Sunday, October 6, 2024

ಡೈವರ್ಸ್​ ಕೇಸ್​ ವಿಚಾರಣೆಗೆ ಗೈರು: ಅಮೆರಿಕಕ್ಕೆ ಮರಳಿದ ನಟ ಯುವ ಪತ್ನಿ ಶ್ರೀದೇವಿ ಭೈರಪ್ಪ

ಬೆಂಗಳೂರು: ಡಾ.ರಾಜ್‌ಕುಮಾರ್‌ ವಂಶದ ಕುಡಿ, ನಟ ಯುವ ರಾಜ್‌ಕುಮಾರ್‌ ಅವರು ಪತ್ನಿ ಶ್ರೀದೇವಿ ಭೈರಪ್ಪ ಅವರಿಗೆ ಡಿವೋರ್ಸ್ ನೋಟಿಸ್‌ ನೀಡಿದ ವಿಚಾರ ಕೆಲವು ದಿನಗಳ ಹಿಂದೆ ಭಾರೀ ಸುದ್ದಿಯಾಗಿತ್ತು. ಈ ನೋಟಿಸ್‌ಗೆ ಸಂಬಂಧಿಸಿ ಇಂದು ನಡೆಯಬೇಕಾಗಿದ್ದ ವಿಚಾರಣೆಗಾಗಿ ಅಮೆರಿಕದಿಂದ ಬಂದಿದ್ದ ಶ್ರೀದೇವಿ ಭೈರಪ್ಪ ಹಿಂತಿರುಗುತ್ತಿರುವುದಾಗಿ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಹೀಗಾಗಿ ಅವರು ವಿಚಾರಣೆಗೆ ಗೈರಾಗಲಿದ್ದಾರೆ ಎನ್ನಲಾಗಿದೆ.

ಡಿವೋರ್ಸ್ ಪ್ರಕರಣ ವಿಚಾರವಾಗಿ ಅಮೆರಿಕದಿಂದ ಬಂದಿದ್ದ ಶ್ರೀದೇವಿ ವಿಚಾರಣೆಗೆ ಹಾಜರಾಗದೆ ಅಮೆರಿಕಕ್ಕೆ ಹಿಂತಿರುಗುತ್ತಿರುವ ವಿಷಯ ಸದ್ಯ ಕುತೂಹಲ ಮೂಡಿಸಿದೆ. ಹಾರ್ವರ್ಡ್‌ನಲ್ಲಿ ಶಿಕ್ಷಣ ಮುಂದುವರಿಸುವ ಸಲುವಾಗಿ ಭಾರತದಿಂದ ಅಮೆರಿಕಕ್ಕೆ ಹೋಗುತ್ತಿರುವುದಾಗಿ ಶ್ರೀದೇವಿ ತಿಳಿಸಿದ್ದಾರೆ. ತನ್ನ ಮೇಲೆ ಮಾಡಿರುವ ಆರೋಪಗಳಿಗೆ ತಕ್ಕ ಉತ್ತರ ಕೊಡ್ತೀನಿ. ನಾನು ಬಿಟ್ಟು ಕೊಡಲ್ಲ, ಸರಿಯಾದ ಸಮಯ ಬಂದಾಗ ಮತ್ತೆ ವಾಪಾಸ್ ಬರ್ತೀನಿ ಎಂದಿದ್ದಾರೆ.

ಇದನ್ನೂ ಓದಿ: ‘ಪವಿತ್ರಾ ಗೌಡ ದರ್ಶನ್​ ಪತ್ನಿ ಅಲ್ಲ’: ಪೊಲೀಸ್​ ಆಯುಕ್ತರಿಗೆ ಪತ್ರ ಬರೆದ ವಿಜಯಲಕ್ಷ್ಮಿ

ಕಳೆದ 15 ದಿನಗಳಿಂದ ನಾನು ಕರ್ನಾಟಕದಲ್ಲಿ ನನ್ನ ಕುಟುಂಬದ ಜತೆ ಇದ್ದಾಗ ಖಾಸಗಿ ಬದುಕನ್ನ ಗೌರವಿಸಿದ್ದಕ್ಕೆ ಧನ್ಯವಾದ. ಕಳೆದ ದಶಕಗಳಿಂದ ನನ್ನ ಜತೆಯಾಗಿದ್ದ ಸ್ನೇಹಿತರ ಬಳಗ ಕೆಲವು ದಿನಗಳ ಹಿಂದಿನ ಸುಳ್ಳಿನ ಸರಮಾಲೆಗೆ ಬಲಿಯಾದದ್ದು ದುರಾದೃಷ್ಟ. ಕಷ್ಟದ ಸಮಯದಲ್ಲಿ ನನ್ನ ಜತೆ ನಿಂತ ಸ್ನೇಹಿತರಿಗೆ, ಚಿತ್ರರಂಗದವರಿಗೆ ಧನ್ಯವಾದಗಳು ಎಂದು ಶ್ರೀದೇವಿ ಬರೆದುಕೊಂಡಿದ್ದಾರೆ.

ಮುಂದುವರಿದು, ಸತ್ಯ ಮತ್ತು ನ್ಯಾಯ ಮೇಲುಗೈ ಸಾಧಿಸುತ್ತದೆ ಎಂದು ನಂಬಿದ್ದೇನೆ ಹಾಗೂ ಅದಕ್ಕಾಗಿ ಹೋರಾಡುತ್ತೇನೆ. ನನ್ನ ಮೇಲೆ ಮಾಡಿರುವ ಪ್ರತಿಯೊಂದು ಸುಳ್ಳು ಆರೋಪದಿಂದ ಮುಕ್ತಳಾಗುವವರೆಗೆ ನನ್ನ ದಾರಿಗೆ ಏನೇ ಎದುರಾದರೂ ಹೆದರುವುದಿಲ್ಲ. ಹಾರ್ವರ್ಡ್‌ನಲ್ಲಿ ನಾನೊಂದು ಶೈಕ್ಷಣಿಕ ಯೋಜನೆಯನ್ನ ಶುರು ಮಾಡಿದ್ದೇನೆ. ಕಾಯಕವನ್ನ ಮುಂದುವರಿಸಲು ನಾನು ಅಮೆರಿಕಕ್ಕೆ ಹಿಂದಿರುಗುತ್ತಿದ್ದೇನೆ. ಸರಿಯಾದ ಸಮಯ ಬಂದಾಗ ನಾನು ಹಿಂದಿರುಗುತ್ತೇನೆ ಹಾಗೂ ಇಲ್ಲಿನ ಕೆಲಸಗಳನ್ನ ಮುಂದುವರಿಸುತ್ತೇನೆ ಎಂದು ಶ್ರೀದೇವಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES