Sunday, October 6, 2024

ಈ ದೇವಸ್ಥಾನದಲ್ಲಿ ಮಿಡಿಯುತ್ತಿದೆ ಶ್ರೀಕೃಷ್ಣನ ಹೃದಯ

ಈ ಬಾರಿ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ದಿನದಿಂದ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣದ ಕೊನೆಯಲ್ಲಿ ಹಾಗೂ ಆರಂಭದಲ್ಲಿ ಜಗನ್ನಾಥ ಸ್ಮರಣೆ ಮಾಡುತ್ತಾರೆ. ಯಾಕೆ ಹೀಗೆ, ಹಾಗೆ ನೋಡಿದ್ರೆ ಅವರು ಉತ್ತರ ಪ್ರದೇಶದ ವಾರಣಾಸಿಯ ಸಂಸದ, ಹಾಗಾಗಿ ಕಾಶಿ ವಿಶ್ವನಾಥನನ್ನು ಅವರು ಸ್ಮರಣೆ ಮಾಡಬೇಕಿತ್ತು. ಹೋಗಲಿ, ಬಿಜೆಪಿ ಅಧಿಕಾರಕ್ಕೆ ಬರೋದಕ್ಕೆ ಕಾರಣವಾಗಿದ್ದು, ಅಯೋಧ್ಯೆಯ ಪ್ರಭು ಶ್ರೀರಾಮಚಂದ್ರ, ಆ ಕಾರಣಕ್ಕೆ ಕೃತಜ್ಞತಾಪೂರ್ವಕವಾಗಿ ಅವರು ಪ್ರಭು ಶ್ರೀರಾಮಚಂದ್ರನನ್ನು ಸ್ಮರಿಸಬೇಕಾಗಿತ್ತು. ಆದರೆ, ಅವರೆಡನ್ನೂ ಬಿಟ್ಟು ಜಗನ್ನಾಥನ ಸ್ಮರಣೆ ಮಾಡುತ್ತಾರಲ್ಲಾ ಯಾಕೆ? ಅದಕ್ಕೆ ಬಲವಾದ ಕಾರಣವೊಂದಿದೆ. ಆ ಕಾರಣ ನಿಶ್ಚಿತವಾಗಿ ರಾಜಕೀಯ ಕಾರಣವಂತೂ ಅಲ್ಲವೇ ಅಲ್ಲ, ಒಡಿಶಾದಲ್ಲಿ 24 ವರ್ಷಗಳ ಬಿಜು ಸರ್ಕಾರದ ಆಡಳಿತವನ್ನು ಕೊನೆಗೊಳಿಸಿ, ಜನ ಒಡಿಶಾದಲ್ಲಿ ಬಿಜೆಪಿಗೆ ಅಧಿಕಾರ ನೀಡಿದ್ದು ನಿಜವೇ ಆದರೂ, ಅದನ್ನು ಮೀರಿದ ಮತ್ತೊಂದು ಕಾರಣವಿದೆ. ಆ ಕಾರಣಕ್ಕಾಗಿಯೇ ನರೇಂದ್ರ ಮೋದಿಯವರು ಜಗನ್ನಾಥನ ಪರಮ ಭಕ್ತನಾಗಿ ಬದಲಾಗಿದ್ದಾರೆ. ಆ ಕಾರಣ ಏನಪ್ಪಾ ಅಂದ್ರೆ ಒಡಿಶಾದ ಈ ಪುರಿ ಕ್ಷೇತ್ರ ಇದೆಯಲ್ಲಾ ಅದು ಜಾಗೃತ ಕ್ಷೇತ್ರ. ಈಗಲೂ ಪುರಿಯ ಜಗನ್ನಾಥನ ಮೂರ್ತಿಯೊಳಗೆ ಕೃಷ್ಣ ಪರಮಾತ್ಮನ ಹೃದಯವಿದೆ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲ, ಈಗಲೂ ಆ ಹೃದಯ ಮಿಡಿಯುತ್ತಿದೆ ಎಂದೂ ಸಹ ನಂಬಿಕೆ ಇದೆ. ಜಗನ್ನಾಥ ಎಂದರೆ ಅವನು ಇಡೀ ಜಗತ್ತಿಗೆ ಒಡೆಯ. ಅಂತಹವನ ಹೃದಯ, ತನ್ನ ಭಕ್ತರಿಗಾಗಿ ಸದಾ ಮಿಡಿಯುತ್ತಿರುತ್ತದೆ. ಹಾಗಾಗಿಯೇ ಜನರಿಗಾಗಿ ಮಿಡಿಯುವ ಹೃದಯದ ಜಗನ್ನಾಥನನ್ನು ನರೇಂದ್ರ ಮೋದಿಯವರು ಆರಾಧಿಸಲು ಪ್ರಾರಂಭಿಸಿದ್ದಾರೆ.

