Saturday, October 5, 2024

ಬೇಬಿಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್: ‘ಕೈ’ ವಿರುದ್ಧ ಜೆಡಿಎಸ್​​ಗೆ ಸಿಕ್ತು ಹೊಸ ಅಸ್ತ್ರ

ಬೆಂಗಳೂರು; ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್​​​ಗೆ ರಾಜ್ಯ ಸರ್ಕಾರ ಸಿದ್ಧತೆ ಮಾಡುತ್ತಿರುವುದು ಕಾಂಗ್ರೆಸ್ ವಿರುದ್ದ ಜೆಡಿಎಸ್​​ಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ. ಈ ವಿಚಾರವನ್ನೇ ಮುಂದಿಟ್ಟು ಕೊಂಡು ರಾಜ್ಯ ಸರ್ಕಾರ ವಿರುದ್ಧ ಟೀಕೆಗೆ ದಳಪತಿಗಳು ರಣತಂತ್ರ ಹೂಡಿದ್ದಾರೆ. ಸರ್ಕಾರದ ವಿರುದ್ದ ಸಿಡಿದೆದ್ದಿರುವ ಅನ್ನದಾತರ ಹೋರಾಟಕ್ಕೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಬೆಂಬಲ ನೀಡಿದ್ದಾರೆ. ಹೋರಾಟಗಾರರನ್ನು ಭೇಟಿ ಮಾಡಿ ಬೆಂಬಲ ನೀಡಿದ್ದಾರೆ.

ಟ್ರಯಲ್ ಬ್ಲಾಸ್ಟ್​ಗೆ ನನ್ನ ವಿರೋಧವಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಆ ಮೂಲಕ ರೈತರ ವಿಶ್ವಾಸ ಗಿಟ್ಟಿಸಿಕೊಳ್ಳುವ ಜೊತೆಗೆ ‘ಕೈ’ ಸರ್ಕಾರ ವಿರುದ್ದ ಹೋರಾಟಕ್ಕೆ ತಂತ್ರ ಹೂಡಿದ್ದಾರೆ.

ಇದನ್ನು ಓದಿ; ಆಮ್ಲೆಟ್​ನಲ್ಲಿ ಕಲ್ಲು ಸಿಕ್ಕಿದ್ದನ್ನು ಪ್ರಶ್ನಿಸಿದ್ದಕ್ಕೆ ಗ್ರಾಹಕನ ಮೇಲೆ ಬಿಯರ್​ ಬಾಟಲಿಯಿಂದ ಹಲ್ಲೆ

ಕೆಆರ್‌ಎಸ್ ಡ್ಯಾಮ್ ಜೊತೆ ಮಂಡ್ಯದ ಜನ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಇದನ್ನು ಬಳಸಿಕೊಂಡು ಜನರ ಪರವಾಗಿ ನಿಲ್ಲುವ ಮೂಲಕ ಕಾಂಗ್ರೆಸ್​​ಗೆ ಸೆಡ್ಡು ಹೊಡೆಯುವ ತಂತ್ರ ಕುಮಾರಸ್ವಾಮಿಯವರದ್ದು ಎನ್ನಲಾಗಿದೆ.

ಮತ್ತೊಂದೆಡೆ, ರೈತರಿಗೆ ದಳಪತಿ ಬೆಂಬಲ ಸಿಗುತ್ತಿದ್ದಂತೆಯೇ ಕಾಂಗ್ರೆಸ್ ಕೂಡ ಎಚ್ಚೆತ್ತುಕೊಂಡಿದೆ. ಇಂದು ಉಸ್ತುವಾರಿ‌ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಹೈವೋಲ್ಟೇಜ್ ಸಭೆ ಕರೆಯಲಾಗಿದೆ. ಟ್ರಯಲ್ ಬ್ಲಾಸ್ಟ್ ವಿಚಾರವಾಗಿ ಅಧಿಕಾರಿಗಳೊಂದಿಗೆ ಸಭೆ ಕರೆಯಲಾಗಿದ್ದು, ತಾತ್ಕಾಲಿಕವಾಗಿ ಟ್ರಯಲ್ ಬ್ಲಾಸ್ಟ್ ಮುಂದೂಡುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.

ಚಲುವರಾಯಸ್ವಾಮಿ ಸಭೆಯಲ್ಲಿ ಜಿಲ್ಲೆಯ ಶಾಸಕರು, ಡಿಸಿ, ಎಸ್​​​ಪಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಭಾಗಿಯಾಗುತ್ತಿದ್ದಾರೆ. ಹೀಗಾಗಿ ಈ ಹೈವೋಲ್ಟೇಜ್ ಸಭೆ ಮೇಲೆ ರೈತರು ಚಿತ್ತ ನೆಟ್ಟಿದ್ದಾರೆ.

ಕೆಆರ್​​​ಎಸ್ ಜಲಾಶಯಕ್ಕೆ ಅಪಾಯ ಎದುರಾಗುತ್ತದೆ ಎಂದು ಬೇಬಿ ಬೆಟ್ಟದಲ್ಲಿ ಗಣಿಗಾರಿಯನ್ನು ಈ ಹಿಂದೆ ಹೈಕೋರ್ಟ್ ಸೂಚನೆ ಮೇರೆಗೆ ಸ್ಥಗಿತ ಮಾಡಲಾಗಿತ್ತು. ಕಳೆದ ಎರಡು ವರ್ಷಗಳಿಂದ ವಿವಾದಿತ ಸ್ಥಳದಲ್ಲಿ ಗಣಿಗಾರಿಕೆ ನಡೆಯುತ್ತಿಲ್ಲ. ಈ ಮಧ್ಯೆ ಕೆಲ ಗಣಿ ಮಾಲೀಕರು ಹೈಕೋರ್ಟ್ ಮೊರೆ ಹೋಗಿ ರಿಟ್ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಟ್ರಯಲ್ ಬ್ಲಾಸ್ಟ್ ನಡೆಸಿ, ಜಲಾಶಯಕ್ಕೆ ಅಪಾಯ ಎದುರಾಗುತ್ತದೆಯೇ ಅಥವಾ ಇಲ್ಲವೇ, ಸಾಧಕ ಬಾಧಕಗಳ ಬಗ್ಗೆ ವರದಿ ನೀಡುವಂತೆ ಹೈಕೋರ್ಟ್ ಮಂಡ್ಯ ಜಿಲ್ಲಾಡಳಿತಕ್ಕೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಸಾಕಷ್ಟು ವಿರೋಧದ ನಡುವೆ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಲು ಮಂಡ್ಯ ಜಿಲ್ಲಾಡಳಿತ ಮುಂದಾಗಿದೆ.

RELATED ARTICLES

Related Articles

TRENDING ARTICLES