ತುಮಕೂರು : ಪ್ರಸ್ತುತ ಕೃಷಿಯ ಕಡೆಗೆ ಯಾರು ಸಹ ತಿರುಗಿಯೂ ನೋಡುತ್ತಿಲ್ಲ ಎಂದು ಸಿದ್ಧಗಂಗಾ ಮಠದ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ತುಮಕೂರು ನಗರದಲ್ಲಿ ಒಕ್ಕಲಿಗ ಯುವ ಬ್ರಿಗೇಡ್, ಎನ್ಆರ್ಐ ಒಕ್ಕಲಿಗರ ಬ್ರಿಗೇಡ್ ವತಿಯಿಂದ ಆಯೋಜಿಸಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲ ಕಡೆ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಒಂದು ಹುದ್ದೆಗೆ ಸಾವಿರಾರು ಜನ ಸ್ಪರ್ಧೆ ನೀಡುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಕೆಲವರು ಕೃಷಿಯತ್ತ ಆಸಕ್ತಿ ತೋರಿದ್ದರು. ಈಗ ಹೆಚ್ಚಿನ ಜನರು ಕೃಷಿಯತ್ತ ಗಮನ ಹರಿಸುತ್ತಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.
ಶಿಕ್ಷಣದ ಜೊತೆ ಮಾನವೀಯ ಗುಣ ಮುಖ್ಯ
ಉದ್ಯೋಗ ಗಿಟ್ಟಿಸಿಕೊಳ್ಳಲು ಶಿಕ್ಷಣದ ಜತೆಗೆ ಮಾನವೀಯ ಗುಣ, ಸಾಮಾನ್ಯ ಜ್ಞಾನ ಹಾಗೂ ನಡವಳಿಕೆ ತುಂಬಾ ಮುಖ್ಯ. ಉದ್ಯೋಗ ಮೇಳದಿಂದ ಕಂಪೆನಿಗಳಿಗೆ ಕೌಶಲ ಹೊಂದಿದ ನೌಕರರು ಸಿಕ್ಕರೆ, ದುಡಿಯಬೇಕು ಎಂಬ ಹಂಬಲ ಇರುವ ವ್ಯಕ್ತಿಗಳಿಗೆ ಉದ್ಯೋಗ ದೊರೆಯುತ್ತದೆ. ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಇದೊಂದು ಉತ್ತಮ ವೇದಿಕೆ ಎಂದು ಅಭಿಪ್ರಾಯಪಟ್ಟರು.
ದುಡಿಯುವ ಕೈಗಳಿಗೆ ಕೆಲಸ ನೀಡಲು ಮೇಳ
ಇಸ್ಕಾನ್ನ ಉಪಾಧ್ಯಕ್ಷ ಭಕ್ತ ನಂದ ನಂದನ ಪ್ರಭು ಮಾತನಾಡಿ, ಕೌಶಲ ಮತ್ತು ಸಾಮರ್ಥ್ಯ ಬೆಳೆಸುವ ನಿಟ್ಟಿನಲ್ಲಿ ಒಕ್ಕಲಿಗ ಯುವ ಬ್ರಿಗೇಡ್ ಉದ್ಯೋಗ ಮೇಳ ಹಮ್ಮಿಕೊಂಡಿದೆ. ದುಡಿಯುವ ಕೈಗಳಿಗೆ ಕೆಲಸ ನೀಡಲು ಈ ಮೇಳ ಸಹಕಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಒಕ್ಕಲಿಗ ಯುವ ಬ್ರಿಗೇಡ್ನ ಅಧ್ಯಕ್ಷ ನಂಜೇಗೌಡ ನಂಜುಂಡ, ನಿವೃತ್ತ ಐಎಎಸ್ ಅಧಿಕಾರಿ ಎಂ.ಕೆ.ಶಂಕರಲಿಂಗೇಗೌಡ, ಕಾರ್ಮಿಕ ಇಲಾಖೆಯ ಆಯುಕ್ತ ಎಚ್.ಎನ್. ಗೋಪಾಲಕೃಷ್ಣ, ಮುರಳೀಧರ್ ಹಾಲಪ್ಪ ಮತ್ತಿತರಿದ್ದರು.