Monday, October 7, 2024

ರಾಮೋಜಿ ಫಿಲ್ಮ್ ಸಿಟಿ ಹರಿಕಾರ ಇನ್ನಿಲ್ಲ: ರಾಜಮೌಳಿ ಕಣ್ಣೀರು.. ಕಂಬನಿ ಮಿಡಿದ ಮೋದಿ, ಸ್ಟಾಲಿನ್, ಬಾಬು

ಫಿಲ್ಮಿಡೆಸ್ಕ್​:  ಭಾರತೀಯ ಚಿತ್ರರಂಗದ ಬಹುದೊಡ್ಡ ಫಿಲ್ಮ್ ಸಿಟಿಯ ಹರಿಕಾರ, ಉದ್ಯಮಿ, ಹಿರಿಯ ಚಿತ್ರ ನಿರ್ಮಾಪಕ ರಾಮೋಜಿ ರಾವ್ ಇನ್ನು ನೆನಪು ಮಾತ್ರ. ಪ್ರಜ್ವಲ್ ದೇವರಾಜ್​​ರಂತಹ ನೂರಾರು ಕಲಾವಿದರನ್ನ ಇಂಟ್ರಡ್ಯೂಸ್ ಮಾಡಿದ ಗರಿಮೆ ಇರೋ ಖ್ಯಾತ ಉದ್ಯಮಿಗೆ ಏನಾಗಿತ್ತು..? ರಾಜಮೌಳಿ ಕಣ್ಣೀರು ಹಾಕಿದ್ಯಾಕೆ..? ಮೋದಿ, ಸ್ಟಾಲಿನ್, ಬಾಬು ಸಮೇತ ಯಾರೆಲ್ಲಾ ಕಂಬನಿ ಮಿಡಿದರು ಅನ್ನೋದ್ರ ರಿಪೋರ್ಟ್​ ಇಲ್ಲಿದೆ ನೋಡಿ.

ಹೌದು.. 87 ವರ್ಷದ ಹಿರಿಯ ಚೇತನ ರಾಮೋಜಿ ರಾವ್ ಬಾರದೂರಿಗೆ ಪಯಣ ಬೆಳೆಸಿದ್ದಾರೆ. ಸ್ವತಂತ್ರ್ಯಪೂರ್ವ ಭಾರತದಲ್ಲಿ ಸಾಮಾನ್ಯ ಕೃಷಿಕನ ಮನೆಯಲ್ಲಿ ಜನಿಸಿದ ರಾಮೋಜಿ ರಾವ್, ಬಹುದೊಡ್ಡ ಉದ್ಯಮಿಯಾಗಿ ಬೆಳೆದರು. ಲಕ್ಷಾಂತರ ಮಂದಿಗೆ ಅನ್ನದಾತರಾದರು. ಈಟಿವಿ ನೆಟ್​ವರ್ಕ್​, ಈನಾಡು ದಿನಪತ್ರಿಕೆ, ರಾಮೋಜಿ ರಾವ್ ಫಿಲ್ಮ್ ಸಿಟಿ ಸೇರಿದಂತೆ ಸಾಕಷ್ಟು ಉದ್ಯಮಗಳಿಂದ ಅದೆಷ್ಟೋ ಮಂದಿ ಬಾಳಿಗೆ ಬೆಳಕಾದರು. ಸದ್ಯ ನಮ್ಮ ಕನ್ನಡ ಮಾಧ್ಯಮಲೋಕದ ಬಹುತೇಕ ಹಿರಿಯ ಜರ್ನಲಿಸ್ಟ್​​ಗಳೆಲ್ಲಾ ಈಟಿವಿ ಮೂಲಕ ಬದುಕು ಕಟ್ಟಿಕೊಂಡವರೇ ಅಂದ್ರೆ ತಪ್ಪಾಗದು.

ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ರಾಮೋಜಿ ರಾವ್, ಹೈದ್ರಾಬಾದ್​​ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ 4.45ಕ್ಕೆ ಇಹಲೋಕ ತ್ಯಜಿಸಿದ್ದಾರೆ. ರಾಮೋಜಿ ರಾವ್ ಅಗಲಿಕೆಗೆ ರಾಜಕೀಯ ಹಾಗೂ ಚಿತ್ರರಂಗದ ಸಾಕಷ್ಟು ಗಣ್ಯರು ಸಂತಾಪ ಸೂಚಿಸಿದ್ದಾರೆ. ಅದ್ರಲ್ಲೂ ರಾಜಮೌಳಿ ಅಂತಹ ಲೆಜೆಂಡ್ ಡೈರೆಕ್ಟರ್ ಅವ್ರ ಅಂತಿಮ ದರ್ಶನ ಪಡೆದು, ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: ಚಂದನ್​ ಶೆಟ್ಟಿ-ನಿವೇದಿತಾ ಡೈವೋರ್ಸ್​: ನಟ ಪ್ರಥಮ್​ ಪ್ರತಿಕ್ರಿಯೆ

