ಡಾ.ಭುಜಂಗ ಶೆಟ್ಟಿ ಹೆಸರಾಂತ ನೇತ್ರ ತಜ್ಞರು. ತಮಗಿದ್ದ ಸಕ್ಕರೆ ಕಾಯಿಲೆಯನ್ನು ರಿವರ್ಸ್ ಡಯಾಬಿಟೀಸ್ ಎಂಬ ತಮ್ಮದೇ ಆದ ಪ್ರಯೋಗದ ಮೂಲಕ ಸೋಲಿಸಿ, ಅದರ ವಿರುದ್ಧ ಜಯ ಸಾಧಿಸಿದ್ದವರು. ರಿವರ್ಸ್ ಡಯಾಬಿಟೀಸ್ ಎಂಬ ತಾವೇ ಕಂಡು ಹಿಡಿದುಕೊಂಡಿದ್ದ ಈ ಆಹಾರ ಕ್ರಮವನ್ನು ಕಳೆದ ವರ್ಷವಷ್ಟೇ ಅವರು ಮಾಧ್ಯಮಗಳ ಮೂಲಕ ಜನರ ಗಮನಕ್ಕೆ ತಂದಿದ್ದರು.
ಡಾ. ಭುಜಂಗ ಶೆಟ್ಟಿ ಅವರು ಮೂಲತಃ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕಟ್ಕೆರೆಯವರು. ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂಎಸ್ ಪೂರೈಸಿದ್ದು, ನಾರಾಯಣ ನೇತ್ರಾಲಯದ ರೂವಾರಿಯಾಗಿದ್ದರು. ಇವರು ನೇತ್ರ ತಜ್ಞರಾಗಿದ್ದ ಕಾಲದಲ್ಲಿ ಎಲ್ಲ ಕಣ್ಣುಗಳು ಬುದ್ದಿಸಂ ನಾಡಾದ ಶ್ರೀಲಂಕಾದಿಂದ ಬರುತ್ತಿದ್ದವು. ಅದರ ಜಾಡು ಹಿಡಿದು ನೋಡಿದಾಗ ನಮ್ಮ ದೇಶಕ್ಕಷ್ಟೇ ಅಲ್ಲ, ಇಡೀ ಪ್ರಪಂಚಕ್ಕೆ ಶ್ರೀಲಂಕಾ ಕಣ್ಣು ದಾನ ಮಾಡುತ್ತಿತ್ತು. ಆಗ ಡಾ.ಭುಜಂಗ ಶೆಟ್ಟಿಯವರಿಗೆ ದೊಡ್ಡ ಪ್ರಶ್ನೆ ಕಾಡಿತ್ತು. ನಮ್ಮ ಬೆಂಗಳೂರಿನಲ್ಲಿ ಜನರು ಯಾಕೆ ಕಣ್ಣು ದಾನ ಮಾಡಲ್ಲ..? ಅನ್ನೋದು. ಯಾಕೆ ಬೆಂಗಳೂರಿನಲ್ಲಿ ಐ ಡೊನೇಷನ್ ಬ್ಯಾಂಕ್ ಸ್ಟಾರ್ಟ್ ಮಾಡಬಾರದು ಅನ್ನೋ ಯೋಚನೆ ಅವರಿಗೆ ಹೊಳೆದಿತ್ತು.
ಹೇಳಿಕೇಳಿ ಡಾ. ಭುಜಂಗ ಶೆಟ್ಟಿಯವರು ವರನಟ ಡಾ. ರಾಜ್ಕುಮಾರ್ ಅವರ ಬಹುದೊಡ್ಡ ಅಭಿಮಾನಿ. ಚಿಕ್ಕವರಿದ್ದಾಗಲೇ ಡಾ.ರಾಜ್ಕುಮಾರ್ ಅವರ ಚಿತ್ರಗಳನ್ನು ಫಸ್ಟ್ ಡೇ, ಫಸ್ಟ್ ಶೋ ನೋಡುತ್ತಿದ್ದರು. ಆಗಲೇ ಡಾ. ರಾಜ್ಕುಮಾರ್ ಭೇಟಿಯಾಗಬೇಕೆಂಬ ಹಂಬಲವಿತ್ತು. ರಾಜಕುಮಾರ್ ಮೂಲಕ ಕಣ್ಣು ದಾನ ಜಾಗೃತಿ ಮಾಡ್ಬೇಕೆಂಬ ಕನಸು ಕಂಡಿದ್ದರು.