ನಿನ್ನೆ ಸೋಮವಾರದಿಂದ ಪುರಿ ಜಗನ್ನಾಥ ರಥಯಾತ್ರೆ ಆರಂಭವಾಗಿದೆ. ಈ ರಥಯಾತ್ರೆಗೆ ಎಷ್ಟು ಜನ ಸೇರುತ್ತಾರೆ ಗೊತ್ತಾ. ಆ ರಥಯಾತ್ರೆಗೆ ಸೇರುವ ಜನಸ್ತೋಮವನ್ನು ನೋಡಿದ್ರೆ ಸಾಕು. ಜಗನ್ನಾಥನ ಮಹಿಮೆ ಎಂತಹುದ್ದು ಎಂದು ಗೊತ್ತಾಗಿ ಬಿಡುತ್ತದೆ. ಜಗನ್ನಾಥನ ಈ ರಥಯಾತ್ರೆ ಇದೆಯಲ್ಲಾ ಇದು ವಿಶ್ವದ ಅತಿ ದೊಡ್ಡ ಧಾರ್ಮಿಕ ಕಾರ್ಯಕ್ರಮ ಎನಿಸಿಕೊಂಡಿದೆ. 12 ವರ್ಷಕ್ಕೊಮ್ಮೆ ನಡೆಯುವ ಕುಂಭಮೇಳ, ವ್ಯಾಟಿಕನ್ ಸಿಟಿಯಲ್ಲಿ ನಡೆಯುವ ಕ್ರಿಸ್ಮಸ್ ಹಾಗೂ ಜಗನ್ನಾಥ ರಥಯಾತ್ರೆ, ಇವು ಮೂರು ವಿಶ್ವದಲ್ಲೇ ಅತಿ ಹೆಚ್ಚು ಜನ ಸೇರುವ ಧಾರ್ಮಿಕ ಕಾರ್ಯಕ್ರಮಗಳಾಗಿವೆ. ಯಾಕೆ, ಜಗನ್ನಾಥನ ರಥಯಾತ್ರೆ ಇಷ್ಟೊಂದು ಪ್ರಖ್ಯಾತಿ ಪಡೆದಿದೆ. ಲಕ್ಷ ಲಕ್ಷ ಜನರನ್ನು ಹೀಗೆ ಸೂಜಿಗಲ್ಲಿನಂತೆ ಸೆಳೆಯುವ ಶಕ್ತಿಯಾದರೂ ಯಾವುದು..

ಭಾರತದ ನಮ್ಮ ಹಲವಾರು ಪುರಾತನ ದೇವಾಲಯಗಳು ಕೇವಲ ಅಧ್ಯಾತ್ಮದ ಕೇಂದ್ರಗಳು ಆಗಿರದೆ ನೂರಾರು ವಿಸ್ಮಯಗಳ ಮೂಟೆ ಆಗಿವೆ. ಅವುಗಳು ವಿಜ್ಞಾನದ ತತ್ವಗಳನ್ನು ಕೂಡ ಮೀರಿ ನಿಂತಿರುವುದು ನಿಜಕ್ಕೂ ನಮಗೆ ಅಚ್ಚರಿ ಮತ್ತು ವಿಭ್ರಮೆಗಳನ್ನು ಮೂಡಿಸುತ್ತವೆ. ಅದರಲ್ಲೂ ಪುರಿಯ ಜಗನ್ನಾಥ ದೇವಾಲಯವು ನಮ್ಮ ಪೂರ್ವಜರ ವಾಸ್ತು ವೈಭವ, ವೈಜ್ಞಾನಿಕ ದೃಷ್ಟಿಕೋನ ಮತ್ತು ನಂಬಿಕೆಗಳ ಪಂಚಾಂಗದ ಮೇಲೆ ನಿಂತಿರುವುದು ನಿಜಕ್ಕೂ ಬೆರಗು ಮೂಡಿಸುತ್ತದೆ. ಒಂದೊಂದು ಸಂಗತಿಯನ್ನು ಗಮನಿಸುತ್ತ ಹೋದಂತೆ ನೀವು ಖಂಡಿತವಾಗಿಯೂ ಮೂಗಿನ ಮೇಲೆ ಬೆರಳು ಇಡುತ್ತೀರಿ.

