ಉತ್ತರ ಕನ್ನಡ : ಅಯೋಧ್ಯೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದ ಅನಂತ್ಕುಮಾರ್ ಹೆಗಡೆ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತನಾಡಿದ ಅನಂತಕುಮಾರ್ ಹೆಗಡೆ, ನೀನು ಬರ್ಲಿ, ಇಲ್ಲ ಬಿಡಲಿ, ರಾಮ ಜನ್ಮಭೂಮಿ ಏನೂ ನಿಲ್ಲೋದಿಲ್ಲ ಮಗನೇ ಎಂದು ನಿಂದಿಸಿದರು. ನಾನು ಅಯೋಧ್ಯೆಗೆ ಹೋಗುತ್ತೇನೆ. ಆದರೆ 22 ಕ್ಕೆ ಹೋಗಲ್ಲ ಆಮೇಲೆ ಹೊಗುತ್ತೇನೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಮೊದಲು ಹೋಗಲ್ಲ ಅಂದಿದ್ದವರು ಈಗ ಹೋಗುತ್ತೇನೆ ಎನ್ನುತ್ತಿದ್ದಾರೆ. ಇದು ಹಿಂದೂ ಸಮಾಜದ ತಾಕತ್ತು, ಧಮ್ ಎಂದು ಹೆಗಡೆ ಹೇಳಿದರು.
ಇದನ್ನೂ ಓದಿ: ಅನಂತ ಕುಮಾರ ಹೆಗ್ಗಡೆಯವರಿಂದ ಉತ್ತಮ ಸಂಸ್ಕೃತಿ ನೀರೀಕ್ಷಿಸಲು ಸಾಧ್ಯವಿಲ್ಲ : ಸಿಎಂ ಸಿದ್ದರಾಮಯ್ಯ
ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಅವರು, ರಾಜಕೀಯ ಉದ್ದೇಶದಿಂದ ಕಾರವಾರ ಸಂಸದ ಅನಂತಕುಮಾರ ಹೆಗ್ಡೆಯವರು ರಾಜ್ಯದ ಮುಖ್ಯಮಂತ್ರಿಗಳಿಗೆ ಅಶ್ಲೀಲ ಪದಗಳನ್ನು ಬಳಸಿದ್ದರೆ, ಆ ಭಾಷೆ ಅವರ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಕೂಡಲಸಂಗಮ ಹೆಲಿಪ್ಯಾಡ್ ನಲ್ಲಿ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದರು. ಕಾರವಾರ ಸಂಸದ ಅನಂತಕುಮಾರ ಹೆಗ್ಡೆಯವರು ಅಯೋಧ್ಯೆ ಕಾರ್ಯಕ್ರಮಕ್ಕೆ ಆಹ್ವಾನವಿದ್ದರೂ ಮುಖ್ಯಮಂತ್ರಿಗಳು ತೆರಳುತ್ತಿಲ್ಲವೆಂದು ಏಕವಚನದಲ್ಲಿ ಆರೋಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಇಂತಹ ಹೇಳಿಕೆಗಳು ಅವರ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಕೇಂದ್ರದ ಮಂತ್ರಿಯಾಗಿದ್ದಾಗ, ಸಂವಿಧಾನವನ್ನೇ ಬದಲಾಯಿಸುತ್ತೇನೆ ಎಂದು ಹೇಳಿದ್ದ ಅನಂತ ಕುಮಾರ್ ಹೆಗ್ಡೆಯವರಿಂದ ಉತ್ತಮ ಸಂಸ್ಕೃತಿಯನ್ನು ಅಪೇಕ್ಷಿಸಲು ಸಾಧ್ಯವಿಲ್ಲ. ಅವರ ಭಾಷೆ ಸುಸಂಸ್ಕೃತವಾಗಿಲ್ಲ. ಈ ಭಾಷೆ ಅವರ ಘನತೆಗೆ ಕುಂದು ಬರುತ್ತದೆ ಎಂದು ತಿಳಿಸಿದರು.