಿ : ನಾಯಿ ನಂಬಿಕೆ ಮತ್ತು ವಿಶ್ವಾಸಕ್ಕೆ ಹೆಸರಾದ ಪ್ರಾಣಿ. ನಾಯಿಗೆ ಇರೊ ನಿಯತ್ತು ಮನುಷ್ಯನಿಗೆ ಇಲ್ಲ ನೋಡ್ರಿ…! ಹಿಂದಿನಿಂದ ಬಂದಂತಹ ಈ ರೂಢಿಯ ಮಾತು ಯಾವತ್ತಿದ್ರೂ ಸತ್ಯ ಎನ್ನುವಂತೆ ಶ್ವಾನಗಳು ನಡೆದುಕೊಳ್ಳುವುದನ್ನು ಆಗಾಗ ನೋಡುತ್ತ, ಕೇಳುತ್ತ ಇರುತ್ತೇವೆ.
ಈಗ ಇಂಥದ್ದೇ ಒಂದು ಮನಕಲಕುವ ಘಟನೆ ನಡೆದಿದ್ದು ನೋಡವವರ ಮನ ಮರುಕಪಡುವಂತೆ ಮಾಡುತ್ತಿದೆ. ಹೌದು, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದ ಸನದಿ ತೋಟದ ಬಳಿ ಎರಡು ವಾರಗಳ ಹಿಂದೆ ಬೀದಿ ನಾಯಿಯೊಂದು ಅನಾರೋಗ್ಯದಿಂದಲೋ ಅಥವಾ ಮತ್ಯಾವ ಕಾರಣದಿಂದಲೋ ಮೃತಪಟ್ಟಿದ್ದು, ಬಸವೇಶ್ವರ ಏತ ನೀರಾವರಿ ಕಾಲುವೆಯಲ್ಲಿ ಅದರ ಶವ ಬಿದ್ದಿದೆ. ಅದು ಸತ್ತು ಎರಡು ವಾರ ಕಳೆದಿದ್ದು, ನಾಯಿಯ ಶವ ಸಂಪೂರ್ಣ ಕೊಳೆತು ಈಗ ಅದರ ಅಸ್ತಿ ಪಂಜರ ಮಾತ್ರ ಉಳಿದಿದೆ. ಆದರೆ, ಈ ಮೃತಪಟ್ಟ ನಾಯಿಯ ಮರಿ ಮಾತ್ರ ತನ್ನ ತಾಯಿಯ ಬರುವಿಕೆಗಾಗಿ ಕಾದು ಕುಳಿತಿದೆ.
ಎರಡು ವಾರ ಕಳೆದರೂ ಈ ಜಾಗವನ್ನು ಬಿಟ್ಟು ಎಲ್ಲಿಯೂ ಕದಲುತ್ತಿಲ್ಲ. ಒಮ್ಮೊಮ್ಮೆ ಹೊರಗಡೆ ಹೋಗಿ ಬಂದರೂ ಮತ್ತೆ ರಾತ್ರಿ ಇಲ್ಲಿಗೇ ಮರಳಿ ಬರುತ್ತಿದೆ. ಸತ್ತಿರುವ ತನ್ನ ತಾಯಿಗಾಗಿ ನಿತ್ಯವೂ ಕಣ್ಣೀರು ಸುರಿಸುತ್ತಿದೆ. ಈ ತಾಯಿ ಮತ್ತು ಮಗುವಿನ ಕರುಳ ಬಳ್ಳಿಯ ಸಂಬಂಧ ಎಂಥದ್ದು ಎನ್ನುವುದು ಈ ದೃಶ್ಯಾವಳಿ ನಿರೂಪಿಸುತ್ತಿದೆ. ಇದರ ಮೂಕ ರೋಧನೆ ಕಂಡು ನೋಡುವವರ ಮನದಲ್ಲಿ ಮರುಕ ಹುಟ್ಟಿಸಿದೆ.”ನಾಯಿಗಿರುವ ನಿಯತ್ತು ಮನುಷ್ಯನಿಗೆ ಇಲ್ಲ ನೋಡ್ರಿ ಎನ್ನುವ ರೂಢಿಯ ಮಾತು ಈ ಘಟನೆಯನ್ನು ನೋಡಿದ್ರೆ ಖರೆ ಅನಿಸುತ್ತಿದೆ ನೋಡ್ರಿ..ಮನುಷ್ಯರೇ ತಮ್ಮವರು ಯಾರಾದರೂ ತೀರಿಕೊಂಡರೆ ಒಂದೆರಡು ದಿನದಲ್ಲಿ ತಮ್ಮ ದುಖ ನೋವು ಮರೆತು ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗುತ್ತಾರೆ. ಹೆತ್ತವರು ತೀರಿಕೊಂಡಾಗ ಅಂತ್ಯಕ್ರಿಯೆಗೂ ಬಾರದಂತಹ ಮಕ್ಕಳ ಘಟನೆಗಳ ಸುದ್ದಿಗಳನ್ನು ನೋಡುತ್ತಿದ್ದೇವೆ. ಆದರೆ, ಇಂತಹ ದಿನಮಾನಗಳಲ್ಲಿ ಸತ್ತ ತನ್ನ ತಾಯಿ ನಾಯಿಗಾಗಿ ಎರಡು ವಾರದಿಂದ ಈ ನಾಯಿಯ ಮರಿಯು ಶವದ ಪಕ್ಕದಲ್ಲಿಯೇ ಕುಳಿತು ಕಂಬನಿ ಮಿಡಿಯುತ್ತಿದೆ. ಇದು ನೋಡುವವರ ಮನ ಕಲಕುವಂತೆ ಮಾಡಿದೆ ಎಂದರೆ ತಪ್ಪಾಗಲಾರದು..