  • ಸಹೋದರ ಸಹೋದರಿಯರಿಗೆ ಮಾತ್ರ ಪೂಜೆ

ಒಡಿಶಾ ರಾಜ್ಯದ ಪೂರ್ವ ಕರಾವಳಿಯ ಸಮುದ್ರ ತೀರದಲ್ಲಿ ವಿಸ್ತಾರವಾಗಿ ಹರಡಿರುವ ಪುರಿಯ ಜಗನ್ನಾಥ ದೇವಾಲಯವು ಹತ್ತನೇ ಶತಮಾನದಲ್ಲಿ ನಿರ್ಮಾಣವಾಯಿತು ಎನ್ನುತ್ತದೆ ಇತಿಹಾಸ. ಗಂಗ ವಂಶದ ಮೊದಲ ರಾಜನಾದ ಅನಂತ ವರ್ಮ ಚೋಡಗಂಗಾ ದೇವನು ದೇವಾಲಯವನ್ನು ನಿರ್ಮಿಸಿದ ಎನ್ನಲಾಗಿದೆ. ಸಾವಿರ ವರ್ಷಗಳಿಂದ ತಲೆಯೆತ್ತಿ ನಿಂತಿರುವ ಈ ಬೃಹತ್ ದೇವಾಲಯವು ಭಾರತದ ಚತುರ್ ಧಾಮಗಳಲ್ಲಿ ಅತೀ ದೊಡ್ಡದು. ನಾಲ್ಕು ಲಕ್ಷ ಚದರ ಅಡಿಯಷ್ಟು ವಿಸ್ತೀರ್ಣ ಇರುವ ಮತ್ತು ಹೆಚ್ಚು ಕಡಿಮೆ 45 ಅಂತಸ್ತುಗಳಷ್ಟು ಎತ್ತರವಿರುವ ಈ ದೇವಾಲಯದ ವಾಸ್ತು ತುಂಬಾ ಅದ್ಭುತವಾಗಿದೆ. ಸಾಮಾನ್ಯವಾಗಿ ನಾವು ಯಾವುದೇ ಹಿಂದು ದೇವಾಲಯಕ್ಕೆ ಹೋದರೂ ಸಹ ಅಲ್ಲಿ ಮುಖ್ಯ ದೇವರೊಂದಿಗೆ ಆ ದೇವರ ಪತ್ನಿಗೂ ವಿಶೇಷವಾದ ಸ್ಥಾನ, ಪ್ರತ್ಯೇಕವಾದ ಗರ್ಭಗುಡಿ ಇದ್ದೇ ಇರುತ್ತದೆ. ರಥೋತ್ಸವಕ್ಕೆ ಮೊದಲು ಕಲ್ಯಾಣೋತ್ಸವ ನಡೆಯುತ್ತದೆ. ಕಾಶಿಯಲ್ಲಿ ವಿಶ್ವೇಶ್ವರನೊಂದಿಗೆ ಪಾರ್ವತಿ ದೇವಿಗೆ ಸ್ಥಾನ. ಅಯೋಧ್ಯೆಯಲ್ಲಿ ಶ್ರೀರಾಮನಷ್ಟೇ ಪ್ರಾಮುಖ್ಯತೆ ಸೀತಾ ಮಾತೆಗೆ ಲಭಿಸುತ್ತದೆ. ತಿರುಪತಿಯಲ್ಲಿ ವೆಂಕಟೇಶ್ವರನ ಜತೆಯಲ್ಲಿ ಭೂ ದೇವಿ ಶ್ರೀದೇವಿ, ಅಲಮೇಲು ಮಂಗಮ್ಮ ಇರಲೇಬೇಕು. ಆದರೆ, ಪುರಿಯಲ್ಲಿ ಇಲ್ಲಿನ ವಿಶೇಷ ಎಂದರೆ ಮುಖ್ಯ ದೇವರು ಜಗನ್ನಾಥ. ಅದರ ಜೊತೆಗೆ ಬಲರಾಮ ಮತ್ತು ಸುಭದ್ರೆಯರು ಇಲ್ಲಿ ಪೂಜೆಯನ್ನು ಪಡೆಯುತ್ತಾರೆ. ಅಂದರೆ ಇಬ್ಬರು ಅಣ್ಣಂದಿರು ಮತ್ತು ತಂಗಿ ಸುಭದ್ರೆಯು ಪೂಜೆಗೊಳ್ಳುವುದು ವಿಶೇಷ. ಇಲ್ಲಿ ಕೃಷ್ಣನ ಯಾವ ಪತ್ನಿಯ ಮೂರ್ತಿಯೂ ಇಲ್ಲ