ರೋಗಿ ಬಯಸಿದ್ದು ಹಾಲು-ಅನ್ನ, ವೈದ್ಯರು ಹೇಳಿದ್ದು ಹಾಲು ಅನ್ನ ಎಂಬ ಮಾತಿನಂತೆ, ಕಣ್ಣು ಪರೀಕ್ಷೆಗಾಗಿ ಡಾ.ರಾಜ್ಕುಮಾರ್ ಅವರೇ ಡಾ.ಭುಜಂಗ ಶೆಟ್ಟಿಯವರನ್ನು ಹುಡುಕಿ ಬಂದಿದ್ದರು. ಆಗ ಪರಿಚಯವಾಗಿ, ಅಲ್ಲಿಂದ ಒಡನಾಟವೂ ಹೆಚ್ಚಾಗಿತ್ತು. 1993ರಲ್ಲಿ ರಾಜಾಜಿನಗರದಲ್ಲಿ ನಾರಾಯಣ ನೇತ್ರಾಲಯ ಆಸ್ಪತ್ರೆ ಕಟ್ಟಿದಾಗ, ಡಾ. ರಾಜಕುಮಾರ್ ದಂಪತಿಯನ್ನ ಕರೆಸಿ ಅವ್ರ ಕೈಯ್ಯಲ್ಲಿಯೇ ಐ ಬ್ಯಾಂಕ್ ಉದ್ಘಾಟಿಸಿದ್ದರು. ನಂತರದಲ್ಲಿ ಐ ಡೊನೇಷನ್ ಬಗ್ಗೆ ಡಾ. ರಾಜಕುಮಾರ್ ಕೇಳಿಕೊಂಡಿದ್ದು, ಅವ್ರ ಇಡೀ ಫ್ಯಾಮಿಲಿಯೇ ಒಪ್ಪಿದ್ದು… ಅಣ್ಣಾವ್ರು ತೀರಿಕೊಂಡಾಗ, ಅವ್ರ ಕಣ್ಣು ಪಡೆದಿದ್ದು ಎಲ್ಲವೂ ಇತಿಹಾಸ..
ನೇತ್ರತಜ್ಞರಾಗಿ ಹಲವರ ಬಾಳಿನಲ್ಲಿ ಬೆಳಕು ನೀಡಿದ್ದ ಡಾ.ಭುಜಂಗ ಶೆಟ್ಟಿ ಅವರು, ನಾರಾಯಣ ನೇತ್ರಾಲಯ ಸಂಸ್ಥೆ ಮೂಲಕ ದೊಡ್ಡ ಇತಿಹಾಸವನ್ನೇ ಸೃಷ್ಟಿಸಿದ್ರು. ನಾರಾಯಣ ನೇತ್ರಾಲಯದ ಮೂಲಕ ಕಣ್ಣಿನ ಸಮಸ್ಯೆಗೆ ಪರಿಹಾರ ಕಂಡುಕೊಂಡುವರು ಅಸಂಖ್ಯ ಮಂದಿ. ಡಾ.ಭುಜಂಗ ಶೆಟ್ಟಿಯವರು ಸಲ್ಲಿಸಿರುವ ಸೇವೆಯ ಗೌರವಾರ್ಥವಾಗಿ ಅವರಿಗೆ ಮರಣೋತ್ತರವಾಗಿ ಪವರ್ ಟಿವಿಯು ಕರುನಾಡ ಕಣ್ಮಣಿ ಪ್ರಶಸ್ತಿ ನೀಡಿ ಅವರ ಸೇವೆಯನ್ನ ಸ್ಮರಿಸುತ್ತದೆ.