ಚಾಮರಾಜನಗರ : ಸಂಕ್ರಾಂತಿ ಹಬ್ಬದ ಸಡಗರದ ನಡುವೆ ಜವರಾಯ ಅಟ್ಟಹಾಸ ಮೆರೆದಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ನಡೆದಿದೆ. ಒಂದೇ ಕುಟುಂಬದ ಗಂಡ, ಹೆಂಡತಿ, ಮಕ್ಕಳು ಸೇರಿ ನಾಲ್ವರು ಅಸುನೀಗಿರುವ ದುರ್ಘಟನೆ ಸಂಭವಿಸಿದೆ.
ಕೊಳ್ಳೇಗಾಲ ಪಾಳ್ಯ ಗ್ರಾಮದ ಸಂತೋಷ್ (32), ಸೌಮ್ಯ (27), ಮಕ್ಕಳಾದ ಅಭಿ (9) ನಿತ್ಯಸಾಕ್ಷಿ (4) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಅಪಘಾತ ಸಂಭವಿಸಿದ ಸ್ಥಳದಲ್ಲೇ ಮೂವರು ಅಸುನಿಗಿದ್ದರೆ, ಅಭಿ ಎಂಬ ಮತ್ತೊಂದು ಮಗು ಗಂಭೀರ ಗಾಯಗೊಂಡು ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆ ಮಗುವು ಮೃತಪಟ್ಟಿದೆ.
ಇನ್ನು ಸ್ಥಳಕ್ಕೆ ಕೊಳ್ಳೇಗಾಲ ಡಿವೈಎಸ್ಪಿ ಸೋಮೇಗೌಡ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಮೃತ ದೇಹಗಳನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಅಪಘಾತ ನಡೆದಿದ್ದು ಹೇಗೆ?
ಹಬ್ಬಕ್ಕೆಂದು ಬಟ್ಟೆ ತರಲು ಕೊಳ್ಳೇಗಾಲಕ್ಕೆ ಸಂತೋಷ್ ಕುಟುಂಬ ಬೈಕ್ ನಲ್ಲಿ ತೆರಳುತ್ತಿದ್ದಾಗ ಜಿನಕನಹಳ್ಳಿ ಸಮೀಪ ಭತ್ತ ಕತ್ತರಿಸುವ ಯಂತ್ರ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಬೈಕ್ ನಿಂದ ನಾಲ್ವರು ಕೆಳಕ್ಕೆ ಬಿದ್ದಿದ್ದು ಮೂವರು ಸ್ಥಳದಲ್ಲೇ ಅಸುನೀಗಿದ್ದರೆ ಮತ್ತೊಂದು ಮಗು ಆಸ್ಪತ್ರೆಯಲ್ಲಿ ಸಾವನ್ನಪ್ಪುವ ಮೂಲಕ ಇಡೀ ಗ್ರಾಮವೇ ಮೌನವಾಗುವಂತೆ ಮಾಡಿದೆ.