Monday, October 7, 2024

ವರುಣಾರ್ಭಟ: ಮನೆಗಳಿಗೆ ನುಗ್ಗಿದ ಮಳೆ ನೀರು, ನೆಲಕಚ್ಚಿದ 118 ಮರಗಳು

ಬೆಂಗಳೂರು: ನಗರದಲ್ಲಿ ಸತತ ಎರಡನೇ ದಿನವೂ ಬಿರುಗಾಳಿ ಸಹಿತ ಧಾರಾಕಾರವಾಗಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ರಾಜಧಾನಿಯ ಬಹುತೇಕ ಭಾಗಗಳಲ್ಲಿ ನಿನ್ನೆ ತಡರಾತ್ರಿ ವರೆಗೆ ವಾಹನ ಸವಾರರು ಪರದಾಡಬೇಕಾಯಿತು.

ಭಾರಿ ಮಳೆಗೆ ಬಿಬಿಎಂಪಿಯ ವಿವಿಧ ವಲಯಗಳಲ್ಲಿ118 ಮರಗಳು ಹಾಗೂ 128 ರೆಂಬೆ ಕೊಂಬೆಗಳು ನೆಲಕ್ಕುರುಳಿವೆ. ದಕ್ಷಿಣ ವಲಯದಲ್ಲಿಅತಿ ಹೆಚ್ಚು 40 ಮರಗಳು ನೆಲಕ್ಕೆ ಬಿದ್ದಿವೆ. ಇವುಗಳ ಪೈಕಿ 48 ಮರಗಳು ಮತ್ತು 99 ರೆಂಬೆ- ಕೊಂಬೆಗಳನ್ನು ಬಿಬಿಎಂಪಿ ಸಿಬ್ಬಂದಿ ತೆರವುಗೊಳಿಸಿದ್ದು, ಕಾರ್ಯಾಚರಣೆ ಮುಂದುಸುವರಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮರ ಬಿದ್ದು ಆಟೋ ಸಂಪೂರ್ಣ ಜಖಂ:

ಬಿರುಗಾಳಿ ಮಳೆಗೆ ಬೆಂಗಳೂರಿನ ಹಲವಡೆ ಮರಗಳು ಧರೆಗುರುಳಿವೆ. ಇನ್ನು ಮರ ಬಿದ್ದು ಆಟೋ ಸಂಪೂರ್ಣ ಜಖಂ ಆಗಿರುವ ಘಟನೆ ಬೆಂಗಳೂರಿನ ಬಸವೇಶ್ವರ ನಗರದ ಹೌಸಿಂಗ್ ಬೋರ್ಡ್ ರಸ್ತೆಯಲ್ಲಿ ನಡೆದಿದೆ. ಅಲ್ಲದೇ ಮರಬಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಈ ವೇಳೆ ಟ್ರಾಫಿಕ್ ಪೊಲೀಸ್ ಹಾಗೂ ಬಿಬಿಎಂಪಿ ಸಿಬ್ಬಂದಿ ಮರ ತೆರವು ಮಾಡಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.

ರಾಜರಾಜೇಶ್ವರಿನಗರದ ಮನೆಗಳಿಗೆ ನುಗ್ಗಿದ ಮಳೆ ನೀರು:

ನಿನ್ನೆ ಬೆಂಗಳೂರಿನಾದ್ಯಂತ ಸುರಿದ ಭಾರಿ ಮಳೆಗೆ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಇನ್ನು ರಾಜರಾಜೇಶ್ವರಿನಗರದ ಹಲವೆಡೆ ಮನೆಗಳಿಗೆ ಮಳೆ ನೀರು ನುಗ್ಗಿದೆ. ಇನ್ನು ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ರಾತ್ರಿ ಶಾಸಕ ಮುನಿರತ್ನ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮತ್ತು ಅಧಿಕಾರಿಗಳಿಗೆ ತ್ವರಿತವಾಗಿ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ

ಮಳೆಗೆ ಮಹಾಲಕ್ಷ್ಮಿ ಲೇಔಟ್​​ನಲ್ಲಿ ಅವಾಂತರ:

ನಿನ್ನೆ ಸುರಿದ ಮಳೆಗೆ ಮಹಾಲಕ್ಷ್ಮಿ ಲೇಔಟ್​​ನಲ್ಲಿ ಅವಾಂತರ ಸೃಷ್ಠಿಯಾಗಿದೆ. ಇನ್ನು ಸುತ್ತಮುತ್ತ ಮನೆಗೆ ರಾತ್ರಿ ಮಳೆ ನೀರು ನುಗ್ಗಿದ್ರಿಂದ ಜನ ಕಂಗಾಲಾಗಿದ್ದಾರೆ. ಮಳೆಯಿಂದಾಗಿ ಹಾನಿಯಾದ ಸ್ಥಳಕ್ಕೆ ರಾತ್ರಿ ಸ್ಥಳೀಯ ಶಾಸಕ ಗೋಪಾಲಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮತ್ತು ಅಧಿಕಾರಿಗಳಿಗೆ ಕೂಡಲೇ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದ್ದಾರೆ.

