ಬೆಂಗಳೂರು: ರಾಜಾಜಿನಗರದ ರಾಜ್ ಕುಮಾರ್ ರಸ್ತೆಯಲ್ಲಿರುವ ಜೆಟ್ ಲ್ಯಾಗ್ ಪಬ್ ಎಂಬ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ʻಕಾಟೇರʼ ಚಿತ್ರತಂಡ ಸಕ್ಸೆಸ್ ಪಾರ್ಟಿಯನ್ನು ಆಯೋಜಿಸಲಾಗಿತ್ತು.
ಪಾರ್ಟಿ ಸಮಯ ಮೀರಿದ್ದಾರೆ ಎಂದು ಅಬಕಾರಿ ಕಾಯಿದೆಯಡಿ ಕೇಸು ದಾಖಲಾಗಿತ್ತು.ಈ ಆರೋಪದ ಮೇಲೆ ಬೆಂಗಳೂರಿನ ಸುಬ್ರಹ್ಮಣ್ಯನಗರ ಪೊಲೀಸರು ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.
ಏನಿದು ಪ್ರಕರಣ?
ಕಳೆದ ಜನವರಿ 3ರಂದು ರಾತ್ರಿ ಸೌಂದರ್ಯ ಜಗದೀಶ್ ಒಡೆತನದ ಜೆಟ್ ಲ್ಯಾಗ್ ಪಬ್‌ನಲ್ಲಿ ʻಕಾಟೇರʼ ಸಕ್ಸೆಸ್ ಪಾರ್ಟಿ ನಡೆದಿತ್ತು. ಖ್ಯಾತ ನಟ-ನಟಿಯರು, ನಿರ್ಮಾಪಕರು ಸೇರಿದಂತೆ ಹಲವಾರು ಸಿನಿಮಾ ಸೆಲೆಬ್ರೆಟಿಗಳು ಭಾಗಿಯಾಗಿದ್ದರು.
ರಾತ್ರಿ 10 ಗಂಟೆ ಬಳಿಕ ಆರಂಭವಾಗಿದ್ದ ಪಾರ್ಟಿ ನಿಯಮ ಪ್ರಕಾರ ಪ್ರಕಾರ ರಾತ್ರಿ 1 ಗಂಟೆಗೆ ಮುಗಿಯಬೇಕಾಗಿತ್ತು. ಆದರೆ, ಪೊಲೀಸರನ್ನು ಕೇರ್ ಮಾಡದ ಪಬ್ ಮಾಲೀಕರು ಹಾಗೂ ಅಲ್ಲಿನ ಸಿಬ್ಬಂದಿ ಸೆಲೆಬ್ರಿಟಿಗಳಿಗೆ ಮುಂಜಾನೆವರೆಗೂ ಪಾರ್ಟಿ ಮಾಡಲು ಅವಕಾಶ ಮಾಡಿಕೊಟ್ಟಿದ್ದರು. ನಿಜವೆಂದರೆ, ರಾತ್ರಿ ಒಂದು ಗಂಟೆ ಬಳಿಕವೂ ಪಾರ್ಟಿ ಮುಂದುವರಿಸಿದ್ದನ್ನು ಅವತ್ತೇ ಪೊಲೀಸರು ಪ್ರಶ್ನೆ ಮಾಡಿದ್ದರು.
ಸ್ಥಳಕ್ಕೆ ಹೋಗಿದ್ದ ಪೊಲೀಸರು ಪಬ್ ಕ್ಲೋಸ್ ಮಾಡುವಂತೆ ಸೂಚಿಸಿದ್ದರು. ಆದರೆ, ಅದಕ್ಕೆ ಕೇರ್ ಮಾಡದ ಪಬ್ ಮಾಲೀಕರು ಸೆಲೆಬ್ರೆಟಿಗಳಿಗೆ ತುಂಡು ಗುಂಡು ಸಪ್ಲೈ ಮಾಡಿ ಮೋಜು ಮಸ್ತಿ ಮಾಡಲು ಅವಕಾಶ ನೀಡಿದ್ದರು. ಬಳಿಕ ಮುಂಜಾನೆ ಐದು ಗಂಟೆ ಸುಮಾರಿಗೆ ದಾಳಿ ಮಾಡಿದ ಪೊಲೀಸರು ಪಬ್ ಮಾಲೀಕರಾದ ಶಶಿರೇಖಾ ಜಗದೀಶ್ ಹಾಗೂ ಪಬ್ ಕ್ಯಾಶಿಯರ್ ಪ್ರಕಾಶ್ ವಿರುದ್ಧ ಕೆಪಿ. ಆಕ್ಟ್ ಹಾಗೂ ಅಬಕಾರಿ ಕಾಯಿದೆಯಡಿ ಕೇಸು ದಾಖಲಿಸಿದ್ದರು.
ಪ್ರಕರಣ ಸಂಬಂಧ ಪಬ್ ನಲ್ಲಿರುವ ಸಿಸಿಟಿವಿ ಡಿವಿಆರ್ ವಶಪಡಿಸಿಕೊಂಡು ವಿಚಾರಣೆಗೆ ಹಾಜರಾಗುವಂತೆ ಪಬ್ ಮಾಲೀಕ ಹಾಗೂ ಕ್ಯಾಶಿಯರ್‌ಗೆ ಸುಬ್ರಮಣ್ಯ ನಗರ ಪೊಲೀಸರು ನೊಟೀಸ್ ನೀಡಿದ್ದರು. ಅವರು ನೀಡಿದ ದಾಖಲೆಗಳ ಆಧಾರದಲ್ಲಿ ಪ್ರಮುಖ ಸೆಲೆಬ್ರಿಟಿಗಳಿಗೆ ನೋಟಿಸ್ ಜಾರಿ ಮಾಡಲಾಗಿತ್ತು.
ನಟ ದರ್ಶನ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಿರ್ದೇಶಕ ತರುಣ್ ಸುಧೀರ್, ಸಂಗೀತ ನಿರ್ದೇಶಕ ಹರಿಕೃಷ್ಣ, ನಟರಾದ ನಿನಾಸಂ ಸತೀಶ್, ಡಾಲಿ ಧನಂಜಯ್, ಅಭಿಷೇಕ್ ಅಂಬರೀಶ್ ಹಾಗೂ ಚಿಕ್ಕಣ್ಣ ಅವರಿಗೆ ಪ್ರಧಾನವಾಗಿ ನೋಟಿಸ್ ಜಾರಿ ಮಾಡಲಾಗಿತ್ತು.