ತುಮಕೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 28 ಕ್ಷೇತ್ರವನ್ನು ಗೆಲ್ಲುವುದು ಖಚಿತ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ತುಮಕೂರಿನಲ್ಲಿ ಬಿಜೆಪಿ ಆಯೋಜಿಸಿದ್ದ ರಾಜ್ಯ ಮಟ್ಟದ ಶಕ್ತಿವಂದನಾ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. “ಚುನಾವಣೆಗೆ ಟಿಕೆಟ್ ಹಂಚಿಕೆ ವಿಚಾರ ಸದ್ಯದಲ್ಲೇ ಹೈಮಾಂಡ್ ಮಟ್ಟದಲ್ಲಿ ಚರ್ಚೆಯಾಗಿ ತೀರ್ಮಾನವಾಗಲಿದೆ. ಮಾಜಿ ಸಚಿವ ವಿ ಸೋಮಣ್ಣ ತುಮಕೂರಿನಲ್ಲಿ ಸ್ಪರ್ಧಿಸಲು ವರಿಷ್ಠರು ಒಪ್ಪಿಗೆ ಸೂಚಿಸಿದರೆ, ನಮ್ಮದೇನು ಅಭ್ಯಂತರವಿಲ್ಲ” ಎಂದಿದ್ದಾರೆ.
“ಸೋಮಣ್ಣನವರು ಹಿರಿಯರಿದ್ದಾರೆ. ಪಕ್ಷ ಒಟ್ಟಾಗಿ ಕೂತು ಚರ್ಚೆ ಮಾಡಲಿದೆ. ರಾಜ್ಯದ 28 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸಿಯೇ ವರಿಷ್ಠರು ತೀರ್ಮಾನ ಮಾಡುತ್ತಾರೆ. ತುಮಕೂರು ಜಿಲ್ಲೆಗೆ ಸೋಮಣ್ಣ ಅವರು ಸ್ಪರ್ಧಿಸುವ ವಿಚಾರವೂ ಕೂಡ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ ನಂತರ ತೀರ್ಮಾನ ಮಾಡಲಾಗುತ್ತದೆ” ಎಂದು ತಿಳಿಸಿದರು.