ರಾಜಮೌಳಿಗೆ ರಾಮೋಜಿ ರಾವ್ ಬಹಳ ಆಪ್ತರಾಗಿದ್ದರು. ಮೌಳಿಯ ಪ್ರತಿಷ್ಠಿತ ಬಾಹುಬಲಿ ಸಿನಿಮಾದ ಬೃಹತ್ ಸೆಟ್​​ಗಳು ನಿರ್ಮಾಣವಾಗಿದ್ದು, ಶೂಟಿಂಗ್ ಆಗಿದ್ದು ಎಲ್ಲವೂ ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲೇ. 1666 ಎಕರೆಯಷ್ಟು ವಿಸ್ತಾರವಾಗಿರೋ ರಾಮೋಜಿ ಫಿಲ್ಮ್ ಸಿಟಿ, ಭಾರತದಲ್ಲೇ ಬಹುದೊಡ್ಡ ಫಿಲ್ಮ್ ಸಿಟಿ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ. ಇಲ್ಲಿಯವರೆಗೂ ದೇಶದ ಬಹುತೇಕ ಎಲ್ಲಾ ಭಾಷೆಯ ಸಾವಿರಾರು ಸಿನಿಮಾಗಳು ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣಗೊಂಡಿವೆ. ಹಾಗಾಗಿ ರಾಜಮೌಳಿಗೆ ರಾಮೋಜಿ ಜೊತೆಗೊಂದು ಎಮೋಷನಲ್ ಬಾಂಡಿಂಗ್ ಇತ್ತು.

80ರ ದಶಕದಿಂದ 2015ರ ವರೆಗೆ ನೂರಾರು ಸದಭಿರುಚಿಯ ಸಿನಿಮಾಗಳನ್ನ ನಿರ್ಮಾಣ ಮಾಡಿರೋ ರಾಮೋಜಿ ರಾವ್, ಸೌತ್ ಅಲ್ಲದೆ ಬಾಲಿವುಡ್​ ಸೇರಿದಂತೆ ಭಾರತೀಯ ಚಿತ್ರರಂಗದ ಬಹುದೊಡ್ಡ ನಿರ್ಮಾಣ ಸಂಸ್ಥೆ ಹುಟ್ಟಿಹಾಕಿದ್ದರು. ಪಂಚಭಾಷೆಗಳಲ್ಲಿ ಚಿತ್ರ ನಿರ್ಮಾಣ ಮಾಡಿರೋ ರಾಮೋಜಿ, ನಮ್ಮ ಕನ್ನಡದಲ್ಲೂ ಐದಾರು ಸಿನಿಮಾಗಳನ್ನ ನಿರ್ಮಿಸಿದ್ದಾರೆ. ಚಿತ್ರ, ನಿನಗಾಗಿ, ಆನಂದ್ ಸಿನಿಮಾಗಳನ್ನ ನಿರ್ಮಿಸಿದ್ದರು ಇವರೇ.

ಸಿಕ್ಸರ್ ಸಿನಿಮಾ ಮೂಲಕ ಪ್ರಜ್ವಲ್ ದೇವರಾಜ್​ರನ್ನ ಬಣ್ಣದಲೋಕಕ್ಕೆ ಇಂಟ್ರಡ್ಯೂಸ್ ಮಾಡಿದ್ದೇ ರಾಮೋಜಿ ರಾವ್. ಮೊಗ್ಗಿನ ಮನಸ್ಸು ಶಶಾಂಕ್​ ನಿರ್ದೇಶನದ ಸಿಕ್ಸರ್ ಪ್ರಜ್ವಲ್ ಕರಿಯರ್​ಗೆ ಭದ್ರ ಬುನಾದಿ ಹಾಕಿಕೊಟ್ಟಿತು. ನಂತ್ರ ರಘು ಮುಖರ್ಜಿ ಹಾಗೂ ಶ್ರೀನಗರ ಕಿಟ್ಟಿ ಕಾಂಬೋನಲ್ಲಿ ಬಂದ ಸವಾರಿ ಚಿತ್ರವನ್ನ ಸಹ ರಾಮೋಜಿ ರಾವ್ ಅವರೇ ನಿರ್ಮಾಣ ಮಾಡಿದ್ದರು.

ನುವ್ವೇ ಕಾವಾಲಿ ಸಿನಿಮಾಗೆ ನ್ಯಾಷನಲ್ ಅವಾರ್ಡ್​ ಪಡೆದ ರಾಮೋಜಿ ರಾವ್, ನಾಲ್ಕು ಸೌತ್ ಫಿಲ್ಮ್ ಫೇರ್, ಐದು ನಂದಿ ರಾಜ್ಯ ಪ್ರಶಸ್ತಿಗಳನ್ನ ಪಡೆದಿದ್ದರು. ಅಲ್ಲದೆ, ಅವ್ರ ಸೇವೆಯನ್ನ ಪರಿಗಣಿಸಿ ಕೇಂದ್ರ ಸರ್ಕಾರ ಪದ್ಮ ವಿಭೂಷಣ ನೀಡೋ ಮೂಲಕ ಗೌರವಿಸಿತ್ತು. ಇಂತಹ ಲೆಜೆಂಡ್ ಇನ್ನಿಲ್ಲ ಅನ್ನೋದು ನಿಜಕ್ಕೂ ಶಾಕಿಂಗ್ ನ್ಯೂಸ್. ಇವರ ಅಗಲಿಕೆಗೆ ಪಿಎಂ ನರೇಂದ್ರ ಮೋದಿ, ತಮಿಳು ನಾಡು ಸಿಎಂ ಸ್ಟಾಲಿನ್, ಸಿಎಂ ಸಿದ್ದರಾಮಯ್ಯ, ಸಿಎಂ ಚಂದ್ರಬಾಬು ನಾಯ್ಡು ಸೇರಿದಂತೆ ಚಿತ್ರರಂಗದ ಬಹುತೇಕ ಎಲ್ಲಾ ಸೂಪರ್ ಸ್ಟಾರ್​ಗಳು ಸಂತಾಪ ಸೂಚಿಸಿದ್ದಾರೆ.

ಲಕ್ಷ್ಮೀನಾರಾಯಣ್ ಬಿ.ಎಸ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES