Tuesday, October 22, 2024

Power tv 6th anniversary : ಸೂಲಗಿತ್ತಿ ಕಮಲಮ್ಮ ಅವರಿಗೆ ಕರುನಾಡ ಕಣ್ಮಣಿ ಪ್ರಶಸ್ತಿ

ಮನಸ್ಸಿದ್ದಲ್ಲಿ ಮಾರ್ಗವಿದೆ.. ಕಲೆಯಿದ್ದಲ್ಲಿ ಬೆಲೆಯಿದೆ.. ಅದಕ್ಕೆ ಸಾಕ್ಷಿಯಾಗಿದ್ದಾರೆ ಕುಗ್ರಾಮವೊಂದರ ಪುಟ್ಟ ಮನೆಯಲ್ಲಿ ವಾಸಿಸುವ ಕಮಲಮ್ಮ.. ಹೆಸರಿಗೆ ತಕ್ಕಂತೆ ಕೆಸರಿನಲ್ಲೇ ಹುಟ್ಟಿ ಬೆಳೆದು ಅರಳಿದವರು. ಇವರ ಕಲಾ ಸೇವೆ ಸುತ್ತಲಿನ ಹತ್ತೂರುಗಳಲ್ಲಿ ಜನಜನಿತ. ಸದ್ಯ ಇವರು ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣದ ನಿವಾಸಿ. ಹಟ್ಟಿಯ ಚಿನ್ನದ ಗಣಿಯಲ್ಲಿ ಸದ್ಯಕ್ಕೆ ಚಿನ್ನವೇನೋ ಸಿಗಲ್ಲ. ಆದ್ರೆ ಚಿನ್ನದಂಥ ಮನಸ್ಸಿನ ಕಮಲಮ್ಮ ಸಿಗುತ್ತಾರೆ. ಹಾಗಾದ್ರೆ ಇವರದ್ದೇನು ಅಂಥಾ ಸಾಧನೆ ಅಂತೀರಾ..

ಆಂಧ್ರ ಮತ್ತು ಕರ್ನಾಟಕದ ಗಡಿಭಾಗದಲ್ಲಿ ಹೆಚ್ಚಾಗಿ ಪ್ರಚಲಿತದಲ್ಲಿರುವ ಬುರಽ ಕಥಾ ಕಲಾವಿದೆ ಈ ಕಮಲಮ್ಮ. ಒಮ್ಮೆ ಹಾಡಲು ನಿಂತರ ಹಗಲು ರಾತ್ರಿಯಿಡೀ ಕಥೆ ಕಟ್ಟಿ ಹಾಡುವ ಇವರ ಶೈಲಿಗೆ ಫಿದಾ ಆಗದವರಿಲ್ಲ. ಬಾಲನಾಗಮ್ಮ, ಹೇಮರೆಡ್ಡಿ ಮಲ್ಲಮ್ಮ, ಬಳ್ಳಾರಿ ಕೂಸುಲಿಂಗ, ಕುಮಾರಸ್ವಾಮಿ ಕಥೆ.. ಹೀಗೆ ನೂರಾರು ಪೌರಾಣಿಕ ಮತ್ತು ಐತಿಹಾಸಿಕ ಬುರಽ ಕಥೆಗಳು ಇವರಿಗೆ ಸುಲಲಿತ. ತಂಬೂರಿ ಹಿಡಿದು ಇವರು ಹಾಡುತ್ತಿದ್ರೆ ಡಕ್ಕೆ ಮತ್ತು ಗಗ್ಗರ ಹಿಡಿದು ಇನ್ನಿಬ್ಬರು ಸಾಥ್​ ನೀಡುತ್ತಾರೆ. ಬುರಽಕಥೆ ಮಾತ್ರವಲ್ಲದೇ ಸೋಬಾನೆ, ಜೋಗಳು ಸೇರಿ ಅನೇಕ ಶೈಲಿಯ ಜಾನಪದ ಹಾಡುಗಳು ಇವರಿಗೆ ಕರಗತ. ಹಟ್ಟಿ ಪಟ್ಟಣದ ಸುತ್ತಲಿನ ಗ್ರಾಮಗಳಲ್ಲಿ ಯಾವುದೇ ಮನೆಯಲ್ಲಿ ಅಥವಾ ಸಾರ್ವಜನಿಕ ಸಭೆಯಲ್ಲಿ ಕಾರ್ಯಕ್ರಮ ಇದ್ದರೆ ಅಲ್ಲಿ ಕಮಲಮ್ಮ ಇರಲೇಬೇಕಿತ್ತು. ಆದ್ರೆ ಮೊಬೈಲ್​ಗಳಲ್ಲಿ ಮೈಮರೆತ ಈಗಿನ ಯುವ ಜನಾಂಗಕ್ಕೆ  ಇವರ ಕಲೆಯ ಪರಿಚಯವಿಲ್ಲ.

ಕಮಲಮ್ಮ ಕಲಾವಿದೆ ಮಾತ್ರವಲ್ಲ.. ಸೂಲಗಿತ್ತಿಯೂ ಹೌದು.. ಸುಮಾರು ಐದುನೂರಕ್ಕೂ ಹೆಚ್ಚು ನಾರ್ಮಲ್​ ಹೆರಿಗೆ ಮಾಡಿಸಿದ್ದಾರಂತೆ. ಸುತ್ತಲಿನ ಹಳ್ಳಿಗಳಲ್ಲಿ ಯಾರದ್ದೇ ಹೆರಿಗೆ ಇದ್ದರೂ ಕಮಲಮ್ಮನಿಗೆ ಕರೆ ಹೋಗುತ್ತಿತ್ತು. ಅಷ್ಟರಮಟ್ಟಿಗೆ ಹೆರಿಗೆ ಮತ್ತು ಬಾಣಂತಿಯ ಆರೈಕೆ ಬಗ್ಗೆ ಇವರ ಬಳಿ ಪಿಹೆಚ್​ಡಿ ಮಾಡುವಷ್ಟು ಮಾಹಿತಿಯಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಜೊತೆಗೆ ತಂದೆ ತಾಯಿ ಮೂಲಕ ನಾಟಿ ಔಷಧ ಕೊಡುವುದನ್ನು ಸಹ ಅರಿತಿದ್ದಾರೆ. ಬೆಟ್ಟ ಗುಡ್ಡಗಳಲ್ಲಿ, ಕಾಡಿನಲ್ಲಿ ಸಿಗುವ ಸಸ್ಯೌಷಧಿಗಳನ್ನು ತಾವೇ ತಂದು ಕೊಡುತ್ತಾರೆ. ಕೂಸುಗಳಿಗೆ ಬರುವ ನೆಗಡಿ, ಜ್ವರ ಸೇರಿದಂತೆ ದೊಡ್ಡವರಿಗೂ ಇವರು ಔಷಧಿ ಕೊಡುತ್ತಾರೆ.

ಕಥೆ ಹೇಳುತ್ತಾ ಸಂಚಾರಿಯಾಗಿ ಬಂದು ನೆಲೆಸಿರುವ ಇವರ ಪೂರ್ವಜರು ಮೂಲತಃ ಆಂಧ್ರದವರು. ಆರು ಗಂಡು, ಮೂರು ಹೆಣ್ಣು ಸೇರಿ ಇವರಿಗೆ ಒಂಭತ್ತು ಮಕ್ಕಳು. ಅಂದು ನಾಲ್ಕಾಣೆ, ಎಂಟಾಣೆಗೆ ಹಾಡು ಹೇಳುತ್ತಿದ್ದ ಪೋಷಕರ ಕಷ್ಟವನ್ನು ಕಮಲಮ್ಮ ಮರೆತಿಲ್ಲ. ತಾಯಿ ನಾಗಮ್ಮ, ಅಜ್ಜಿ ಯಲ್ಲಮ್ಮ ಅವರಿಂದ ಕಲಿತ ಹಾಡುಗಳು ಇವರಿಗೆ ಇತ್ತೀಚಿನ ವರ್ಷಗಳಲ್ಲಿ ಜನಮನ್ನಣೆ ತಂದುಕೊಟ್ಟಿವೆ. ಕೆಲ ಸ್ಥಳೀಯ ಸಂಘ ಸಂಸ್ಥೆಗಳು ಮತ್ತು ಜಿಲ್ಲಾ ಮಟ್ಟದಲ್ಲಿ ಸರ್ಕಾರ ಇವರಿಗೆ ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಆದರೆ ಇವರ ಕಲೆಗೆ ತಕ್ಕಂತೆ ಮಾನ್ಯತೆ ದೊರಕಿಲ್ಲ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಕಲೆಯನ್ನ ಗುರುತಿಸಿ, ರೆಕಾರ್ಡ್​​ ಮಾಡಿಸಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ. ಅದೇ ಆಶಯದೊಂದಿಗೆ ಕರುನಾಡ ಕಣ್ಮಣಿ ಪ್ರಶಸ್ತಿಯನ್ನು ನೀಡಿ ಕಮಲಮ್ಮನವರನ್ನ ಗೌರವಿಸಲು ಪವರ್ ಟಿವಿ ಹರ್ಷ ಪಡುತ್ತದೆ.

RELATED ARTICLES

Related Articles

TRENDING ARTICLES