ತುಮಕೂರು : 19 ವರ್ಷಗಳ ಹಿಂದೆ ತಾಲ್ಲೂಕಿನ ವೆಂಕಟಮ್ಮನಹಳ್ಳಿಯಲ್ಲಿ ಸರ್ಕಾರಿ ಶಾಲೆಯಲ್ಲಿ ನಕ್ಸಲರು ನಡೆಸಿದ್ದ ಪೊಲೀಸ್ ಹತ್ಯಾಕಾಂಡ ಪ್ರಕರಣ ಸಂಬಂಧ ಮಹಿಳೆ ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಗಂತಿಮೇರಿಯ ನಾಗರಾಜು, ಧರ್ಮಾವರಂನ ಪದ್ಮ, ರಾಮಗಿರಿ ತಲ್ಲಿಮಡುಗುವಿನ ಬೋಯ ಓಬಳೇಶ್, ರಾಮಮೋಹನ್ ಮತ್ತು ಆಂಜನೇಯುಲು ಅವರನ್ನು ಆಂಧ್ರಪ್ರದೇಶದಲ್ಲಿ ಬಂಧಿಸಿ ಕರೆ ತಂದಿದ್ದಾರೆ.
ಭಾರಿ ಭದ್ರತೆಯ ನಡುವೆ ಪೊಲೀಸರು ಆರೋಪಿಗಳನ್ನು ಪಾವಗಡ ಠಾಣೆಗೆ ಕರೆ ತಂದು ರಾತ್ರಿವರೆಗೆ ಪ್ರಶ್ನಿಸಿದ್ದಾರೆ. ಠಾಣೆಯ ಮುಖ್ಯ ಗೇಟ್‌ಗೆ ಬೀಗ ಹಾಕಿ, ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ ಎನ್ನಲಾಗಿದ್ದು, ಇಂದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಜಾಮೀನು ರಹಿತ ವಾರಂಟ್
ಇನ್ನೂ ವೆಂಕಟಮ್ಮನಹಳ್ಳಿ ಪೊಲೀಸ್ ಹತ್ಯಾಕಾಂಡ ಪ್ರಕರಣದ ಕುರಿತು ಪಾವಗಡ ಮತ್ತು ಮಧುಗಿರಿ ನ್ಯಾಯಾಲಯದಲ್ಲಿ ಇನ್ನೂ ವಿಚಾರಣೆ ನಡೆಯುತ್ತಿದೆ. ಬಹುತೇಕ ಆರೋಪಿಗಳ ವಿರುದ್ಧ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿದೆ. ಕೆಲವು ಆರೋಪಿಗಳು ಆಂಧ್ರಪ್ರದೇಶದ ವಿವಿಧೆಡೆ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ.
ಪೊಲೀಸರು ಆರೋಪಿಗಳನ್ನು ಹಂತ ಹಂತವಾಗಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುತ್ತಿದ್ದಾರೆ ಎನ್ನಲಾಗಿದ್ದು, ಈ ಐವರು ಆರೋಪಿಗಳು ಕೋರ್ಟ್ ಹಾಜರಾಗದ ಹಿನ್ನೆಲೆ ಬಂಧನ ಮಾಡಲಾಗಿದೆ ಎನ್ನಲಾಗಿದೆ.