ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಲು ಸಿದ್ದರಾಗಿದ್ದಾರೆ.ಇದು ಅವರು ಮಂಡಿಸುತ್ತಿರುವ ಆರನೇ ಬಜೆಟ್ ಆಗಿದೆ. ಇದು ಸಾರ್ವತ್ರಿಕ ಚುನಾವಣೆಯ ವರ್ಷವಾಗಿರುವುದರಿಂದ, ಹೊರಹೋಗುವ ಸರ್ಕಾರವು ಸಾಮಾನ್ಯ ಪೂರ್ಣ ಪ್ರಮಾಣದ ಬದಲಿಗೆ ಮಧ್ಯಂತರ ಬಜೆಟ್ ಅಥವಾ ಲೇಖಾನುದಾನ ಪ್ರಸ್ತುತಪಡಿಸಲು ಮಾತ್ರ ಅವಕಾಶವಿರುತ್ತದೆ.
ಈ ಮಧ್ಯಂತರ ಬಜೆಟ್ ಮಂಡಿಸಿದರೆ, ನಿರ್ಮಲಾ ಸೀತಾರಾಮನ್ ಅವರು ಸತತ 6ನೇ ಬಾರಿಗೆ ಬಜೆಟ್ ಮಂಡಿಸಿದ ದೇಶದ ಎರಡನೇ ವಿತ್ತ ಸಚಿವರು ಎಂಬ ಕೀರ್ತಿಗೆ ಪಾತ್ರರಾಗಲಿದ್ದಾರೆ.
ಸಾಮಾನ್ಯ ಪೂರ್ಣ ಪ್ರಮಾಣದ ಬಜೆಟ್ ಅನ್ನು ಜುಲೈ ತಿಂಗಳಲ್ಲಿ ಮಂಡಿಸುವ ಸಾಧ್ಯತೆ ಇದೆ. ಅಧಿಕಾರಕ್ಕೆ ಬರುವ ಹೊಸ ಸರ್ಕಾರವು ಈ ಬಜೆಟ್ ಮಂಡಿಸಲಿದೆ. ಇದು ಮಧ್ಯಂತರ ಬಜೆಟ್ ಎನ್ನುವುದಕ್ಕಿಂತಲೂ ಲೇಖಾನುದಾನ ಎಂದು ಕರೆಯಬಹುದು ಎಂದು ಸ್ವತಃ ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.
ಮಧ್ಯಂತರ ಬಜೆಟ್ ಎಂದರೇನು?
ಮಧ್ಯಂತರ ಬಜೆಟ್ ಹಾಗೂ ವೋಟ್ ಆನ್ ಅಕೌಂಟ್ ಪರಸ್ಪರ ಬದಲಿಯಾಗಿ ಬಳಸುತ್ತಿದ್ದರೂ ಅವುಗಳ ನಡುವೆ ಕೆಲವು ವ್ಯತ್ಯಾಸಗಳಿವೆ. ಮಧ್ಯಂತರ ಬಜೆಟ್ ಸಾಮಾನ್ಯವಾಗಿ ಆರ್ಥಿಕತೆಯ ಪ್ರಸ್ತುತ ಸ್ಥಿತಿ, ಯೋಜನೆ ಮತ್ತು ಯೋಜನೇತರ ವೆಚ್ಚಗಳು ಮತ್ತು ರಸೀದಿಗಳು, ತೆರಿಗೆ ದರಗಳಲ್ಲಿನ ಬದಲಾವಣೆಗಳು, ಪ್ರಸಕ್ತ ಹಣಕಾಸು ವರ್ಷದ ಪರಿಷ್ಕೃತ ಅಂದಾಜುಗಳು ಮತ್ತು ಮುಂಬರುವ ಹಣಕಾಸು ವರ್ಷದ ಅಂದಾಜುಗಳಿರುತ್ತವೆ. ಈ ಬಜೆಟ್ ಮಂಡಿಸಿದ ಬಳಿಕ ಸಂಸತ್ತಿನಿಂದ ಒಪ್ಪಿಗೆ ಪಡೆಯಬೇಕಾಗುತ್ತದೆ.
ಲೇಖಾನುದಾನ ಎಂದರೇನು?
ಕೇಂದ್ರ ಸರ್ಕಾರದ ಸಿಬ್ಬಂದಿಯ ಸಂಬಳ, ಚಾಲ್ತಿಯಲ್ಲಿರುವ ಯೋಜನೆಗಳಿಗೆ ನಿಧಿ ಪೂರೈಕೆ ಮತ್ತು ಇತರ ಸರ್ಕಾರಿ ವೆಚ್ಚಗಳಂತಹ ಅಗತ್ಯ ವೆಚ್ಚಗಳನ್ನು ಪೂರೈಸಲು ಸಂಸತ್ತು ಲೇಖಾನುದಾನಕ್ಕೆ ಒಪ್ಪಿಗೆ ನೀಡುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಹೊರಹೋಗುವ ಸರ್ಕಾರವು ಎರಡು ತಿಂಗಳ ಅವಧಿಗೆ ಭರಿಸಬೇಕಾದ ವೆಚ್ಚಗಳನ್ನು ಮಾತ್ರ ಲೆಕ್ಕಹಾಕುತ್ತದೆ, ಇದನ್ನು ವಿಶೇಷ ಸಂದರ್ಭಗಳಲ್ಲಿ ನಾಲ್ಕು ತಿಂಗಳವರೆಗೆ ವಿಸ್ತರಿಸಬಹುದು.
ಮಧ್ಯಂತರ ಬಜೆಟ್-ಲೇಖಾನುದಾನ ನಡುವೆ ವ್ಯತ್ಯಾಸ ಏನು?
ಪೂರ್ಣ ಪ್ರಮಾಣದ ಬಜೆಟ್‌ನಂತೆ ಮಧ್ಯಂತರ ಬಜೆಟ್‌ನಲ್ಲೂ ಚರ್ಚೆ ನಡೆಸಲಾಗುತ್ತದೆ. ಬಳಿಕ ಲೋಕಸಭೆ ಬಜೆಟ್ ಅನ್ನು ಪಾಸು ಮಾಡುತ್ತದೆ. ಲೇಖಾನುದಾನವಾಗಿದ್ದರೆ, ಯಾವುದೇ ಚರ್ಚೆ ಇಲ್ಲದೇ ಸಂಸತ್ ಒಪ್ಪಿಗೆ ನೀಡುತ್ತದೆ. ಮಧ್ಯಂತರ ಬಜೆಟ್‌ನಲ್ಲಿ ತೆರಿಗೆ ಸಂಗ್ರಹ, ಪದ್ಧತಿಯಲ್ಲಿ ಬದಲಾವಣೆಗಳನ್ನು ಮಾಡಲು ಅವಕಾಶವಿರುತ್ತದೆ. ಆದರೆ, ಲೇಖಾನುದಾನ ಮಂಡಿಸಿದರೆ ಇದಕ್ಕೆ ಅವಕಾಶವೇ ಇರುವುದಿಲ್ಲ. ಏಪ್ರಿಲ್‌ನಿಂದ ಜೂನ್/ಜುಲೈ ತಿಂಗಳವರೆಗೆ ಅಥವಾ ಹೊಸ ಸರ್ಕಾರ ಪೂರ್ಣ ಪ್ರಮಾಣ ಬಜೆಟ್ ಮಂಡಿಸುವವರೆಗೂ ಕೇಂದ್ರ ಸಂಚಿತ ನಿಧಿಯಿಂದ ಹಣ ಬಿಡುಗಡೆ ಮಾಡಲು ಲೇಖಾನುದಾನ ಅವಕಾಶ ಕಲ್ಪಿಸಿಕೊಡುತ್ತದೆ.
ಇದನ್ನು ಮುಂಗಡ ಅನುದಾನ, ಮಧ್ಯಂತರ ವ್ಯವಸ್ಥೆ ಮತ್ತು ಮೇಲೆ ಹೇಳಿದ ನಿಧಿಯಿಂದ ಹಣವನ್ನು ಡ್ರಾ ಮಾಡಲು ಮತ್ತು ಅಲ್ಪಾವಧಿಯ ಖರ್ಚುಗಳನ್ನು ಪೂರೈಸಲು ಹೊರಹೋಗುವ ಸರ್ಕಾರಕ್ಕೆ ನೀಡುವ ಅಧಿಕಾರ ಎಂದು ಕರೆಯಬಹುದು. ಸಿಂಧುತ್ವಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಮಧ್ಯಂತರ ಬಜೆಟ್ ಒಂದು ವರ್ಷದುದ್ದಕ್ಕೂ ಮಾನ್ಯವಾಗಿರುತ್ತದೆ. ಲೇಖಾನುದಾನ ಮಾನ್ಯತೆಯು ಎರಡರಿಂದ ನಾಲ್ಕು ತಿಂಗಳ ಅವಧಿಗೆ ಮಾತ್ರ ಇರುತ್ತದೆ.