*ಬೇವಿನ ಮರದಿಂದ ನಿರ್ಮಿಸಿದ ಮೂರ್ತಿಗಳು

ಹಿಂದೂ ದೇವಾಲಯಗಳಲ್ಲಿ ವಿಗ್ರಹಗಳು ಸಾಮಾನ್ಯವಾಗಿ ಲೋಹಗಳಿಂದ ಅಥವಾ ಶಿಲೆಗಳಿಂದ ಕೆತ್ತಲ್ಪಟ್ಟಿರುತ್ತವೆ. ಆದರೆ ಇಲ್ಲಿ ಇರುವ ಮೂರೂ ವಿಗ್ರಹಗಳು ಪವಿತ್ರವಾದ ಬೇವಿನ ಮರಗಳಿಂದ ಕೆತ್ತಲ್ಪಟ್ಟಿವೆ. ಆಶ್ಚರ್ಯ ಏನೆಂದರೆ ಆ ವಿಗ್ರಹಗಳನ್ನು ಹನ್ನೆರಡು ವರ್ಷಗಳ ನಂತರ ಶಾಸ್ತ್ರೋಕ್ತವಾಗಿ ವಿಸರ್ಜನೆ ಮಾಡಿ ಮತ್ತೆ ಹೊಸ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ದ್ವಾಪರ ಯುಗಾಂತ್ಯದಲ್ಲಿ ಶ್ರೀಕೃಷ್ಣನ ಅವತಾರವೂ ಸಮಾಪ್ತವಾಗಿದ್ದು, ಎಲ್ಲರಿಗೂ ತಿಳಿದ ವಿಷಯ. ಆ ಸಂದರ್ಭದಲ್ಲಿ ಕೃಷ್ಣನ ಹೃದಯ ಭಾಗವು ಇಲ್ಲಿನ ಬೇವಿನ ಮರದ ಪೊಟರೆಯಲ್ಲಿ ಸೇರಿಕೊಂಡಿತ್ತಂತೆ. ಈಗಲೂ ಅದೇ ಜಾಗದಲ್ಲಿ ಬೆಳೆದ ಪೊಟರೆ ಸಹಿತ ಬೇವಿನ ಮರವನ್ನೇ ತಂದು ಇಲ್ಲಿ ಮೂರ್ತಿಯನ್ನು ಕೆತ್ತಲಾಗುತ್ತದೆ. ಹೊಸ ಮೂರ್ತಿಯನ್ನು ಪ್ರತಿಷ್ಠಾಪಿಸುವ ಸಂದರ್ಭದಲ್ಲಿ ಹಳೆಯ ಮೂರ್ತಿಯೊಳಗಿರುವ ಹೃದಯವನ್ನು ಹೊಸ ಮೂರ್ತಿಗೆ ವರ್ಗಾಯಿಸಲಾಗುತ್ತದಂತೆ. ಜತೆಗೆ ನಿತ್ಯವೂ ದೇವರಿಗೆ ತಣ್ಣೀರಿನ ಅಭಿಷೇಕ ಮಾಡುವ ಕಾರಣ ದೇವರಿಗೆ ನೆಗಡಿ ಮತ್ತು ಜ್ವರವು ಬರುತ್ತದೆ ಎಂಬ ನಂಬಿಕೆಯು ಭಕ್ತರಲ್ಲಿದೆ. ಅದಕ್ಕಾಗಿ ವರ್ಷಕ್ಕೆ ಹದಿನೈದು ದಿನಗಳ ಕಾಲ ದೇವರ ವಿಗ್ರಹಗಳನ್ನು ರಹಸ್ಯ ಜಾಗದಲ್ಲಿ ಇರಿಸಿ ಭಕ್ತರಿಗೆ ಪ್ರವೇಶವನ್ನು ನಿರಾಕರಿಸುತ್ತಾರೆ. ಆ ಹೊತ್ತಲ್ಲಿ ಶುಶ್ರೂಷೆ ಮಾಡಲು ವೈದ್ಯರು ಕೂಡ ಬಂದು ದೇವರಿಗೆ ಆರೋಗ್ಯ ಸೇವೆ ನೀಡುತ್ತಾರೆ.

*ರಥೋತ್ಸವಕ್ಕೆ ಪ್ರತಿ ವರ್ಷವೂ ಹೊಸ ರಥ ನಿರ್ಮಾಣ

ಪುರಿಯ ಜಗನ್ನಾಥ ದೇವಾಲಯದ ಮೂರು ಮೂರ್ತಿಗಳನ್ನು ಮೂರು ಪ್ರತ್ಯೇಕ ಮರದ ರಥದಲ್ಲಿ ಕುಳ್ಳಿರಿಸಿ ಸುಮಾರು ಮೂರು ಕಿಲೋಮೀಟರ್ ದೂರದವರೆಗೆ ಇಲ್ಲಿ ರಥಯಾತ್ರೆ ಮಾಡುತ್ತಾರೆ. ಈ ರಥೋತ್ಸವಕ್ಕೆ ಪ್ರತೀ ವರ್ಷ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಅದು ಉತ್ತರ ಭಾರತದ ಅತೀ ದೊಡ್ಡ ಉತ್ಸವಗಳಲ್ಲಿ ಒಂದು ಎಂದು ಕೀರ್ತಿ ಪಡೆದಿದೆ. ಸುಮಾರು 45 ಅಡಿ ಎತ್ತರವಾದ ಈ ರಥಗಳನ್ನು ಪ್ರತೀ ವರ್ಷವೂ ಹೊಸದಾಗಿ ನಿರ್ಮಿಸುವುದು ತುಂಬಾನೇ ವಿಶೇಷ. ಜಗನ್ನಾಥ ರಥಯಾತ್ರೆಯ ಮೂರು ರಥಗಳನ್ನು ತಯಾರಿಸಲು ಒಂದೇ ಒಂದು ಮೊಳೆಯನ್ನು ಬಳಸಲಾಗುವುದಿಲ್ಲ ಅಥವಾ ಯಾವುದೇ ಲೋಹವನ್ನು ಬಳಸಲಾಗುವುದಿಲ್ಲ. ಈ ರಥವು ಸಂಪೂರ್ಣವಾಗಿ ಬೇವಿನ ಮರದಿಂದ ತಯಾರಿಸಲಾಗುತ್ತದೆ. ವಸಂತ ಪಂಚಮಿಯ ದಿನದಂದು ರಥವನ್ನು ತಯಾರಿಸಲು ಮರದ ಆಯ್ಕೆಯನ್ನು ಮಾಡಲಾಗುತ್ತದೆ ಮತ್ತು ಅಕ್ಷಯ ತೃತೀಯ ದಿನದಂದು ರಥವನ್ನು ತಯಾರಿಸುವ ಕೆಲಸವನ್ನು ಪ್ರಾರಂಭಿಸಲಾಗುತ್ತದೆ. ಪುರಿಯ ಬೇರೆ ಬೇರೆ ಭಾಗಗಳಿಂದ ಕಲಾವಿದರು ದೇವಾಲಯಕ್ಕೆ ಬಂದು ಅಲ್ಲಿಯೇ ವಾಸ್ತವ್ಯ ಮಾಡಿ ಎರಡು ತಿಂಗಳ ಅವಧಿಯಲ್ಲಿ ಈ ರಥಗಳನ್ನು ನಿರ್ಮಾಣ ಮಾಡುತ್ತಾರೆ. ವಿಶೇಷವಾಗಿ ಜಗನ್ನಾಥನ ರಥವು 16 ಚಕ್ರಗಳನ್ನು ಹೊಂದಿರುತ್ತದೆ. ಮೂರು ರಥಗಳು ಯಾತ್ರೆಗೆ ಸಿದ್ಧವಾದಾಗ, ಪುರಿಯ ರಾಜ ಗಜಪತಿಯ ಪಲ್ಲಕ್ಕಿಯು ಆಗಮಿಸುತ್ತದೆ ಮತ್ತು ನಂತರ ರಥಗಳನ್ನು ಪೂಜಿಸಲಾಗುತ್ತದೆ. ಈ ಪೂಜೆಯನ್ನು ಸಾಂಪ್ರದಾಯಿಕ ಭಾಷೆಯಲ್ಲಿ ಚಾರ್ ಪಹನ್ರಾ ಎಂದು ಕರೆಯಲಾಗುತ್ತದೆ. ನಂತರ ರಥ ಮಂಟಪ ಮತ್ತು ರಥಯಾತ್ರೆಯ ಮಾರ್ಗವನ್ನು ಚಿನ್ನದ ಪೊರಕೆಯಿಂದ ಸ್ವಚ್ಛಗೊಳಿಸಲಾಗುತ್ತದೆ.

ಪುರಿಯ ಜಗನ್ನಾಥ ದೇವಸ್ಥಾನದಿಂದ ಮೂರು ಅಲಂಕೃತ ರಥಗಳು ಹೊರಡುತ್ತವೆ. ಮುಂಭಾಗದಲ್ಲಿ ಬಲರಾಮನ ರಥ, ಮಧ್ಯದಲ್ಲಿ ಸಹೋದರಿ ಸುಭದ್ರೆಯ ರಥ ಮತ್ತು ಹಿಂಭಾಗದಲ್ಲಿ ಜಗನ್ನಾಥನ ರಥವನ್ನು ಹೊರಡಿಸಲಾಗುವುದು. ಭಗವಾನ್ ಜಗನ್ನಾಥನ ರಥ ನಂದಿಘೋಷ್ 45.6 ಅಡಿ ಎತ್ತರವನ್ನು ಹೊಂದಿರುತ್ತದೆ. ನಂತರ ಬಲರಾಮನ ರಥ ತಾಲಧ್ವಜ 45 ಅಡಿ ಮತ್ತು ನಂತರ ಸಹೋದರಿ ಸುಭದ್ರೆಯ ರಥ ದರ್ಪದಲನ್ 44.6 ಅಡಿ ಎತ್ತರವನ್ನು ಹೊಂದಿರುತ್ತದೆ. ಮೂರು ರಥಗಳ ಬಣ್ಣವೂ ವಿಭಿನ್ನವಾಗಿದೆ. ತಾಳಧ್ವಜ ರಥದ ಬಣ್ಣ ಕೆಂಪು ಮತ್ತು ಹಸಿರು. ಕನ್ನಡಿ ಕಪ್ಪು ಮತ್ತು ಕೆಂಪು ಬಣ್ಣದ್ದಾಗಿದೆ. ಆದರೆ ನಂದಿಘೋಷ್‌ ರಥವು ಹಳದಿ ಮತ್ತು ಕೆಂಪು ಬಣ್ಣದ್ದಾಗಿದೆ.