ತೆರವು ಕಾರ್ಯಾಚರಣೆ ನಡೀತಾ ಇದೆ:

ನಿನ್ನೆ ಸುರಿದ ಭಾರಿ ಮಳೆಗೆ ರಾಜಧಾನಿ ಬೆಂಗಳೂರು ಅಕ್ಷರಶಃ ನಲುಗಿದೆ. ಈ ಕುರಿತು ಶಾಸಕ ಸುರೇಶ್​ ಕುಮಾರ್​ ಪ್ರತಿಕ್ರಿಯೆ ನೀಡಿದ್ದು ಬೆಂಗಳೂರಿನಲ್ಲಿ ಈಗಾಗಲೇ ಸಾಕಷ್ಟು ಮರಗಳು ಉರುಳಿವೆ ಎಂದು ಹೇಳಿದ್ದಾರೆ. ತೆರವು ಕಾರ್ಯಾಚರಣೆ ನಡೀತಾ ಇದೆ. ದೊಡ್ಡ ದೊಡ್ಡ ಮರಗಳು ಇವೆ. ಫಾರೆಸ್ಟ್ ಡಿಪಾರ್ಟಮಂಟ್​​ಗೂ ಹೇಳಿದ್ದೇವೆ. ನಾನು ಹಿಂದೆಯೇ ಬಿಬಿಎಂಪಿಗೂ ಹೇಳಿದ್ದೆ. ಮರಗಳ ಸರ್ವೇ ಮಾಡಿಸಿ ಅಂತ, ಅದನ್ನ ಮಾಡಿಸಿದ್ದರೆ ಇಷ್ಟೊಂದು ಆಗ್ತಾ ಇರಲಿಲ್ಲ. ಈಗಲೂ ಅವರಿಗೆ ಹೇಳಿತ್ತೇನೆ. ಒಂದು ಸರ್ವೇ ಮಾಡಿಸಿ ಬೀಳುವ ಮರ ಯಾವುದು ಅಂತ ತೆರವು ಮಾಡಿ ಎಂದರು.

ಪಾನಿಪುರಿ ಅಂಗಡಿ ಮೇಲೆ ಬಿದ್ದ ಮರ:

ಬೆಂಗಳೂರಿನಲ್ಲಿ ಮಳೆ ಅಬ್ಬರಿಸುತ್ತಿದೆ. ಭಾರೀ ಗಾಳಿ ಮಳೆಗೆ ಹಲವಾರು ಕಡೆ ಮರಗಳು ನೆಲಕಚ್ಚಿವೆ. ಕೆಲವು ಕಡೆ ಲೈಟ್​ ಕಂಬಗಳು ಮುರಿದುಬಿದ್ದಿವೆ. ಇನ್ನು ಹುಳಿಮಾವು ರಸ್ತೆಯಲ್ಲಿ ಮರ ಧರೆಗುರುಳಿದು, ಪಾನಿಪುರಿ ಅಂಗಡಿ ಮೇಲೆ ಬಿದ್ದಿದೆ. ಜೊತೆಗೆ 10 ಬೈಕ್​ಗಳು ಜಖಂಗೊಂಡಿವೆ.

ಇದನ್ನೂ ಓದಿ: ಮುಂಗಾರು ಆರಂಭದಲ್ಲೇ ಬೆಂಗಳೂರು ಅಸ್ತವ್ಯಸ್ತ: ವಾಹನ ಸವಾರರು ಹೈರಾಣು

ಕಾಂಪ್ಲೆಕ್ಸ್ ಬೇಸ್ಮೆಂಟ್‌ ನುಗ್ಗಿದ ಮಳೆ ನೀರು:

ಬೆಂಗಳೂರಿನ ಬುಲ್ ಟೆಂಪಲ್ ರಸ್ತೆಯಲ್ಲಿ ಕಾಂಪ್ಲೆಕ್ಸ್ ಬೇಸ್ಮೆಂಟ್​​ಗೆ ಮಳೆ ನೀರು ನುಗ್ಗಿ ಸಾಕಷ್ಟು ಅವಾಂತರ ಸೃಷ್ಠಿ ಮಾಡಿದೆ. ತಗ್ಗು ಪ್ರದೇಶ ಇರುವ ಹಿನ್ನೆಲೆ ಬೇಸ್ಮಂಟ್​​ನಲ್ಲಿ 6 ಅಡಿಯಷ್ಟು ಮಳೆ ನೀರು ನಿಂತು ಕೆರೆಯಂತಾಗಿದೆ. ಬೇಸ್ಮೆಂಟ್​​ನಿಂದ ನೀರು ಹೊರಹಾಕಲು ಕಟ್ಟಡ ನಿವಾಸಿಗಳ ಹರಸಾಹಾಸ ಪಡುತ್ತಿದ್ದಾರೆ. ಇನ್ನು ಕಾಂಪ್ಲೆಕ್ಸ್ ಪಾರ್ಕಿಂಗ್​​ನಲ್ಲಿದ್ದ 4 ಬೈಕ್​​ಗಳು ಸಂಪೂರ್ಣ ‌ಮುಳುಗಡೆಯಾಗಿವೆ.

ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭ:

ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಮೆಟ್ರೋ ಹಳಿ ಮೇಲೆ ಮರದ ಕೊಂಬೆ ಮುರಿದು ಬಿದ್ದ ಹಿನ್ನೆಲೆ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಆದರೆ ಮರದ ಕೊಂಬೆ ಸಿಬ್ಬಂದಿ ತೆರವುಗೊಳಿಸಿದ್ದಾರೆ. ಹೀಗಾಗಿ ಎಂದಿನಂತೆ ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾಗಿದೆ ಎಂದು ಬಿಎಂಆರ್‌ಸಿ‌ಎಲ್‌ನಿಂದ ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES