ನವದೆಹಲಿ : ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮೂರನೇ ಅವಧಿ ದೂರವಿಲ್ಲ. ಗರಿಷ್ಠ 100 ರಿಂದ 125 ದಿನಗಳು ಉಳಿದಿದ್ದು, ಇಡೀ ದೇಶವೇ ಹೇಳುತ್ತಿದೆ. ಈ ಬಾರಿ ನಾವು 400ಕ್ಕೂ ಹೆಚ್ಚು ದಾಟುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಉದ್ದೇಶಿಸಿ ಲೋಕಸಭೆಯಲ್ಲಿ ಅವರು ಮಾತನಾಡಿದರು. 2024ರ ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ ಖಂಡಿತಾ 400ಕ್ಕೂ ಹೆಚ್ಚು ಸೀಟುಗಳನ್ನು ಪಡೆಯುತ್ತದೆ. ಬಿಜೆಪಿ ಸ್ವಂತ ಬಲದಿಂದ 370 ಸೀಟುಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕುಟುಂಬ ರಾಜಕಾರಣದಿಂದ ಕಾಂಗ್ರೆಸ್ ಅಂಗಡಿ ಮುಚ್ಚುವ ಕಾಲ ಬಂದಿದೆ. ನೂರು ದಿನಗಳಲ್ಲಿ ನಮ್ಮ ಸರ್ಕಾರ ರಚೆನಯಾಗಲಿದೆ. ನಾವು ಸಾಧಿಸಿದ ಅಭಿವೃದ್ಧಿ ಕಾಂಗ್ರೆಸ್ ಪಕ್ಷಕ್ಕೆ ಇನ್ನೂ 100 ವರ್ಷ ಬೇಕು ಎಂದು ವಾಗ್ದಾಳಿ ನಡೆಸಿದರು.
ನೆಹರೂಗಿಂತ ಇಂದಿರಾ ಕಡಿಮೆ ಇರಲಿಲ್ಲ
ಕಾಂಗ್ರೆಸ್ ಪಕ್ಷವು ದೇಶದ ಶಕ್ತಿ ಹಾಗೂ ಸಾಮರ್ಥ್ಯಗಳಲ್ಲಿ ಎಂದಿಗೂ ನಂಬಿಕೆ ಇಟ್ಟಿಲ್ಲ. ನೆಹರೂ ಪ್ರಧಾನಿಯಾಗಿ ತಮ್ಮ ಮೊದಲ ಭಾಷಣದಲ್ಲಿ ವಿದೇಶಿಯರಿಗೆ ಹೋಲಿಸಿದರೆ, ಭಾರತೀಯರಿಗೆ ಕೌಶಲದ ಕೊರತೆಯಿದೆ ಎಂದಿದ್ದರು. ಅವರು ಸೋಮಾರಿಗಳಂತೆ ಕೆಲಸ ಮಾಡುತ್ತಾರೆ ಎಂದಿದ್ದರು. ನೆಹರೂಗಿಂತ ಇಂದಿರಾ ಕಡಿಮೆ ಇರಲಿಲ್ಲ. ಭಾರತೀಯರಲ್ಲಿ ಆತ್ಮಸ್ಥೈರ್ಯದ ಕೊರತೆ ತುಂಬಿದೆ ಅಂದಿದ್ದರು ಎಂದು ನೆಹರೂ ಹಾಗೂ ಇಂದಿರಾ ಮೇಲೆ ಪ್ರಧಾನಿ ಮೋದಿ ಹರಿಹಾಯ್ದರು.