*ಚಿಕ್ಕಮ್ಮನ ಮನೆಗೆ ಬರುತ್ತಾನೆ ಜಗನ್ನಾಥ

ಪೌರಾಣಿಕ ನಂಬಿಕೆಗಳ ಪ್ರಕಾರ, ಪ್ರತಿ ವರ್ಷ ಆಷಾಢ ಮಾಸದ ಎರಡನೇ ದಿನದಂದು, ಜಗನ್ನಾಥನು ತನ್ನ ಸಹೋದರ ಬಲರಾಮ ಮತ್ತು ಸಹೋದರಿ ಸುಭದ್ರೆಯೊಂದಿಗೆ ತನ್ನ ಚಿಕ್ಕಮ್ಮನ ಮನೆಗೆ ಭೇಟಿ ನೀಡುತ್ತಾನೆ. ಒಮ್ಮೆ ಪ್ರೀತಿಯ ಸಹೋದರಿ ಸುಭದ್ರಾ ತನ್ನ ಸಹೋದರರಾದ ಕೃಷ್ಣ ಮತ್ತು ಬಲರಾಮನೊಂದಿಗೆ ನಗರವನ್ನು ನೋಡುವ ಬಯಕೆಯನ್ನು ವ್ಯಕ್ತಪಡಿಸಿದ್ದಳು. ನಂತರ ಸಹೋದರರಿಬ್ಬರೂ ತಮ್ಮ ಪ್ರೀತಿಯ ತಂಗಿಯನ್ನು ರಥದಲ್ಲಿ ಕೂರಿಸಿ ನಗರ ಪ್ರದಕ್ಷಿಣೆಗೆ ಕರೆದೊಯ್ದರು. ದಾರಿಯಲ್ಲಿ ಮೂವರೂ ಕೂಡ ಗುಂಡಿಚಾ ಎಂಬಲ್ಲಿನ ಚಿಕ್ಕಮ್ಮನ ಮನೆಗೆ ಹೋಗಿ 7 ದಿನ ಇಲ್ಲಿಯೇ ಇದ್ದು ನಗರ ಪ್ರಯಾಣ ಮುಗಿಸಿ ಪುರಿಗೆ ಮರಳಿದರು. ಅಂದಿನಿಂದ ಇಲ್ಲಿ ಪ್ರತಿ ವರ್ಷ ರಥಯಾತ್ರೆ ಕೈಗೊಳ್ಳುವ ಸಂಪ್ರದಾಯ ಆರಂಭವಾಯಿತು ಎಂದು ಹೇಳಲಾಗುತ್ತದೆ.

ಪರಮ ಭಕ್ತ ಸಾಲ್​ ಬೇಗನಿಗಾಗಿ ರಥ ನಿಲುಗಡೆ

ಪ್ರಯಾಣದ ಸಮಯದಲ್ಲಿ, ಭಗವಾನ್ ಜಗನ್ನಾಥನ ರಥವು ಖಂಡಿತವಾಗಿಯೂ ಮುಸ್ಲಿಂ ಭಕ್ತ ಸಾಲ್ಬೇಗನ ಸಮಾಧಿಯ ಬಳಿ ಸ್ವಲ್ಪ ಸಮಯದವರೆಗೆ ನಿಲ್ಲುತ್ತದೆ. ಒಮ್ಮೆ ಜಗನ್ನಾಥನ ಈ ಮುಸ್ಲಿಂ ಭಕ್ತ ಸಾಲ್ಬೇಗನಿಗೆ ತನ್ನ ದೇವರ ದರ್ಶನ ಪಡೆಯಲು ದೇವಾಲಯವನ್ನು ತಲುಪಲು ಸಾಧ್ಯವಾಗದೇ ಅವನು ಮರಣ ಹೊಂದಿದನು ಎಂದು ಹಳೆಯ ಕಥೆಗಳಲ್ಲಿ ಹೇಳಲಾಗಿದೆ. ನಂತರ ಅವನ ಮರಣದ ನಂತರ, ಅವನ ಸಮಾಧಿಯನ್ನು ನಿರ್ಮಿಸಿದಾಗ, ಜಗನ್ನಾಥನ ರಥವು ಅವನ ಸಮಾಧಿಯ ಬಳಿ ಸ್ವಯಂಚಾಲಿತವಾಗಿ ನಿಂತಿತು ಮತ್ತು ಸ್ವಲ್ಪ ಸಮಯದವರೆಗೆ ಮುಂದುವರೆಯಲು ಸಾಧ್ಯವಾಗಲಿಲ್ಲ. ನಂತರ ಆ ಮುಸ್ಲಿಂ ಸಾಲ್ಬೇಗನ ಆತ್ಮಕ್ಕೆ ಶಾಂತಿ ಕೋರಲಾಯಿತು, ನಂತರ ರಥವು ಮುಂದೆ ಸಾಗಲು ಸಾಧ್ಯವಾಯಿತು. ಅಂದಿನಿಂದ, ಪ್ರತಿ ವರ್ಷ ರಥಯಾತ್ರೆಯ ಸಮಯದಲ್ಲಿ, ಜಗನ್ನಾಥನ ರಥವು ದಾರಿಯಲ್ಲಿ ಸಿಗುವ ಸಾಲ್ಬೇಗನ ಸಮಾಧಿಯ ಬಳಿ ನಿಲ್ಲುತ್ತದೆ.

*ಗಾಳಿಯ ವಿರುದ್ಧ ದಿಕ್ಕಿಗೆ ಹಾರುವ ಬಾವುಟ

ಪುರಿ ಜಗನ್ನಾಥ ದೇವಾಲಯದಲ್ಲಿ ಇರುವ ಅಪೂರ್ವ ನಂಬಿಕೆಗಳು, ವಿಶೇಷ ಆಚರಣೆಗಳು ಒಂದೆಡೆ ಆದರೆ, ಆಧುನಿಕ ವಿಜ್ಞಾನ ಲೋಕವನ್ನು ಮೆಟ್ಟಿ ನಿಲ್ಲುವ ಹತ್ತಾರು ವಿಸ್ಮಯಗಳು ಬೆರಗು ಮೂಡಿಸುವುದು ಇನ್ನೊಂದೆಡೆ. ದೇವಾಲಯದ ಮೇಲೆ ಒಂದು ಬಾವುಟವು ಹಾರುತ್ತಿದ್ದು ಅದನ್ನು ಪುರೋಹಿತರು ದಿನವೂ 45 ಅಂತಸ್ತುಗಳಷ್ಟು ಮೇಲಕ್ಕೇರಿ ಬದಲಾಯಿಸುತ್ತಾರೆ. ಬಿಸಿಲು, ಗಾಳಿ, ಮಳೆ, ಸುಂಟರಗಾಳಿ ಯಾವುದು ಎದುರಾದರೂ ಈ ಬಾವುಟ ಬದಲಾಯಿಸುವ ಪದ್ಧತಿ ಒಂದು ದಿನವೂ ನಿಂತಿಲ್ಲ. ಹಾಗೇನಾದರೂ ನಿಂತರೆ ಪ್ರಾಯಶ್ಚಿತ್ತ ರೂಪವಾಗಿ ಮುಂದೆ ಹದಿನೆಂಟು ವರ್ಷಗಳ ಕಾಲ ದೇವಾಲಯ ಮುಚ್ಚಬೇಕು ಎನ್ನುವ ಸಂಪ್ರದಾಯ ಅಲ್ಲಿದೆ. ಇನ್ನೂ ಆಶ್ಚರ್ಯ ಎಂದರೆ ಈ ಬಾವುಟವು ಗಾಳಿಯ ವಿರುದ್ಧ ದಿಕ್ಕಿನಲ್ಲಿ ಹಾರುತ್ತಿದೆ ಅನ್ನುವುದು.

*ನೆರಳೇ ಇಲ್ಲದ ಗೋಪುರ

ದೇವಾಲಯದ ಮೇಲೆ ಬಹಳ ಎತ್ತರದ ಒಂದು ಗೋಪುರವಿದ್ದು ದಿನದ ಯಾವ ಅವಧಿಯಲ್ಲಿಯೂ ಅದರ ನೆರಳು ನೆಲದ ಮೇಲೆ ಬೀಳುವುದಿಲ್ಲ ಅನ್ನುವುದು ಇನ್ನೊಂದು ವಿಸ್ಮಯ. ಈ ಗೋಪುರದ ಮೇಲೆ ಇದುವರೆಗೆ ಯಾವ ಪಕ್ಷಿ ಅಥವಾ ವಿಮಾನವು ಹಾರಿಲ್ಲ ಅನ್ನುವುದು ಆಶ್ಚರ್ಯದ ಸಂಗತಿ, ಆದರೂ ಸತ್ಯ. ದೇವಳದ ಮೇಲೆ ಒಂದು 12 ಅಡಿ ಎತ್ತರದ ಮತ್ತು ಒಂದು ಟನ್ ತೂಕದ ಒಂದು ಸುದರ್ಶನ ಚಕ್ರ ಇದ್ದು ಅದು ಪುರಿ ನಗರದ ಯಾವ ಬಿಂದುವಿನಲ್ಲಿ ನಿಂತರೂ ಒಂದೇ ರೀತಿ ಕಾಣುತ್ತದೆ. ಸಾವಿರ ವರ್ಷಗಳ ಹಿಂದೆ ಅಷ್ಟೊಂದು ಭಾರವಾದ ಆ ಚಕ್ರವನ್ನು ಅಷ್ಟು ಎತ್ತರದಲ್ಲಿ ಹೇಗೆ ಸ್ಥಾಪಿಸಿದರು ಅನ್ನುವುದೇ ಒಂದು ಅಚ್ಚರಿ. ದೇವಾಲಯದ ಪಕ್ಕದಲ್ಲಿ ಸಮುದ್ರ ಇದ್ದು, ಅದರ ಅಲೆಗಳ ಶಬ್ದವು ಕಿವಿ ತುಂಬುತ್ತದೆ. ಆದರೆ ದೇವಾಲಯದ ಪ್ರಮುಖ ದ್ವಾರವನ್ನು ದಾಟಿ ಒಳಗೆ ಹೋದಂತೆ ಆ ಅಲೆಗಳ ಶಬ್ದವು ಕೇಳುವುದೇ ಇಲ್ಲ. ಯಾವ ಸೌಂಡ್ ಪ್ರೂಫ್ ತಂತ್ರಜ್ಞಾನದಿಂದ ದೇವಾಲಯದ ಗೋಡೆಗಳನ್ನು ಕಟ್ಟಿದ್ದಾರೆ ಅನ್ನುವುದು ನಿಜಕ್ಕೂ ಅದ್ಭುತ. ದೇವಾಲಯ ಸ್ಥಾಪನೆ ಆಗಿ ಸಾವಿರ ವರ್ಷಗಳ ಅವಧಿಯಲ್ಲಿ ನೂರಾರು ಸುನಾಮಿ, ಭೂಕಂಪ ಹಾಗೂ ಪ್ರಾಕೃತಿಕ ವೈಪರೀತ್ಯಗಳು ಸಂಭವಿಸಿವೆ. ಒಮ್ಮೆಯಂತೂ ತೀವ್ರವಾಗಿ ಬೀಸಿದ ಒಂದು ಸೈಕ್ಲೋನ್ ಇಡೀ ಒಡಿಶಾ ರಾಜ್ಯವನ್ನು ಮತ್ತು ಪುರಿ ನಗರವನ್ನು ಅಲ್ಲಾಡಿಸಿಬಿಟ್ಟಿತ್ತು. ಆದರೆ ದೇವಾಲಯದ ಒಂದು ಇಟ್ಟಿಗೆಯು ಕೂಡ ಅಲುಗಾಡಿಲ್ಲ ಅಂದರೆ ನೀವು, ನಾವು ನಂಬಲೇಬೇಕು.

