ಮಂಡ್ಯ : ನಾವು ಒಂದು ಲಕ್ಷ ತ್ರಿವರ್ಣ ಧ್ವಜವನ್ನು ಹಾರಿಸುತ್ತೇವೆ. ನಾವೂ ಮಂಡ್ಯದಲ್ಲಿ ಶಾಂತಿ ಯಾತ್ರೆ ಮಾಡ್ತೀವಿ ಎಂದು ಮಂಡ್ಯ ಶಾಸಕ ರವಿ ಗಣಿಗ ಬಿಜೆಪಿಗರಿಗೆ ಸವಾಲ್ ಹಾಕಿದ್ದಾರೆ.
ಕೆರಗೋಡು ಹನುಮ ಧ್ವಜ ವಿವಾದ ಪ್ರಕರಣ ಸಂಬಂಧ ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ತಿರಂಗ ನಡಿಗೆ ಮಾಡೇ ಮಾಡ್ತೀವಿ. ಅದ್ಯಾರು ಬಂದು ತಡೆಯುತ್ತಾರೋ ನೋಡೊಣ ಎಂದು ಹೇಳಿದ್ದಾರೆ.
ಭಾರತ ಧ್ವಜ ಹಾರಿಸಿದ್ದಕ್ಕೆ ನನ್ನ ಫ್ಲೆಕ್ಸ್ಗೆ ಚಪ್ಪಲಿಯಲ್ಲಿ ಹೊಡೆಸಿದ್ದಾರೆ. ಎರಡು ದಿನ ಇಲ್ಲಿ ಬಂದು ಗಲಭೆ ಸೃಷ್ಠಿಸಿದವರ ವಿರುದ್ಧ ಕ್ರಮ ಆಗಬೇಕು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ. ನನಗೆ ಸರ್ಕಾರ ರಕ್ಷಣೆ ಕೊಡಬೇಕು ಎಂದು ತಿಳಿಸಿದ್ದಾರೆ.
BJP-JDS ಕ್ರಿಮಿನಲ್ ಮೈಂಡ್ನಿಂದ ಗಲಭೆ
ಟ್ರೈನ್ಡ್ ಆರ್ಎಸ್ಎಸ್ನವರು ಹೊರಗಿನಿಂದ ಬಂದು ಗಲಭೆ ಮಾಡಿದ್ದಾರೆ. ಈ ಧ್ವಜದ ವಿಚಾರವನ್ನ ವಿವಾದ ಮಾಡಿ ಗಲಭೆ ಮಾಡಿದ್ದಾರೆ. ಜೆಡಿಎಸ್ನ ಕ್ರಿಮಿನಲ್ ಮೈಂಡ್ ಹಾಗೂ ಆರ್ಎಸ್ಎಸ್ನ ಕ್ರಿಮಿನಲ್ ಮೈಂಡ್ ನಿಂದ ಗಲಭೆ ಆಗಿದೆ. ಪೂರ್ವ ನಿಯೋಜಿತ ಫ್ಲಾನ್ ಮಾಡಿ ಗಲಾಟೆ ಮಾಡಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕೆರಗೋಡು ಜನಕ್ಕೆ ಆ ಘೋಷಣೆ ಕೂಗೋದಕ್ಕೆ ಬರಲ್ಲ
ಒಂದು ಊರಿಗೆ ಬೆಂಕಿ ಹಚ್ಚಲೇಬೇಕು ಅಂತ ಡಿಸೈಡ್ ಮಾಡಿದಾಗ ಏನೇನು ಆಗಬೇಕೋ ಅದು ಆಗಿದೆ. ಭಾರತದಲ್ಲಿ ರಾಷ್ಟ್ರಧ್ವಜ ಹಾರಿಸಿದ್ರೂ ಈ ರೀತಿಯ ವಿರೋಧ ಆಗುತ್ತೆ ಅಂದ್ರೆ ಏನು? ಹೊರಗಿನಿಂದ ಗಲಭೆಕೋರರನ್ನ ಕರೆಸಿ ಗಲಾಟೆ ಮಾಡಲಾಗಿದೆ. ನಮ್ಮ ಕೆರಗೋಡು ಜನಕ್ಕೆ ಆ ಘೋಷಣೆ ಕೂಗೋದಕ್ಕೆ ಬರಲ್ಲ. ಆದರೆ, ಹೊರಗಿನವರನ್ನ ಕರೆತಂದು ಗಲಾಟೆ ಮಾಡಿ, ಕಲ್ಲು ಹೊಡೆಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.