ಇನ್ನೊಂದು ಅಚ್ಚರಿ ಎಂದರೆ ಅಲ್ಲಿಯ ಮಧ್ಯಾಹ್ನದ ಮಹಾ ನೈವೇದ್ಯದ್ದು. ದಿನವೂ ಎರಡು ಸಾವಿರದಿಂದ ಎರಡು ಲಕ್ಷ ಮಂದಿ ಅಲ್ಲಿ ಪ್ರಸಾದ ಸ್ವೀಕಾರ ಮಾಡುತ್ತಾರೆ. ಆದರೆ ಒಮ್ಮೆಯೂ ಪ್ರಸಾದದ ಕೊರತೆ ಆಗಿಲ್ಲ ಹಾಗೆಯೇ ಒಂದು ಅಗುಳು ಅನ್ನ ಕೂಡ ಉಳಿಯೋದಿಲ್ಲ ಅನ್ನುವುದು ಇನ್ನೂ ದೊಡ್ಡ ಅಚ್ಚರಿ. ಏಳು ಮಡಿಕೆಗಳನ್ನು ಒಂದರ ಮೇಲೆ ಒಂದಿಟ್ಟು ಕೇವಲ ಕಟ್ಟಿಗೆ ಉಪಯೋಗ ಮಾಡಿ ಮುಖ್ಯ ಪ್ರಸಾದ ಸಿದ್ಧ ಮಾಡುವುದು ಅಲ್ಲಿನ ಸಂಪ್ರದಾಯ. ಆಗ ಮೇಲಿನ ಮಡಕೆಯಲ್ಲಿಟ್ಟ ಅನ್ನ ಮತ್ತಿತರ ಆಹಾರ ವಸ್ತುವು ಮೊದಲು ಬೇಯುತ್ತದೆ. ನಂತರ ಅದರ ಕೆಳಗಿನ ಮಡಕೆಯಲ್ಲಿನ ವಸ್ತು ಬೇಯುತ್ತದೆ. ಎಲ್ಲಕ್ಕಿಂತ ಕೆಳಗೆ ನೇರವಾಗಿ ಉರಿ ತಾಕುವ ಮಡಕೆಯ ಆಹಾರ ಕೊನೆಯಲ್ಲಿ ಬೇಯುತ್ತದೆ.

ಈ ಜಗನ್ನಾಥ ದೇವಾಲಯವನ್ನು ನಿರ್ಮಿಸುವಾಗ ಸಾವಿರ ವರ್ಷಗಳ ಹಿಂದೆ ಅಂತಹ ಭೌಗೋಳಿಕ ವಿಸ್ಮಯಗಳು ಅಡಕವಾಗಿರುವ ಎತ್ತರದ ಸ್ಥಳವನ್ನು ಅರಸರು ಆರಿಸಿದ ಕಾರಣ ಈ ವಿಸ್ಮಯಗಳು ಉಂಟಾಗಿರಬಹುದು ಎಂಬ ಊಹೆಯನ್ನು ಬಿಟ್ಟರೆ ನಿಮಗೆ, ನಮಗೆ ಬೇರೆ ಯಾವ ವಿಜ್ಞಾನದ ಆಧಾರವೂ ಪುರಿಯಲ್ಲಿ ದೊರಕುವುದಿಲ್ಲ. ಇಲ್ಲಿ ವಿಜ್ಞಾನಕ್ಕಿಂತ ಜನರ ನಂಬಿಕೆ ಗಾವುದ ಮುಂದಿದೆ. ಇದೆಲ್ಲವೂ ಜಗನ್ನಾಥ ದೇವರ ಕೃಪೆ ಎಂದು ನಾವು ಹೇಳಿ ಕೈ ಮುಗಿಯಬೇಕು ಅಷ್ಟೇ.

RELATED ARTICLES

Related Articles

TRENDING ARTICLES